ಬೆಂಗಳೂರು: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಅನಾವರಣ.. ಮಧ್ಯಮ ವರ್ಗದವರು ಓಡಾಡಬಹುದು!
ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML), ತಯಾರಿಕಾ ಘಟಕದಲ್ಲಿ ಸಿದ್ಧಪಡಿಸಲಾದ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ (Vande Bharat Sleeper) ರೈಲನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಭಾನುವಾರ ಅನಾವರಣಗೊಳಿಸಿದರು. ಈ ವೇಳೆ, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ಸೇರಿದಂತೆ ರೈಲ್ವೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು. ಮುಂದಿನ 3 ತಿಂಗಳಲ್ಲಿ ಈ ರೈಲು ಕಾರ್ಯಾಚರಣೆಗೆ ಬರುವ ನಿರೀಕ್ಷೆಯಿದೆ. ಪ್ರಾಯೋಗಿಕ ಸಂಚಾರ ಶುರುವಾಗುವ ಮುನ್ನ 10 ದಿನಗಳ ಕಾಲ ಇದರ ಕೋಚ್‌ಗಳನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, 'ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಚೇರ್ ಕಾರ್ ಬಳಿಕ, ರೈಲ್ವೆ ಇಲಾಖೆಯೂ ವಂದೇ ಭಾರತ್ ಸ್ಲೀಪರ್‌ನ್ನು (Vande Bharat Sleeper) ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿತ್ತು. ಸದ್ಯ, ಈ ರೈಲಿನ ತಯಾರಿಕೆ ಕಾರ್ಯಗಳು ಮುಕ್ತಾಯಗೊಂಡಿದ್ದು, ಬಿಎಂಎಲ್ ಉತ್ಪಾದನಾ ಘಟಕದಿಂದ ತಾಂತ್ರಿಕ ಪರೀಕ್ಷೆಗೆ ಹೊರಡಲಿದೆ' ಎಂದು ಹೇಳಿದ್ದಾರೆ.

ನೂತನ ವಂದೇ ಭಾರತ್ ಸ್ಲೀಪರ್ ಗಂಟೆಗೆ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದೆ. 16 ಕೋಚ್‌ಗಳನ್ನು ಹೊಂದಿರುವ ಈ ರೈಲು, ರಾತ್ರಿಯ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ. 800 ಕಿಲೋಮೀಟರ್‌ನಿಂದ 1,200 ಕಿಲೋಮೀಟರ್ ದೂರದ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಲಿದೆ. ಈ ರೈಲಿನಲ್ಲಿ ಆಮ್ಲಜನಕ ಮಟ್ಟವು ಉತ್ತಮವಾಗಿರಲಿದ್ದು, ವೈರಸ್‌ಗಳು ಹರಡದಂತೆ ರಕ್ಷಣೆ ಒದಗಿಸುತ್ತದೆ.
ವಂದೇ ಭಾರತ್ ಸ್ಲೀಪರ್‌ನಲ್ಲಿ ಮಧ್ಯಮ ವರ್ಗದ ಜನರು ಆರಾಮದಾಯಕವಾಗಿ ಪ್ರಯಾಣಿಸಬಹುದು. ಟಿಕೆಟ್ ದರಗಳು ರಾಜಧಾನಿ ಎಕ್ಸ್‌ಪ್ರೆಸ್‌ನಂತೆಯೇ ಇರಲಿದೆ ಎಂದು ವರದಿಯಾಗಿದೆ. ಈ ರೈಲು ಜಿಎಫ್‌ಆರ್‌ಪಿ ಪ್ಯಾನೆಲ್‌ಗಳು, ಸ್ಪೆಷಲ್ ಬರ್ತ್‌ಗಳು, ಯುಎಸ್‌ಬಿ ಚಾರ್ಜಿಂಗ್, ರೀಡಿಂಗ್ ಲೈಟ್ ಹಾಗೂ ದೊಡ್ಡದಾಗಿರುವ ಲಗೇಜ್ ರೂಮ್ ಕೂಡ ಹೊಂದಿದೆ.

ಇದರೊಟ್ಟಿಗೆ ಅತ್ಯುತ್ತಮ ಒಳಭಾಗದ ವಿನ್ಯಾಸವನ್ನು ಒಳಗೊಂಡಿದ್ದು, ವಿಶೇಷಚೇತನರು ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗುವಂತೆ ಶೌಚಾಲಯಗಳನ್ನು (ಟಾಯ್ಲೆಟ್ಸ್) ಪಡೆದಿದೆ. ಅದನ್ನು ವಾಸನೆ ಮುಕ್ತವಾಗಿರುವಂತೆ ಸಿದ್ದಪಡಿಸಲಾಗಿದೆ. ಸ್ವಯಂ ಚಾಲಿತ ಬಾಗಿಲು (ಆಟೋಮೆಟಿಕ್ ಡೋರ್‌ಗಳು), ಮೊದಲ ದರ್ಜೆ ಎಸಿ ಕೋಚ್‌ನಲ್ಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಯೂ ಇದೆ.
ಗರಿಷ್ಠ ಸುರಕ್ಷತೆ ಹೊಂದಿರುವ ಈ ರೈಲಿನ ಕೋಚ್‌ಗಳ ನಡುವೆ ಸೆನ್ಸಾರ್ ಆಧಾರಿತ ಬಾಗಿಲುಗಳು, ಅಗ್ನಿ ನಿರೋಧಕ ವ್ಯವಸ್ಥೆ, ಲೋಕೋ ಪೈಲಟ್ ಸಿಬ್ಬಂದಿಯ ಅನುಕೂಲಕ್ಕಾಗಿ ಶೌಚಾಲಯ, ಪ್ರಯಾಣಿಕರಿಗೆ ಮಾಹಿತಿ ಒದಗಿಸುವ ಫಲಕವನ್ನು (ಸ್ಕ್ರೀನ್) ಹೊಂದಿದೆ. ಪ್ಯಾಂಟ್ರಿ ವ್ಯವಸ್ಥೆಯೂ ಉತ್ತಮವಾಗಿದ್ದು, ಓವೆನ್ ಹಾಗೂ ರೆಫ್ರಿಜರೇಟರ್ ಅನ್ನು ಪಡೆದಿದೆ.

ಮೊದಲ ವಂದೇ ಭಾರತ್ ಸ್ಲೀಪರ್ ರೈಲಿನ ಪರೀಕ್ಷೆಗಳು ಮುಕ್ತಾಯಗೊಂಡ ನಂತರ, ಉಳಿದ ರೈಲುಗಳು ತಯಾರಿಕೆ ಪ್ರಾರಂಭವಾಗಲಿದೆ ಎಂಬ ವಿವರಗಳು ಲಭ್ಯವಾಗಿವೆ. ಮುಂದಿನ ವರ್ಷದಿಂದ ಹಲವು ವಂದೇ ಭಾರತ್ ಸ್ಲೀಪರ್‌ಗಳು ಹಳಿಗೆ ಬರುವ ನಿರೀಕ್ಷೆಯಿದೆ. ವಿಮಾನದಂತಹ ಅತ್ಯಾಧುನಿಕ ಸೌಲಭ್ಯ ಪಡೆದಿರುವ ಈ ರೈಲುಗಳು, ಪ್ರಯಾಣಿಕರಿಗೆ ನಿಶ್ಚಿತವಾಗಿ ಸುಖಕರವಾದ ಪ್ರಯಾಣವನ್ನು ಒದಗಿಸಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications