Tesla: ನಾನು ಅದೃಷ್ಟಶಾಲಿ.. ಜನಪ್ರಿಯ ನಟನಿಂದ ಹೊಸ ಟೆಸ್ಲಾ ಕಾರು ಖರೀದಿ, 568 ಕಿ.ಮೀ ಓಡುತ್ತದೆ!
ಮಲಯಾಳಂ ಚಿತ್ರರಂಗದ ಜನಪ್ರಿಯ ನಟರಲ್ಲಿ ಮನೋಜ್ ಕೆ. ಜಯನ್ (Manoj K. Jayan) ಕೂಡ ಒಬ್ಬರಾಗಿದ್ದಾರೆ. ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಹೊಚ್ಚ ಹೊಸ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ.
ಕೇರಳದ ಕೊಟ್ಟಾಯಂನ ಪ್ರಸಿದ್ಧ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಜಿ.ಜಯನ್ ಮತ್ತು ಶಿಕ್ಷಕಿ ವಿ.ಕೆ.ಸರೋಜಿನಿ ಅವರ ಪುತ್ರರಾಗಿರುವ ಮನೋಜ್, ಪ್ರತಿಭಾನ್ವಿತ ನಟರಾಗಿದ್ದಾರೆ. ಕೇರಳ ರಾಜ್ಯ ಚಲನಚಿತ್ರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. 2000ದಲ್ಲಿ ನಟಿ ಊರ್ವಶಿಯನ್ನು ವಿವಾಹವಾಗಿದ್ದ ಅವರು, 2008ರಲ್ಲಿ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಓರ್ವ ಮಗಳಿದ್ದಾಳೆ.

2011ರಲ್ಲಿ ಆಶಾ ಅವರನ್ನು ನಟ ಮನೋಜ್ ಮದುವೆಯಾಗಿದ್ದರು. ಅವರಿಗೆ ಮಗ ಕೂಡ ಇದ್ದಾನೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ಲಂಡನ್ ನಲ್ಲಿ ನೆಲೆಸಿದ್ದಾರೆ. ಅಲ್ಲಿ ನೂತನ ಟೆಸ್ಲಾ ಮಾಡೆಲ್ 3 (Tesla Model 3) ಎಲೆಕ್ಟ್ರಿಕ್ ಕಾರನ್ನು ಕೊಂಡುಕೊಂಡಿದ್ದು, ಆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
'ಎಂತಹ ಸುಂದರ ಕನಸು ನನಸಾಯಿತು. ದೇವರ ಆಶೀರ್ವಾದದಿಂದ ಯುಕೆಯಲ್ಲಿ ಟೆಸ್ಲಾ ಕಾರು ನಮ್ಮ ಕುಟುಂಬದ ಸದಸ್ಯ. ವಿಶ್ವದ ಅತ್ಯಂತ ಅತ್ಯಾಧುನಿಕ ಕಾರನ್ನು ಹೊಂದಲು ನಾನು ಅದೃಷ್ಟಶಾಲಿ' ಎಂದು ಶೀರ್ಷಿಕೆ ಬರೆದಿದ್ದಾರೆ. ಅವರು ಪೋಸ್ಟ್ ಮಾಡಿ, 5 ಗಂಟೆ ಕಳೆಯುವ ಮೊದಲೇ 14,585 ಲೈಕ್ ಪಡೆದುಕೊಂಡಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.

ನಟ ಮನೋಜ್ ಟೆಸ್ಲಾ ಮಾಡೆಲ್ 3ರ ಯಾವ ರೂಪಾಂತರವನ್ನು ಖರೀದಿಸಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯಿಲ್ಲ. ಈ ಕಾರು ರೂ.60 ಲಕ್ಷ ಆಸುಪಾಸಿನಲ್ಲಿ ಖರೀದಿಗೆ ದೊರೆಯುತ್ತದೆ. ರೇರ್ ವೀಲ್ ಡ್ರೈವ್ ತಂತ್ರಜ್ಞಾನವನ್ನು ಹೊಂದಿರುವ ಕಾರು, ಸಂಪೂರ್ಣ ಚಾರ್ಜ್ ನಲ್ಲಿ 423 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.
ಈ ಕಾರಿನ ಲಾಂಗ್ ರೇಂಜ್ & ಪರ್ಫಾರ್ಮೆನ್ಸ್ ರೂಪಾಂತರಗಳು, ಡುಯಲ್ ಮೋಟಾರ್ - ಆಲ್-ವೀಲ್-ಡ್ರೈವ್ ತಂತ್ರಜ್ಞಾನವನ್ನು ಪಡೆದಿವೆ. ಭರ್ತಿ ಚಾರ್ಜ್ ನಲ್ಲಿ 568 ಕಿ.ಮೀ ರಿಂದ 507 ಕಿ.ಮೀ ಓಡಬಲ್ಲವು. ಟೆಸ್ಲಾ ಮಾಡೆಲ್ 3 ಕಾರು ಒಳಭಾಗ ಹಾಗೂ ಹೊರಭಾಗದಲ್ಲಿ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದ್ದು, 54 ಕೆಡಬ್ಲ್ಯೂಹೆಚ್, 62 ಕೆಡಬ್ಲ್ಯೂಹೆಚ್, 75 ಕೆಡಬ್ಲ್ಯೂಹೆಚ್ ಮತ್ತು 82 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ.
ಈ ಟೆಸ್ಲಾ ಮಾಡೆಲ್ 3 ಕಾರಿನಲ್ಲಿ 5 ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಕೇವಲ 3.1 ಸೆಕೆಂಡುಗಳಲ್ಲಿ 0 - 97 ಕೆಎಂಪಿಹೆಚ್ ವೇಗವನ್ನು ಪಡೆಯಲಿದ್ದು, ಗಂಟೆಗೆ 261 ಕಿ.ಮೀ ಗರಿಷ್ಠ ವೇಗವನ್ನು ಹೊಂದಲಿದೆ. 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 14-ಸ್ಪೀಕರ್ ಸೌಂಡ್ ಸಿಸ್ಟಮ್, ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್ ಲೈಟ್ಸ್, 18 ಇಂಚಿನ ಅಲಾಯ್ ವೀಲ್ಸ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








