ಒಂದು ತಿಂಗಳ ನಂತರ ಪೊಲೀಸರ ಬಲೆಗೆ ಬಿದ್ದ ಸೂಪರ್ ಕಾರು
ಬೆಂಗಳೂರು ಸಿಟಿ ಪೊಲೀಸರು ಇತ್ತೀಚೆಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಹಳದಿ ಬಣ್ಣದ ಲ್ಯಾಂಬೊರ್ಗಿನಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕಳೆದ ಒಂದು ತಿಂಗಳಿನಿಂದ ಈ ಸೂಪರ್ ಕಾರ್ ಅನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದರು.

ಒಂದು ತಿಂಗಳ ಪ್ರಯತ್ನದ ನಂತರ ಗ್ಯಾರೇಜ್ ನಿಂದ ಈ ಕಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹಳದಿ ಬಣ್ಣದ ಈ ಲ್ಯಾಂಬೊರ್ಗಿನಿ ಗಲಾರ್ಡೋ ಕಾರು ಹೊಂದಿದ್ದ ಎಂಹೆಚ್ 02 ಎಂಬಿ 9000 ರಿಜಿಸ್ಟರ್ ನಂಬರ್ ನಕಲಿ ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರಿಗಾಗಿ ಶೋಧ ನಡೆಸುತ್ತಿದ್ದರು.

ಈ ಲ್ಯಾಂಬೊರ್ಗಿನಿ ಕಾರು ಹಲವಾರು ಬಾರಿ ಬೆಂಗಳೂರಿನ ಪಶ್ಚಿಮ ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಕಾಣಿಸಿಕೊಂಡಿತ್ತು. ಈ ಕಾರ್ ಅನ್ನು ಗ್ಯಾರೇಜ್‌ನ ಹೊರಗೆ ನಿಲ್ಲಿಸಲಾಗಿತ್ತು. ಆ ಗ್ಯಾರೇಜ್ ನಲ್ಲಿ ಈ ಕಾರಿನ ಬಣ್ಣ ಬದಲಿಸುವ ಪ್ರಯತ್ನ ನಡೆದಿತ್ತು.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರಿನ ಮಾಲೀಕನನ್ನು ಕರೆದು ಕಾರಿನ ದಾಖಲೆಗಳನ್ನು ತರುವಂತೆ ಹೇಳಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಈ ಕಾರು ನಕಲಿ ನಂಬರ್ ಪ್ಲೇಟ್ ಹೊಂದಿರುವುದು ಕಂಡು ಬಂದಿದೆ.

ಇದರ ಜೊತೆಗೆ ಮುಂಬೈ ಆರ್‌ಟಿಒ ಸಹ ತಮ್ಮ ದಾಖಲೆಗಳಲ್ಲಿ ಈ ನಂಬರಿನ ಯಾವುದೇ ವಾಹನವಿಲ್ಲ ಎಂದು ದೃಢಪಡಿಸಿದೆ. ಇದರ ನಂತರ, ಪೊಲೀಸರು ಈ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಿದ್ದಾರೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

2008ರಲ್ಲಿ ದೆಹಲಿಯಲ್ಲಿ ಈ ಕಾರ್ ಅನ್ನು ಮತ್ತೊಂದು ನಂಬರ್ ಪ್ಲೇಟ್ ನೊಂದಿಗೆ ರಿಜಿಸ್ಟರ್ ಮಾಡಿರುವುದು ಕಂಡು ಬಂದಿದೆ. ನಕಲಿ ನಂಬರ್ ಪ್ಲೇಟ್ ಗಳನ್ನು ಈ ಕಾರಿನಲ್ಲಿ ಯಾವ ಕಾರಣಕ್ಕೆ ಬಳಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಪೊಲೀಸರು ಲ್ಯಾಂಬೊರ್ಗಿನಿಯಂತಹ ದುಬಾರಿ ಕಾರುಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸುವುದಿಲ್ಲ. ಇದರಿಂದಾಗಿ ಈ ರೀತಿಯ ಸೂಪರ್ ಕಾರುಗಳಲ್ಲಿ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕರ್ನಾಟಕದಲ್ಲಿ ಸೂಪರ್ ಕಾರುಗಳ ರಿಜಿಸ್ಟ್ರೇಷನ್ ಗೆ ಅತಿ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ. ಈ ಕಾರಣಕ್ಕೆ ಸೂಪರ್ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ಹೊರ ರಾಜ್ಯಗಳಲ್ಲಿ ರಿಜಿಸ್ಟರ್ ಮಾಡಿಸಿ ನಂತರ ಕರ್ನಾಟಕದಲ್ಲಿ ಬಳಸುತ್ತಾರೆ.

ಆದರೆ ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಇದು ಆಕ್ರಮವಾಗಿದ್ದು, ಹೀಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯಕ್ಕೆ ವಶಕ್ಕೆ ಪಡೆಯಲಾಗಿರುವ ಕಾರು ಆರ್‌ಟಿಒದಲ್ಲಿದೆ. ಈ ಕಾರಿನ ಮಾಲೀಕನ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications