ಜಪಾನ್ ಹೈ ಸ್ಪೀಡ್ ರೈಲು ಭಾರತಕ್ಕೆ ಬರುತ್ತಾ?
ಸಾಮಾನ್ಯವಾಗಿ ಜಪಾನ್ ಜನರನ್ನು ಶ್ರಮಜೀವಿಗಳು ಎನ್ನಲಾಗುತ್ತಿದೆ. ರಾಷ್ಟ್ರೀಯ ರಾಜಾದಿನವನ್ನೂ ಅಲ್ಲಿ ಕೆಲಸ ಮಾಡುವ ಮೂಲಕ ಆಚರಿಸಲಾಗುತ್ತದೆ. ಹಾಗಿರುವಾಗ ಅಲ್ಲಿನ ಪರಿಶ್ರಮಿಗಳ ಸಾಧನೆಗೆ ಮತ್ತೊಂದು ಕೋಡು ಸೇರ್ಪಡೆಯಾಗಿದೆ.
ವಿಶ್ವದಲ್ಲೇ ಅತ್ಯುತ್ತಮ ರೈಲು ಯಾನ ಹೊಂದಿರುವ ಜಪಾನ್ ಬುಲೆಟ್ ಟ್ರೈನ್ ಸಾಲಿಗೆ ಮತ್ತೊಂದು ಹೈ ಸ್ಪೀಡ್ ರೈಲು ಸೇರ್ಪಡೆಯಾಗಿದೆ. ತಂತ್ರಜ್ಞಾನದಲ್ಲಿ ಒಂದು ಹೆಜ್ಜೆ ಮುಂದಿರುವ ಜಪಾನ್‌ನಲ್ಲಿ ಈಗಾಗಲೇ 'ಇ5 ಸಿರೀಸ್ ಶಿಂಕಾನ್ಸೆನ್' (E5 Series Shinkansen) ಬುಲೆಟ್ ಟ್ರೈನ್ ಸೇವೆ ಆರಂಭಿಸಿದೆ.
ಪೂರ್ವ ಜಪಾನ್ ರೈಲ್ವೇ ಸಂಸ್ಥೆ (ಜೆಆರ್ ಈಸ್ಟ್) ನಿಯಂತ್ರಣದಡಿಯಲ್ಲಿ ಹೈ ಸ್ಪೀಡ್ ರೈಲು ಓಡಾಡುತ್ತಿದೆ. ಟೊಕಿಯೊದಿಂದ ಅಮೋರಿ ಪ್ರದೇಶವನ್ನು ಬಂಧಿಸಲಿರುವ ಈ ರೈಲು, ಪ್ರತಿ ಗಂಟೆಗೆ 400 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಯಾತ್ರಿಕರಿಗೆ ಆರಾಮದಾಯಕ ಪಯಣ ಹಾಗೂ ವಾತಾವರಣ ಮೇಲಾಗುವ ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ಇದರ ವೇಗತೆಯನ್ನು 320 ಕೀ.ಮೀ.ಗೆ ಕುಗ್ಗಿಸಲಾಗಿದೆ.
ಪ್ರಸ್ತುತ ಜಪಾನ್ ಬುಲೆಟ್ ರೈಲು ಭಾರತಕ್ಕೆ ಯಾವಾಗ ಪ್ರವೇಶ ಪಡೆಯಲಿದೆ ಎಂಬುದು ಇನ್ನೂ ಪ್ರಶ್ನಾತೀತವಾಗಿ ಉಳಿದುಕೊಂಡಿದೆ.

ಜಪಾನ್ ಇ5 ಸಿರೀಸ್ ಹೈ ಸ್ಪೀಡ್ ಟ್ರೈನ್ 10 ಬೋಗಿಗಳನ್ನು ಹೊಂದಿದೆ. ಇದು ಜಪಾನ್‌ನಲ್ಲಿ ಅತಿ ವೇಗದಲ್ಲಿ ಚಲಿಸುವ ಬುಲೆಟ್ ರೈಲೆಂಬ ಖ್ಯಾತಿಗೂ ಪಾತ್ರವಾಗಿದೆ.

ಈ ಬುಲೆಟ್ ರೈಲಿನ ಮತ್ತೊಂದು ವೈಶಿಷ್ಟ್ಯ ಏನೆಂದರೆ ಇದರ ಮೂಗಿನ ಆಕೃತಿ ಹೋಲುವ ಮೊನಚಾದ ಮುಂಭಾಗವನ್ನು ಹೊಂದಿದೆ. 15 ಮೀಟರ್ ಉದ್ದವಿರುವ ಈ ಭಾಗವು ಸುರಂಗ ಮಾರ್ಗದಲ್ಲಿ ರೈಲು ಚಲಿಸುವಾಗ ಉಂಟಾಗುವ ಭಾರಿ ಸದ್ದನ್ನು ತಡೆಗಟ್ಟಲು ನೆರವಾಗಲಿದೆ.

ಹಾಗೆಯೇ ಬೋಗಿಗಳಿಗೆ ನಾಯ್ಸ್ (ಶಬ್ದ) ಕವರ್‌ಗಳಿದ್ದು ಇದು ವೇಗವಾಗಿ ಚಲಿಸುವಾಗ ಹೆಚ್ಚಿನ ಶಬ್ದ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಲಿದೆ.

ರೈಲು ಅತಿವೇಗದಲ್ಲಿ ಚಲಿಸುವಾಗಲೂ ಯಾತ್ರಿಕರಿಗೆ ಆರಾಮದಾಯಕ ಪಯಣವನ್ನು ಖಾತ್ರಿಪಡಿಸುತ್ತಿದೆ.

ಇನ್ನು 10 ಬೋಗಿಯುಳ್ಳ ಈ ಬುಲೆಟ್ ಟ್ರೈನ್‌ನಲ್ಲಿ ಒಟ್ಟು ಮೂರು ದರ್ಜೆಗಳಿವೆ. ಗ್ರ್ಯಾನ್ ಕ್ಲಾಸ್, ಗ್ರೀನ್ ಕ್ಲಾಸ್ ಹಾಗೂ ಸಾಮಾನ್ಯ ದರ್ಜೆಯ ಪಯಣ. ಪ್ರತಿಯೊಂದು ವಿಭಾಗವು ಅನುಕ್ರಮವಾಗಿ 18,55 ಹಾಗೂ 658 ಜನರನ್ನು ಹೊತ್ಯೊಯ್ಯಲಿದೆ.

ಇದೀಗ ಇಂತಹದೊಂದು ಬುಲೆಟ್ ಟ್ರೈನ್ ಭಾರತ ಪ್ರವೇಶ ಪಡೆದರೆ ಹೇಗಿರಬಹುದು ಎಂಬುದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.


Click it and Unblock the Notifications








