Flyover: ಗುಡ್ ನ್ಯೂಸ್.. ಬೆಂಗಳೂರು - ತುಮಕೂರು ಫ್ಲೈಓವರ್ ಮೇಲೆ ಕೆಲವೇ ದಿನಗಳಲ್ಲಿ ಬಸ್ ಸಂಚಾರ!
ಬಹುತೇಕ ಕರ್ನಾಟಕದ ಜಿಲ್ಲೆಗಳನ್ನು ಸಂಪರ್ಕಿಸುವ ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover), ಸುಮಾರು 2 ವರ್ಷಗಳ ನಂತರ ಬಸ್ ಸೇರಿದಂತೆ ಭಾರೀ ವಾಹನ (Heavy vehicles) ಸಂಚಾರಕ್ಕೆ ತೆರೆದುಕೊಳ್ಳುವ ಸಾಧ್ಯತೆಯಿದೆ. ಫೆಬ್ರವರಿ ಆರಂಭದಲ್ಲಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬಹುದು.
15 - ಮೀಟರ್ ಅಗಲ, 4.2 - ಕಿಮೀ ಉದ್ದವಿರುವ ಈ ಫ್ಲೈಓವರ್, ಪೀಣ್ಯದಲ್ಲಿ ಆರಂಭವಾಗಿ ತುಮಕೂರು ರಸ್ತೆಯ ನಾಗಸಂದ್ರದಲ್ಲಿ ಕೊನೆಗೊಳ್ಳುತ್ತದೆ. 2021ರ ಡಿಸೆಂಬರ್ ನಲ್ಲಿ 8ನೇ ಮೈಲಿ ಹತ್ತಿರ ಮೇಲ್ಸೇತುವೆಯ ಕೆಲವೊಂದು ಪ್ಲಿಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಕಾರಣಕ್ಕೆ ಎಲ್ಲ ವಿಧದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಕೆಲವು ತಿಂಗಳ ಬಳಿಕ, ದ್ವಿಚಕ್ರ ವಾಹನ, ಕಾರು ಒಳಗೊಂಡಂತೆ ಲಘು ವಾಹನಗಳ ಓಡಾಡಕ್ಕೆ ಅನುಮತಿ ಕೊಡಲಾಗಿತ್ತು.

ಆದರೆ ಬಸ್ ಸೇರಿದಂತೆ ಭಾರೀ ವಾಹನಗಳಿಗೆ ನಿರ್ಬಂಧವನ್ನು ಹಾಗೆಯೇ ಮುಂದುವರಿಸಲಾಗಿತ್ತು. ಇದು ಗಂಭೀರ ಸಮಸ್ಯೆಯನ್ನು ತಂದೊಡ್ಡಿತು. ವಾರಾಂತ್ಯದ ಹಾಗೂ ಹಬ್ಬಗಳ ಋತುವಿನಲ್ಲಿ ಮೇಲ್ಸೇತುವೆ ಕೆಳಗೆ ವಾಹನ ಸವಾರರು, ಗಂಟೆಗಟ್ಟಲೇ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಫ್ಲೈಓವರ್ ಬಲಪಡಿಸಲು ರೂ.38.5 ಕೋಟಿ ವೆಚ್ಚದಲ್ಲಿ ಕೇಬಲ್ ಅವಳಡಿಕೆ ಕಾಮಗಾರಿಯನ್ನು ಶುರು ಮಾಡಿತ್ತು.
ಇದೇ ತಿಂಗಳ ಆರಂಭದಲ್ಲಿ ದುರಸ್ತಿ ಕೆಲಸಗಳು ಮುಕ್ತಾಯಗೊಂಡಿದ್ದು, ಜನವರಿ 16ರ ರಾತ್ರಿ 11ರಿಂದ ಜನವರಿ 19ರ ಬೆಳಗ್ಗೆ 11ರವರೆಗೆ ಲೋಡ್ ಟೆಸ್ಟ್ (ಭಾರ ಪರೀಕ್ಷೆ) ನಡೆಸಲು ಮೇಲ್ಸೇತುವೆ ಮೇಲೆ ಎಲ್ಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ಟೆಸ್ಟ್ ಸಂದರ್ಭದಲ್ಲಿ ತಲಾ 32 ಟನ್ ಭಾರ ಹೊತ್ತಿರುವ 8 ಟ್ರಕ್‌ಗಳನ್ನು 48 ಗಂಟೆಗಳಿಗೂ ಹೆಚ್ಚು ಕಾಲ ಫ್ಲೈಓವರ್‌ನ 105-106, 117-118 ಪಿಲ್ಲರ್ ಸಂಪರ್ಕಿಸುವ ಸ್ಥಳದಲ್ಲಿ ನಿಲ್ಲಿಸಲಾಗಿತ್ತು.

ಈ ಬಗ್ಗೆ ತಜ್ಞರ ತಂಡದ ಮುಖ್ಯಸ್ಥರಾಗಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಚಂದ್ರ ಕಿಶನ್ ಜೆ.ಎಂ ಪ್ರತಿಕ್ರಿಯೆ ನೀಡಿದ್ದಾರೆ. 'ಲೋಡ್ ಟೆಸ್ಟ್ (ಭಾರ ಪರೀಕ್ಷೆ) ಫಲಿತಾಂಶಗಳು ತೃಪ್ತಿಕರವಾಗಿವೆ. ಮುಂದಿನ ಕ್ರಮ ಕೈಗೊಳ್ಳುವಂತೆ ಎನ್‌ಎಚ್‌ಎಐ ಪ್ರಧಾನ ಕಛೇರಿಗೆ ವರದಿಯನ್ನು ಕಳುಹಿಸಲಾಗಿದೆ' ಎಂದು ಹೇಳಿದ್ದಾರೆ.
'ತಜ್ಞರ ಸಮಿತಿಯ ಸದಸ್ಯರು, ಎನ್‌ಎಚ್‌ಎಐ ಅಧಿಕಾರಿಗಳು ಫೆಬ್ರವರಿ 2ರಂದು ಸಭೆ ಸೇರಿ ಚರ್ಚಿಸಲಿದ್ದು, ಆ ಬಳಿಕ ಮೇಲ್ಸೇತುವೆ ಮೇಲೆ ಭಾರೀ ವಾಹನಗಳ ಸಂಚಾರವನ್ನು ಅನುಮತಿಸಲು ತೀರ್ಮಾನ ಕೈಗೊಳ್ಳುವ ನೀರಿಕ್ಷೆಯಿದೆ' ಎಂದು ಪ್ರೊ.ಚಂದ್ರ ಕಿಶನ್ ತಿಳಿಸಿದ್ದಾರೆ. ಬೆಂಗಳೂರು ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ, ವಿಲಾಸ್ ಪಿ ಬ್ರಹ್ಮಂಕರ್ ಅವರು, ಪರೀಕ್ಷೆಯ ಫಲಿತಾಂಶಗಳು ಧನಾತ್ಮಕವಾಗಿದೆ. ಶೀಘ್ರ ಫ್ಲೈಓವರ್ ಭಾರೀ ವಾಹನಗಳಿಗೆ ತೆರೆಯಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಬೆಂಗಳೂರು - ತುಮಕೂರು ಮೇಲ್ಸೇತುವೆ (Bengaluru - Tumakuru Flyover) ಮೇಲೆ ಫೆಬ್ರವರಿ ಆರಂಭದಲ್ಲಿ ಬಸ್ ಒಳಗೊಂಡಂತೆ ಭಾರೀ ವಾಹನಗಳ ಸಂಚಾರಕ್ಕೆ ಒಪ್ಪಿಗೆ ನೀಡಬಹುದು. ಇದರಿಂದ ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಗಳೂರು, ಶಿವಮೊಗ್ಗ ಸೇರಿದಂತೆ ಅರ್ಧ ಕರ್ನಾಟಕದ 14 ಜಿಲ್ಲೆಯ ಜನರಿಗೆ ದೂಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications