ರನ್ವೇಗೆ ಇಳಿಯುತ್ತಿದ್ದ ವಿಮಾನಕ್ಕೆ ಡ್ರೋನ್ ಢಿಕ್ಕಿ; ತಪ್ಪಿದ ದುರಂತ
ಬ್ರಿಟನ್‌ನ ಹೆಸರಾಂತ ಹೀಥ್ರೂ ವಿಮಾನ ನಿಲ್ದಾಣದ ರನ್ವೇಗೆ ಇಳಿಯುತ್ತಿದ್ದ ಬ್ರಿಟಿಷ್ ಏರ್ ವೇಸ್‌ನ ವಿಮಾನಕ್ಕೆ ಡ್ರೋನ್ ಢಿಕ್ಕಿಯಾಗಿರುವ ಘಟನೆ ವರದಿಯಾಗಿದೆ. ಆದರೆ ಅದೃಷ್ಟವಶಾತ್ ದುರಂತವೊಂದು ತಪ್ಪಿದ್ದು, ಯಾರಿಗೂ ಅಪಾಯ ಎದುರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಹೀಥ್ರೂ, ಯುರೋಪ್‌ನ ಅತ್ಯಂತ ಬಿಡುವಿಲ್ಲದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಪ್ರಸ್ತುತ ದೂರು ದಾಖಲಿಸಿರುವ ಪೊಲೀಸರು ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಡ್ರೋನ್ ಢಿಕ್ಕಿಯಾಗಿರುವ ಹೊರತಾಗಿಯೂ ಪೈಲಟ್ ಗಳು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವಿಮಾನ ಲ್ಯಾಂಡ್ ಆದ ಬಳಿಕ ಘಟನೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಯಿತು ಎಂಬುದು ಬ್ರಿಟಿಷ್ ಏರ್ ವೇಸ್ ವಕ್ತಾರರು ತಿಳಿಸಿದ್ದಾರೆ.

ಆರಂಭದಲ್ಲಿ ಡ್ರೋನ್ ಢಿಕ್ಕಿಯಾಗಿರುವುದರ ಬಗ್ಗೆ ಯಾವುದೇ ಖಚಿತ ಮಾಹಿತಿಗಳಿರಲಿಲ್ಲ. ಆದರೆ ಬಳಿಕ ನಡೆದ ತನಿಖೆಯಲ್ಲಿ ಡ್ರೋನ್ ವಿಮಾನ ಢಿಕ್ಕಿಯಾಗಿರುವುದು ಬೆಳಕಿಗೆ ಬಂದಿದೆ.

ಕೊನೆಗೂ 132 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಗಳೊಂದಿಗೆ ಜಿನೆವಾದಿಂದ ಹಾರಾಟ ಆರಂಭಿಸಿದ್ದ ಬ್ರಿಟಿಷ್ ಏರ್ ವೇಸ್ ವಿಮಾನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಟರ್ಮಿನಲ್ 5ರಲ್ಲಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದೆ.

ವಿಮಾನಗಳಿಗೆ ಡ್ರೋನ್ ಢಿಕ್ಕಿಯಾಗುತ್ತಿರುವ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ಹೆಚ್ಚಿನ ಆತಂಕದ ವಾತಾವರಣ ಸೃಷ್ಟಿಸುವಂತೆ ಮಾಡಿದೆ.

ವಿಮಾನ ನಿಲ್ದಾಣಗಳಂತಹ ಪ್ರದೇಶಗಳಲ್ಲಿ ರಿಮೋಟ್ ನಿಯಂತ್ರಿತ ಡ್ರೋನ್ ಗಳನ್ನು ಸಾರ್ವಜನಿಕರು ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದರೂ ಇಂತಹ ಘಟನೆಗಳು ಪದೇ ಪದೇ ಘಟಿಸುತ್ತಿರುವುದು ಆಂತಕಕ್ಕೀಡುಮಾಡಿದೆ.


Click it and Unblock the Notifications








