ಕೊಡಗಿನ ಕಾಪಿ ತೋಟಗಳ ನಡುವೆ ಅರಳಿದ ಕಾರು ಮ್ಯೂಸಿಯಂ
ಕಾರ್.. ಕಾರ್.. ಇಲ್ಮೋಡಿ ಕಾರ್.. ಅಂಥ ನೀವು ಈ ಅಪರೂಪದ ಕಾರು ಮ್ಯೂಸಿಯಂಗೆ ಸುತ್ತು ಹೊಡೆದ ಮೇಲೆ ಖಂಡಿತಾ ಉಸುರುತ್ತೀರಾ.. ಏಕೆಂದರೆ ಆ ಕಾರು ಮ್ಯೂಸಿಯಂ ಹಾಗೆಯೇ ಇದೆ. ಅಲ್ಲಿ ಏಳೆಂಟು ದಶಕ ಪೂರೈಸಿದ ದೇಶ ವಿದೇಶಗಳ ಕಾರು, ಬೈಕ್‍ಗಳಿವೆ. ಅದಕ್ಕಿಂತ ಹೆಚ್ಚಾಗಿ ಇಂದಿಗೂ ಅವು ಸುಸ್ಥಿತಿಯಲ್ಲಿವೆ.
Also Read: ವಿಶ್ವದ ವಿಸ್ಮಯ ವಿಂಟೇಜ್ ಕಾರು ಶೋ
ಇಷ್ಟಕ್ಕೂ ಈ ಕಾರು ಮ್ಯೂಸಿಯಂ ಇರುವುದು ಯಾವುದೋ ಪಟ್ಟಣದಲ್ಲಲ್ಲ. ಇದು ಇರುವುದು ಕೊಡಗಿನ ಕಾಪಿ ತೋಟಗಳ ನಡುವೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಕಾರು ಮ್ಯೂಸಿಯಂ ನಿರ್ಮಾಣಗೊಂಡಿರುವುದು ಕೂಡ ಸಂಘ ಸಂಸ್ಥೆಗಳಿಂದಲ್ಲ. ವ್ಯಕ್ತಿಯೊಬ್ಬರ ಹವ್ಯಾಸದ ಫಲವೇ ಕಾರು ಮ್ಯೂಸಿಯಂನ ಸೃಷ್ಟಿಗೆ ಕಾರಣವಾಗಿದೆ.

ವಿಶಿಷ್ಟ, ವಿಭಿನ್ನತೆಯ ಅಪರೂಪದ ಕಾರುಗಳ ಮ್ಯೂಸಿಯಂನ್ನು ನೋಡಬೇಕಾದರೆ ಕೊಡಗಿನ ಸಿದ್ದಾಪುರದಿಂದ 3ಕಿ.ಮೀ. ದೂರದಲ್ಲಿರುವ ಅಭ್ಯತ್‍ಮಂಗಲಕ್ಕೆ ಬರಬೇಕು. ಅಲ್ಲಿನ ನಿವಾಸಿ ಅಹಮ್ಮದ್ ಕುಟ್ಟಿಹಾಜಿಯೇ ಮ್ಯೂಸಿಯಂನ ಸೃಷ್ಟಿಕರ್ತರು.

ಸುಮಾರು 2ಎಕರೆ ವಿಸ್ತೀರ್ಣದಲ್ಲಿ ಅಹಮ್ಮದ್ ಕುಟ್ಟಿಹಾಜಿಯವರು ಕಾರು ಮ್ಯೂಸಿಯಂ ನಿರ್ಮಿಸಿದ್ದು, 1926ರಿಂದ 1965ರ ವರೆಗಿನ ವಿವಿಧ ಮಾದರಿಯ, ದೇಶ, ವಿದೇಶಗಳ ಅಪರೂಪದ ಕಾರುಗಳಿವೆ.

ಮೇಲ್ನೋಟಕ್ಕೆ ಅವುಗಳು ಪ್ರದರ್ಶನಕ್ಕಿಟ್ಟಂತೆ ಇವೆಯಾದರೂ ಅವುಗಳಲ್ಲಿ 85ಕ್ಕೂ ಹೆಚ್ಚಿನ ಕಾರುಗಳು ಇವತ್ತಿಗೂ ಸುಸ್ಥಿತಿಯಲ್ಲಿದ್ದು ಅವುಗಳಲ್ಲಿ ಕೂತು ಜಾಲಿ ರೈಡ್ ಮಾಡಬಹುದು ಎನ್ನುವುದೇ ಮ್ಯೂಸಿಯಂನ ಮತ್ತೊಂದು ವಿಶೇಷತೆಯಾಗಿದೆ.

ಇನ್ನು ದ್ವಿಚಕ್ರ ವಿಭಾಗದಲ್ಲಿ ಬೈಕ್, ಸ್ಕೂಟರ್ ಗಳಿವೆ. ಅವು ಯಾವುದೂ ಇತ್ತೀಚಿಗಿನದ್ದಲ್ಲ. ಅವುಗಳಿಗೆ ಹಲವು ದಶಕಗಳನ್ನು ಸವೆಸಿದ ಇತಿಹಾಸವಿದೆ.

ಈ ಕಾರು ಮ್ಯೂಸಿಯಂ ನಿರ್ಮಾಣವಾಗಿದ್ದು ಕೂಡ ಅಹಮ್ಮದ್ ಕುಟ್ಟಿಹಾಜಿ ಅವರ ಹವ್ಯಾಸದ ಫಲದಿಂದಾಗಿಯೇ ಎಂದರೆ ತಪ್ಪಾಗಲಾರದು.

ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸಗಳಿರುವಂತೆ ಅವರಿಗೂ ಹಳೆಯ ಕಾರುಗಳನ್ನು ನೋಡಿದಾಗಲೆಲ್ಲಾ ಅವುಗಳನ್ನು ಸಂಗ್ರಹಿಸಿಡಬೇಕೆಂಬ ಬಯಕೆ ಉಂಟಾಗಿತ್ತು.

ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದ ಅಹಮ್ಮದ್ ಕುಟ್ಟಿಯವರಿಗೆ ವಾಹನಗಳ ಬಗ್ಗೆ ಹೆಚ್ಚಿನ ಆಸಕ್ತಿ. ಹಾಗಾಗಿ ತಮಗಿದ್ದ ಸಂಪರ್ಕದಲ್ಲಿ ಹಳೆಯ ವಾಹನಗಳನ್ನು ಖರೀದಿಸಿ ಅವುಗಳನ್ನು ದುರಸ್ತಿಪಡಿಸಿ ಸಂಗ್ರಹಿಸಿಡ ತೊಡಗಿದರು.

ಇದು ಇವತ್ತು ಕಾಫಿ ತೋಟದ ನಡುವೆ ಮ್ಯೂಸಿಯಂ ನಿರ್ಮಾಣಕ್ಕೆ ಕಾರಣವಾಗಿ ಎಲ್ಲರ ಗಮನಸೆಳೆಯುವಂತೆ ಮಾಡಿದೆ.

ಕೊಡಗಿನ ಪುರಾತನ ಕಾರುಗಳ ಸರದಾರ ಎಂದೇ ಗುರುತಿಸಲ್ಪಡುತ್ತಿರುವ ಅಹಮ್ಮದ್ ಕುಟ್ಟಿ ಹಾಜಿ ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ನಡೆದ ಕಾರು ರಾಲಿ ಹಾಗೂ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರಶಂಸೆ ಪಡೆದಿದ್ದಾರೆ.

ಈ ಮ್ಯೂಸಿಯಂಗೆ ಈಗಾಗಲೇ ದೇಶಿ ವಿದೇಶಿಗಳ ಪ್ರವಾಸಿಗರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತಿ ಕಾರಿನ ಬಣ್ಣ ಹಾಗೂ ಮಾದರಿಯನ್ನು ಮೂಲ ರೂಪದಲ್ಲೇ ಉಳಿಸಿಕೊಂಡು ಬಂದಿರುವ ಅವರು ಈ ಕಾರುಗಳು ಕೇವಲ ಶೆಡ್‍ನಲ್ಲಷ್ಟೇ ಉಳಿಯದೆ ಅವುಗಳ ಪರಿಚಯ ಈಗಿನ ಮಕ್ಕಳಿಗೂ ಆಗಲಿ ಎಂಬ ಉದ್ದೇಶದಿಂದ ಪ್ರದರ್ಶನ ಏರ್ಪಡಿಸಿ ಮುಕ್ತ ಅವಕಾಶ ಮಾಡಿಕೊಟ್ಟಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮ್ಯೂಸಿಯಂನಲ್ಲಿರುವ ಕಾರುಗಳನ್ನು ಅವರ ತಂದೆ ಕಾಲದಿಂದಲೇ ಸಂಗ್ರಹಿಸಿಕೊಂಡು ಬಂದಿದ್ದು, ಸರ್ಕಾರ ಸೇರಿದಂತೆ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಈ ಮ್ಯೂಸಿಯಂನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ದೇಶ, ವಿದೇಶಗಳ ಗಮನಸೆಳೆಯುವಂತೆ ಮಾಡಬಹುದು ಎಂಬ ಅಭಿಪ್ರಾಯ ಅಹಮ್ಮದ್ ಕುಟ್ಟಿ ಹಾಜಿ ಅವರದ್ದಾಗಿದೆ.


Click it and Unblock the Notifications








