ವಜ್ರದ ವ್ಯಾಪಾರಿಯಿಂದ ನೌಕರರಿಗೆ 500 ಕಾರು ಉಡುಗೊರೆ
ಹೃದಯದಲ್ಲಿ ಇಷ್ಟೊಂದು ಶ್ರೀಮಂತಿಕೆ ಹೊಂದಿರುವ ವ್ಯಾಪಾರಿಯನ್ನು ನೀವು ಎಲ್ಲಿಯಾದರೂ ನೋಡಿರುವೀರಾ? ಸಾಮಾನ್ಯವಾಗಿ ವ್ಯಾಪಾರಿಗಳು ಗುರಿ ಮುಟ್ಟಲು ತಮ್ಮ ಸಂಸ್ಥೆಯ ಸಾಕಷ್ಟು ದುಡಿಸುತ್ತಾರೆ. ಇನ್ನು ಉಡುಗೊರೆ ದೂರದ ಮಾತು.
ಹಾಗಿರುವಾಗ ಇವೆಲ್ಲಕ್ಕಿಂತಲೂ ವಿಭಿನ್ನವಾಗಿರುವ ಗುರುತಿಸಿಕೊಂಡಿರುವ ಸೂರತ್ ವ್ಯಾಪಾರಿ ಇದೀಗ ಸುದ್ದಿಯಲ್ಲಿದ್ದಾರೆ. ಇಲ್ಲಿ ನೆಲೆಸಿರುವ ವಜ್ರದ ವ್ಯಾಪಾರಿಯೊರ್ವರು ತಮ್ಮ ಸಂಸ್ಥೆಯು ವಾರ್ಷಿಕ ಗುರಿ ಮುಟ್ಟಿರುವ ಹಿನ್ನಲೆಯಲ್ಲಿ ತನ್ನೆಲ್ಲ ನೌಕರರಿಗೆ ಹೊಚ್ಚ ಹೊಸ ಫಿಯೆಟ್ ಪುಂಟೊ ಇವೊ ಕಾರನ್ನು ದೀಪಾವಳಿ ಉಡುಗೊರೆಯಾಗಿ ನೀಡಿದ್ದಾರೆ.

ವಿಚಿತ್ರವೆಂದರೆ ಕಾರು ಪಡೆದ ಬಹುತೇಕ ನೌಕರರು ಇನ್ನು ಡ್ರೈವಿಂಗ್ ಕರಗತ ಮಾಡಿಕೊಂಡಿಲ್ಲವಂತೆ! ಒಟ್ಟಾರೆಯಾಗಿ ನೌಕರರು ಈ ಬೆಳಕಿನ ಹಬ್ಬವನ್ನು ಹೊಸ ಕಾರಿನ ಮೂಲಕ ಬರಮಾಡಿಕೊಳ್ಳಲು ಸಿದ್ಧರಾಗಿದ್ದು, ದೀಪಾವಳಿ ಬಂಪರ್ ಲಭಿಸಿದಂತಾಗಿದೆ.

ಸೂರತ್‌ನ ಹರಿ ಕೃಷ್ಣ ಡೈಮಂಡ್ ಎಕ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲಿಕ ಸವಾಜಿ ಟೊಲ್‌ಕಿಯಾ ಎಂಬವರು ಇಂತಹ ಹೃದಯ ವೈಶಾಲತೆಯನ್ನು ಮೆರೆದಿದ್ದಾರೆ. ಒಟ್ಟು 500ರಷ್ಟು ನೌಕರರಿಗೆ ಫಿಯೆಟ್ ಪುಂಟೊ ಇವೊ ಕಾರನ್ನು ಕೊಡುಗೆಯಾಗಿ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಲಿಕರು "ಕಳೆದ ವರ್ಷದಲ್ಲೇ ನಾವಿದನ್ನು ಯೋಜನೆ ಮಾಡಿಕೊಂಡಿದ್ದೆವು. ತಮ್ಮ ಗುರಿ ತಲುಪಿರುವ ಒಟ್ಟು 1,200ರಷ್ಟು ನೌಕರರಿಗೆ ಉಡುಗೊರೆ ನೀಡಿರುವುದಾಗಿ" ತಿಳಿಸಿದ್ದಾರೆ.

ಅಲ್ಲದೆ ಮನೆ ಇಲ್ಲದ 200ರಷ್ಟು ನೌಕರರಿಗೆ ಉಚಿತ ಫ್ಲ್ಯಾಟ್ ಹಾಗೂ ಇನ್ನಿತರ 500 ಮಂದಿಗೆ ವಜ್ರ ಹಾಗೂ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಒಟ್ಟಾರೆಯಾಗಿ ಈ ಸಂಸ್ಥೆಯ ಭಾಗವಾಗಿರುವುದಕ್ಕೆ ನೌಕರರು ಹೆಮ್ಮೆಪಟ್ಟುಕೊಳ್ಳುತ್ತಿದ್ದಾರೆ.

ಅಂದ ಹಾಗೆ ಈ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಪ್ರತಿಕ್ರಿಯಿಸಿರಿ.


Click it and Unblock the Notifications








