ಸೈಕಲ್ ಗುದ್ದಿದ ರಭಸಕ್ಕೆ ಟೊಯೊಟೊ ಕಾರಿನ ಪರಿಸ್ಥಿತಿ ಹೀಗಾ ಆಗೋದು..!
ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ದಿನಂಪ್ರತಿ ಸಾವಿರಾರು ಅಪಘಾತ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಸಂಚಾರಿ ನಿಯಮಗಳ ಉಲ್ಲಂಘನೆ ತಡೆಯಲು ಅದೆಷ್ಟೋ ಕಠಿಣ ಕಾನೂನು ಕ್ರಮ ಜಾರಿಗೆ ತಂದರೂ ಸಹ ಕೆಲವರು ಮಾತ್ರ ತಮಗೆ ಅದು ಅನ್ವಯವಾಗುವುದೇ ಇಲ್ಲ ಎನ್ನುವ ರೀತಿ ವಾಹನ ಚಾಲನೆ ಮಾಡುತ್ತಾರೆ. ಅದರ ಪರಿಣಾಮವೇ ಸಾವು-ನೋವುಗಳು ಹೆಚ್ಚುತ್ತಿವೆ.

ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿಗಳಲ್ಲೂ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ಸಂಖ್ಯೆ ನಮಗಿಂತಲೂ ತುಸು ಹೆಚ್ಚೆ ಇದೆ. ಇದೇ ಕಾರಣಕ್ಕೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯು ಭಾರತಕ್ಕಿಂತ ವಿದೇಶಿಗಳಲ್ಲಿಯೇ ತೀವ್ರವಾಗಿದ್ದು, ಮೊನ್ನೆಯಷ್ಟೇ ನಡೆದ ಸೈಕಲ್ ಮತ್ತು ಟೊಯೊಟಾ ಕರೊಲ್ಲಾ ಆಟ್ಲಿಸ್ ಕಾರು ನಡುವಿನ ಅಪಘಾತ ಪ್ರಕರಣವು ಸುದ್ದಿಯು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಅಪಘಾತಗಳು ನಡೆದ ಸಂದರ್ಭದಲ್ಲಿ ದೊಡ್ಡವಾಹನಗಳು ಗುದ್ದಿದ ರಭಸಕ್ಕೆ ಸಣ್ಣವಾಹನಗಳಲ್ಲಿ ಪ್ರಯಾಣಿಕರೇ ಹೆಚ್ಚಿನ ಮಟ್ಟದಲ್ಲಿ ಸಾವು-ನೋವುಗಳಿಗೆ ಈಡಾಗುವುದನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ಅಪಘಾತ ಪ್ರಕರಣವನ್ನು ನೋಡಿದ್ರೆ ನಿಮಗೆ ಅಚ್ಚರಿ ತರಿಸದೇ ಇರಲಾರದು.

ಸೈಕಲ್ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ!
ಹೌದು, ಈ ಅಪಘಾತ ಪ್ರಕರಣವು ನಿಮಗೆ ಅಚ್ಚರಿ ತರಿಸದೇ ಇರಲಾರದು. ಸೈಕಲ್ ಗುದ್ದಿದ ರಭಸಕ್ಕೆ ಟೊಯೊಟಾ ನಿರ್ಮಾಣದ ಐಷಾರಾಮಿ ಕಾರು ಕರೊಲ್ಲಾ ಆಟ್ಲಿಸ್ ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆಯು ದಕ್ಷಿಣ ಚೀನಾದ ಶೆನ್‌ಜೆನ್ ನಗರದಲ್ಲಿ ನಡೆದಿದೆ.

ಸಂಚಾರಿ ನಿಯಮ ಉಲ್ಲಂಘಿಸಿ ಒನ್ ವೇ ನಲ್ಲಿ ನುಗ್ಗಿಬಂದಿದ್ದ ಸೈಕಲ್ ಸವಾರನು ಟೊಯೊಟಾ ಕಾರಿನ ಬಂಪರ್‌ಗೆ ಡಿಕ್ಕಿ ಹೊಡೆದಿದ್ದು, ಕಾರಿನ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿರುವ ಭಾರೀ ಚರ್ಚೆಗೆ ಕಾರಣವಾಗಿದೆ.

ಕೇವಲ ಸೈಕಲ್ ಗುದ್ದಿದ ಪರಿಣಾಮ ಕಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹಾನಿಯಾಗಿರುವ ಬಗ್ಗೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದು, ಇದು ಪೋಟೋಶಾಪ್ ಗಿಮಿಕ್ ಅಂತೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಆದ್ರೆ ಈ ಅಪಘಾತದ ಚಿತ್ರಗಳನ್ನು ಚೀನಾ ಪೊಲೀಸರೇ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿದ್ದಾರೆ.

ಹೀಗಾಗಿ ಕರೊಲ್ಲಾ ಆಟ್ಲಿಸ್ ಕಾರು ಕಳಪೆ ಗುಣಮಟ್ಟ ಹೊಂದಿದೆ ಅಂತಾ ಕೆಲ ನೆಟ್ಟಿಗರು ಟೊಯೊಟಾ ಸಂಸ್ಥೆಯನ್ನೇ ಕಾಲೆಳೆಯುತ್ತಿದ್ದು, ಅಪಘಾತದಲ್ಲಿ ಸೈಕಲ್ ಸವಾರನಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾರಿಗೂ ಏನು ಆಗಿಲ್ಲ ಅನ್ನುವುದೇ ಸಮಾಧಾನಕರ ಸಂಗತಿ.

ಇಲ್ಲಿ ಮತ್ತೊಂದು ಮುಖ್ಯ ವಿಚಾರ ಅಂದ್ರೆ, ಸೈಕಲ್ ಗುದ್ದಿದ ರಭಸಕ್ಕೆ ಕಾರಿನ ಬಂಪರ್‌ಗೆ ಹಾನಿಯಾಗಿರುದರಲ್ಲಿ ಅಷ್ಟೇನು ಅಚ್ಚರಿ ಅಲ್ಲವೇ ಅಲ್ಲ ಅನ್ನಿಸುತ್ತೆ. ವೈಜ್ಞಾನಿಕವಾಗಿ ನೋಡುವುದಾದ್ರೆ ಅತಿ ವೇಗದಲ್ಲಿ ಬಂದ ಸೈಕಲ್ ಸವಾರನು ಯಾವುದೇ ಕಾರಿನ ಬಂಪರ್‌ಗೆ ಗುದ್ದಿದ್ದರೂ ಹೀಗೆ ಆಗಿರುತ್ತಿತ್ತು.

ಯಾಕೆಂದ್ರೆ ಸೈಕಲ್ ರಿಮ್ ಸಾಮಾನ್ಯವಾಗಿ ಉತ್ತಮ ಗುಣಮಟ್ಟವನ್ನೇ ಹೊಂದಿರುತ್ತವೆ. ಅದೇ ಕಾರಿನ ಬಂಪರ್‌ಗಳು ಮೊದಲಿನ ಹಾಗೆ ಸ್ಟೀಲ್ ಬಳಕೆಯ ಬದಲಾಗಿ ಪ್ಲಾಸ್ಟಿಕ್ ಕ್ಲ್ಯಾಡ್ ಬಳಕೆಯಿಂದಾಗಿ ಹೀಗೆ ಆಗುವುದು ಸಹಜ.

ಇಲ್ಲೂ ಕೂಡಾ ಹಾಗೆಯೇ ಆಗಿರಬಹುದು ಎನ್ನಲಾಗಿದ್ದು, ಒಟ್ಟಿನಲ್ಲಿ ಒಂದು ಅಪಘಾತವು ಸಾಮಾಜಿಕ ಜಾಣತಾಣಗಳಲ್ಲಿ ಈ ಮಟ್ಟಿಗೆ ಚರ್ಚೆ ಆಗುತ್ತೆ ಅಂದ್ರೆ ಅದು ನಿಜಕ್ಕೂ ಅಚ್ಚರಿಯ ಸಂಗತಿ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
Image Courtesy: CGTN


Click it and Unblock the Notifications