Bengaluru 2nd Airport: ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.. ಬಿಗ್ ಅಪ್ಡೇಟ್
ಬೆಂಗಳೂರು (Bengaluru) ಐಟಿ ಹಬ್ ಆಗಿದ್ದು, ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಮೂಲಕ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಮುಂಬರುವ ವರ್ಷಗಳಲ್ಲಿ ಆ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗುವ ಸಾಧ್ಯತೆಯಿದೆ. ಪ್ರಯಾಣಿಕರ ನಿರ್ವಹಣೆಗೆ ಎರಡನೇ ವಿಮಾನ ನಿಲ್ದಾಣವು (Second Airport) ತೀರಾ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯಪ್ರವೃತವಾಗಿದೆ.
ತಮಿಳುನಾಡು ಸರ್ಕಾರ ಹೊಸೂರು ಬಳಿ, ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಿದೆ. ಸದ್ಯ ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ರಾಜ್ಯ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಕುರಿತಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, 'ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯು ಸರಿಯಾದ ಹಾದಿಯಲ್ಲಿದೆ. 2033ರ ವೇಳೆಗೆ ಕಾರ್ಯಾರಂಭ ಮಾಡಲಿದೆ' ಎಂದು ಹೇಳಿದ್ದಾರೆ.

'ನಮ್ಮ ಯೋಜನೆಯಲ್ಲಿ ಯಾವುದೇ ಬದಲಾವಣೆ ತರುವ ಉದ್ದೇಶವಿಲ್ಲ. ನಾವು ಈಗಿನಿಂದಲೇ ತಯಾರಿಯನ್ನು ಪ್ರಾರಂಭಿಸಿದರೆ, ಎರಡನೇ ವಿಮಾನ ನಿಲ್ದಾಣವು 2030ರ ವೇಳೆಗೆ ಸಿದ್ದಗೊಳ್ಳಲಿದೆ. 2033 ರಿಂದ ಕಾರ್ಯಾಚರಣೆಯು ಆರಂಭವಾಗಲಿದೆ. ಮುಂದಿನ ವಾರಗಳಲ್ಲಿ ಕೇಂದ್ರ ಸರ್ಕಾರವು ಒಪ್ಪಿಗೆ ನೀಡುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.
ಇತ್ತೀಚೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧಿಕಾರಗಳ ತಂಡವು, ರಾಜ್ಯ ಸರ್ಕಾರವು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದ 3 ಸ್ಥಳಗಳನ್ನು ಪರಿಶೀಲಿಸಿತ್ತು. ಈ ಯೋಜನೆಗಾಗಿ ಕನಕಪುರ ರಸ್ತೆಯ ಹಾರೋಹಳ್ಳಿ ಸಮೀಪ 4,800 ಹಾಗೂ 5,000 ಎಕರೆ, ನೆಲಮಂಗಲದ ಕುಣಿಗಲ್ ರಸ್ತೆಯ ಹತ್ತಿರ 5,200 ಎಕರೆ ಜಾಗವನ್ನು ಗುರುತಿಸಲಾಗಿತ್ತು.
ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವ ನಿಯಮವಿದೆ:
ಎಎಐ ಪ್ರಕಾರ, ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ನಿಲ್ದಾಣದ 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅವಕಾಶವಿಲ್ಲ. ಆಗೊಮ್ಮೆ, ಮತ್ತೊಂದು ವಿಮಾನ ನಿಲ್ದಾಣವನ್ನು ಆರಂಭ ಮಾಡಿದರೆ, ಎರಡು ವಿಮಾನ ನಿಲ್ದಾಣಗಳ ನಡುವೆ ಏರ್ ಟ್ರಾಫಿಕ್ ತೊಂದರೆ ಉಂಟಾಗುತ್ತದೆ.
ಶಿವಮೊಗ್ಗ ವಿಮಾನದಲ್ಲಿ ಕಾರ್ಯಾಚರಣೆ ಆರಂಭಗೊಂಡು 2 ವರ್ಷವಾಯ್ತು:
ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ವಿಮಾನ ಸಂಚಾರ ಪ್ರಾರಂಭಗೊಂಡು ಆಗಸ್ಟ್ 31ಕ್ಕೆ ಎರಡು ವರ್ಷಗಳಾಗಿವೆ. ಇದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್ಐಐಡಿಸಿ) ನಿರ್ವಹಿಸುವ ರಾಜ್ಯದ ಏಕೈಕ ವಿಮಾನ ನಿಲ್ದಾಣವೆಂಬ ಹಿರಿಮೆಗೂ ಪಾತ್ರವಾಗಿದೆ.
ಈ ವಿಮಾನ ನಿಲ್ದಾಣವು 2,400 ವಿಮಾನಯಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿದ್ದಾರೆ. ಇಂಡಿಗೋ (IndiGo), ಸ್ಟಾರ್ ಏರ್ (Star Air) ಹಾಗೂ ಸ್ಪೈಸ್ ಜೆಟ್ (SpiceJet) ಸಂಸ್ಥೆಯ ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ತಿರುಪತಿ ಹಾಗೂ ಗೋವಾಗಳಿಗೂ ಸಂಪರ್ಕ ಕೊಂಡಿಯಾಗಿವೆ.
ದೇಶದ 148ನೇ ವಿಮಾನ ನಿಲ್ದಾಣವಾಗಿ 'ಶಿವಮೊಗ್ಗ ವಿಮಾನ ನಿಲ್ದಾಣ' ಸೇರ್ಪಡೆಗೊಂಡಿತು. 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು. ಇಲ್ಲಿ ಬೋಯಿಂಗ್ 737 ಮತ್ತು ಏರ್‌ಬಸ್ ಎ320 ನಂತಹ ಬೃಹದ ಗಾತ್ರದ ವಿಮಾನಗಳನ್ನು ಸುಲಭವಾಗಿ ಇಳಿಸಬಹುದು.
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೂ ಹೆಚ್ಚಿನ ಅನುಕೂಲವಾಗಲಿದೆ. ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಶಿವಮೊಗ್ಗದಿಂದ 8.8 ಕಿಲೋಮೀಟರ್ ಹಾಗೂ ಭದ್ರಾವತಿಯಿಂದ 8.2 ಕಿಲೋಮೀಟರ್ ದೂರದಲ್ಲಿದೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ, 662 ಎಕರೆಯಲ್ಲಿ ಸರಿ ಸುಮಾರು ರೂ.450 ಕೋಟಿ ವೆಚ್ಚದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ.


Click it and Unblock the Notifications








