135 ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದ ಭೂಪ
ಹಿಂದೆಲ್ಲಾ ಎಲೆಕ್ಟ್ರಾನಿಕ್ ಚಲನ್ ಸಿಸ್ಟಂ ಬರುವುದಕ್ಕೂ ಮುನ್ನ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದಾಗ ಮಾತ್ರ ಸಂಚಾರಿ ಪೊಲೀಸರು ಹಿಡಿದು ದಂಡ ವಿಧಿಸುತ್ತಿದ್ದರು. ಆದ್ರೆ ಇದೀಗ ಎಲೆಕ್ಟ್ರಾನಿಕ್ ಚಲನ್ ಸಿಸ್ಟಂ ಬಂದ ನಂತರ ಒಮ್ಮೆ ನೀವು ಟ್ರಾಫಿಕ್ ಪೊಲೀಸರ ಹತ್ತಿರ ಸಿಕ್ಕಿಕೊಂಡರೆ ಸಾಕು ನೀವು ಮಾಡಿರುವ ಟ್ರಾಫಿಕ್ ಉಲ್ಲಂಘನೆಯ ದೊಡ್ಡ ಪಟ್ಟಿಯೇ ದೊರೆಯುತ್ತದೆ.

ಕೆಲವೊಮ್ಮೆ ಅವರಸದಲ್ಲೊ ಅಥವಾ ಗೊತ್ತಿಲ್ಲದೆಯೋ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಆಗುವುದು ಕಾಮನ್. ಆದರೂ ಅದು ತಪ್ಪು ತಪ್ಪೇ. ಆದ್ರೆ ಇಲ್ಲೊಬ್ಬ ಮಹಾನುಭಾವ ತಾನು ಮಾಡುತ್ತಿರುವುದು ತಪ್ಪು ಅಂತಾ ಗೊತ್ತಿದ್ದರೂ ಬರೋಬ್ಬರಿ 135 ಬಾರಿ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡಿರುವುದಲ್ಲದೇ 30 ಸಾವಿರಕ್ಕಿಂತಲೂ ಹೆಚ್ಚು ದಂಡ ಜಡಿಸಿಕೊಂಡಿದ್ದಾನೆ ಎಂದರೆ ನೀವು ನಂಬಲೇಬೇಕು.

ಹೌದು, ಪ್ರಯಾಣಿಕರ ಸುರಕ್ಷತೆಗಾಗಿ ಟ್ರಾಫಿಕ್ ಪೊಲೀಸರು ಕಠಿಣ ಸಂಚಾರಿ ನಿಯಮಗಳನ್ನ ಜಾರಿ ಮಾಡಿದ್ದರೂ ಕೆಲವರಿಗೆ ಅದು ಅರ್ಥವಾಗುವುದೇ ಇಲ್ಲ. ಇಲ್ಲೊಬ್ಬ ಬೈಕ್ ಸವಾರ ಕೂಡಾ ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದು, ಹೆಲ್ಮೆಟ್ ರಹಿತ ಬೈಕ್ ಸವಾರಿ, ಸಿಗ್ನಲ್ ಜಂಪ್, ರಾಂಗ್ ವೇ ಡ್ರೈವಿಂಗ್ ಸೇರಿದಂತೆ ಬರೋಬ್ಬರಿ 135 ಕೇಸ್‌ಗಳನ್ನು ಜಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ತೆಲಂಗಾಣ ರಾಜಧಾನಿ ಹೈದ್ರಾಬಾದ್‍ನಲ್ಲಿ. ಸ್ಕೂಟರ್ ಸವಾರನಿಗೆ ಹಾಕಲಾಗಿರುವ ದಂಡದ ಮೊತ್ತ ಎಷ್ಟು ಅಂತಾ ಕೇಳಿದರೆ ನೀವು ಬೆಚ್ಚಿ ಬಿಳೋದು ಗ್ಯಾರಂಟಿ. ಯಾಕಂದ್ರೆ ದಂಡದ ಮೊತ್ತ ಆತ ಚಲಾಯಿಸುತ್ತಿರುವ ವಾಹನದ ಬೆಲೆಯೇ ಆಗಿದೆ.

ಕಳೆದ ವಾರದ ಹಿಂದಷ್ಟೇ ಅಲ್ಲಿನ ಸ್ಥಳೀಯ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದ ಕೃಷ್ಣ ಪ್ರಕಾಶ್‍ರವರ TS10 ED 9176 ನೋಂದಣಿ ಸಂಖ್ಯೆ ಇರುವ ಹೀರೋ ಬೈಕ್ ಮೇಲೆ ಬರೋಬ್ಬರಿ 135 ಪ್ರಕರಣಗಳಿರುವುದು ಪತ್ತೆಯಾಗಿದ್ದು, ಸ್ಕೂಟರ್ ಮೇಲೆ ಇರುವ ಪ್ರಕರಣಗಳ ಪಟ್ಟಿ ನೋಡಿದ ಸಂಚಾರಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಹೈದ್ರಾಬಾದ್‌ನ ಕೃಷ್ಣ ಪ್ರಕಾಶ್ ಎಂಬುವರಿಗೆ ಸೇರಿದ ಹೀರೋ ಬೈಕ್ ವಾಹನದ ನೋಂದಣಿ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಅಪ್‌ಡೇಟ್ ಮಾಡುತ್ತಿದ್ದಂತೆ ಬರೋಬ್ಬರಿ 135 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂದಿದೆ. ಅಲ್ಲದೇ, ಈ ಪ್ರಕರಣಗಳ ದಂಡದ ಒಟ್ಟು ಮೊತ್ತ ಕೇವಲ ರೂ. 31,556 ಮಾತ್ರವಂತೆ.

ಕೃಷ್ಣ ಪ್ರಕಾಶ್ ಬೈಕ್ ಸೀಜ್..!
135 ಕೇಸ್‍ಗಳಿರುವ ಕೃಷ್ಣ ಪ್ರಕಾಶ್ ಅವರ ಹೀರೋ ಬೈಕ್ ಅನ್ನು ಅಲ್ಲಿನ ಪೊಲೀಸರು ಸೀಜ್ ಮಾಡಲಾಗಿದ್ದು, ಅವರು ಬೈಕ್ ಅನ್ನು ಹಿಂಪಡೆಯಬೇಕಿದ್ದರೆ ಮೊದಲಿಗೆ ನ್ಯಾಯಾಲಯದ ವಿಚಾರಣೆಗೆ ಹೋಗಬೇಕಂತೆ. ಮತ್ತು ಬಂದ ಚಲನ್‍ನಲ್ಲಿ ಆತ ಮಾಡಿದ 135 ಕೇಸ್‍ಗಳಲ್ಲಿ ವಾಹನ ಚಾಲನೆಯ ವೇಳೆ ಫೋನ್ ಬಳಕೆ, ಹೆಲ್ಮೆಟ್ ರಹಿತ ವಾಹನ, ರಾಂಗ್ ಸೈಡ್ ಡ್ರೈವಿಂಗ್ ಇಂಥ ಪ್ರಕರಣಗಳೇ ಹೆಚ್ಚಂತೆ.
Video Courtesy:HMTV News

ಇದು ಹೈದ್ರಾಬಾದ್‍ನಲ್ಲಿನ ಕೃಷ್ಣ ಪ್ರಕಾಶ್ ಅವರ ಕಥೆಯಾದರೆ ಇನ್ನು ನಮ್ಮ ಮೈಸೂರು ನಗರದಲ್ಲಿ ಆಕ್ಟೀವಾ ಸ್ಕೂಟರ್‍ನ ಮಾಲೀಕನೊಬ್ಬ ಬರೊಬ್ಬರಿ 635 ಬಾರಿ ಟ್ರಾಫಿಕ್ ಉಲ್ಲಂಘನೆ ಮಾಡಿರುವ ಘಟನೆ ಕೂಡಾ ನಡೆದಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಅಂದಹಾಗೆ ಈ ಘಟನೆ ನಡೆದಿರುವುದು ಬೇರೆ ಯಾವುದೋ ರಾಜ್ಯದಲ್ಲಿ ಅಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರನಿಗೆ ಹಾಕಲಾಗಿರುವ ದಂಡದ ಮೊತ್ತ ಎಷ್ಟು ಅಂತಾ ಕೇಳಿದರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕಂದ್ರೆ ದಂಡದ ಮೊತ್ತ ಆತನ ಸ್ಕೂಟರ್ ಬೆಲೆಗಿಂತಲೂ ಹೆಚ್ಚು.

ಆಗಸ್ಟ್ ಮಾಸದಲ್ಲಿ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದ ಹೋಂಡಾ ಆಕ್ಟೀವಾ ಸ್ಕೂಟರ್ ಮೇಲೆ ಬರೋಬ್ಬರಿ 635 ಪ್ರಕರಣಗಳಿರುವುದು ಪತ್ತೆಯಾಗಿದ್ದು, ಸ್ಕೂಟರ್ ಮೇಲೆ ಇರುವ ಪ್ರಕರಣಗಳ ಪಟ್ಟಿ ನೋಡಿದ ಸಂಚಾರಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಮೈಸೂರಿನ ಮಧುಪ್ರಸಾದ್ ಕೆ ಎಂಬುವರಿಗೆ ಸೇರಿದ ಹೋಂಡಾ ಆಕ್ಟೀವಾ ವಾಹನದ ನೋಂದಣಿ ಸಂಖ್ಯೆಯನ್ನು ಮೊಬೈಲ್‌ನಲ್ಲಿ ಅಪ್‌ಡೇಟ್ ಮಾಡುತ್ತಿದ್ದಂತೆ ಬರೋಬ್ಬರಿ 635 ಪ್ರಕರಣಗಳು ದಾಖಲಾಗಿರೋದು ಬೆಳಕಿಗೆ ಬಂತು. ಅಲ್ಲದೇ, ಈ ಪ್ರಕರಣಗಳ ದಂಡದ ಒಟ್ಟು ಮೊತ್ತ ಕೇವಲ ರೂ. 63,500 ಮಾತ್ರವಂತೆ.

ದಂಡ ವಸೂಲಿಗೆ ಪೊಲೀಸರ ಹರಸಾಹಸ
ಇನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿರುವ ಈ ಸ್ಕೂಟರ್ ಅತಿ ಹೆಚ್ಚು ನಿಯಮ ಉಲ್ಲಂಘನೆ ಮಾಡಿರುವ ವಾಹನ ಎಂದು ಗುರುತಿಸಲಾಗಿದ್ದು, ಇದನ್ನು ಮಾರಾಟ ಮಾಡಿದರೂ ಅಷ್ಟು ಹಣ ಸಿಗುವುದಿಲ್ಲ ಎಂಬುವುದು ಪೊಲೀಸರಿಗೆ ಖಾತ್ರಿಯಾಗಿ ಹೋಗಿದೆ.

ಹೀಗಾಗಿ ದಂಡ ವಸೂಲಾತಿಗೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುವ ಪೊಲೀಸರಿಗೆ ಸ್ಕೂಟರ್ ಅನ್ನು ಹಾರಾಜು ಹಾಕಬೇಕೋ ಅಥವಾ ಆರೋಪಿಯಿಂದಲೇ ನೇರವಾಗಿ ದಂಡ ವಸೂಲಿ ಮಾಡಬೇಕೋ ಎಂಬ ಗೊಂದಲದಲ್ಲಿದ್ದಾರೆ.

ನಂಗೆ ಸ್ಕೂಟರ್ ಬೇಡವೇ ಬೇಡ..!
ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಾ ಕ್ಷಣವೇ ಎಚ್ಚೇತ್ತುಕೊಂಡ ಸ್ಕೂಟರ್ ಮಾಲೀಕ ಮಧುಕುಮಾರ್ ರೂ. 63,500 ರೂ. ಪಾವತಿ ಮಾಡಲೇಬೇಕು ಎಂದಾಗ ಸ್ಕೂಟರ್ ಅನ್ನು ಪೊಲೀಸರ ಬಳಿಯೇ ಬಿಟ್ಟು ಹೋಗಿದ್ದಾನೆ. ನನ್ನ ಬಳಿ ದಂಡ ಪಾವತಿಸಲು ಹಣವೇ ಇಲ್ಲ ಹೀಗಾಗಿ ಸ್ಕೂಟರ್ ನೀವೇ ಇಟ್ಟುಕೊಳ್ಳಿ ಎಂದು ಹೊರಟುಹೋಗಿದ್ದಾನೆ.

ಇನ್ನು ವಶಕ್ಕೆ ಪಡೆಯಾಗಿರುವ ಸ್ಕೂಟರ್ ಅನ್ನು ಹರಾಜಿಗಿಟ್ಟರೂ ದಂಡದ ಮೊತ್ತವನ್ನು ಮರುಪಾವತಿ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಮೈಸೂರು ನಗರದ ಪೊಲೀಸರು ಈ ಕೇಸ್‍ನ ಬಗ್ಗೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದಾರೆ.
MOST READ: ಮಗ ನೀಡಿದ ದುಬಾರಿ ಗಿಫ್ಟ್ ಕಂಡು ಭಾವುಕರಾದ ತಾಯಿ..

ಒಂದು ವೇಳೆ ಸ್ಕೂಟರ್ ಅನ್ನು ಹರಾಜಿಗಿಟ್ಟರೂ ಸುಮಾರು 20 ರಿಂದ 25 ಸಾವಿರ ತನಕ ಮಾರಾಟವಾಗುವುದು ಕಷ್ಟ. ಯಾಕೆಂದ್ರೆ ಈ ಸ್ಕೂಟರ್ ಅನ್ನು ಮಧುಪ್ರಸಾದ್ ಮಾರ್ಚ್ 2015ರಲ್ಲಿ ಖರೀದಿ ಮಾಡಿದ್ದು, ಸ್ಕೂಟರ್ ಖರೀದಿಸಿದಾಗ ಒಂದೇ ಒಂದು ಬಾರಿ ಈ ಸ್ಕೂಟರ್ ವಿಮೆ ಮಾಡಿಸಲಾಗಿತ್ತು. ಅಲ್ಲಿಂದ ಯಾವುದೇ ವಿಮೆ ಕೂಡಾ ಮಾಡಿಸಿಲ್ಲ.

ಇದರಿಂದ ವಿಮೆ ಇಲ್ಲದೇ ಈ ಸ್ಕೂಟರ್ ಅನ್ನು ಪೊಲೀಸರು ಕೂಡಾ ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಮಾರಾಟ ಮಾಡಲೇಬೇಕು ಅಂದಾದರೇ ಸಂಚಾರಿ ಪೊಲೀಸರೇ ತಮ್ಮ ಜೇಬಿನಿಂದ ಹಣ ಹಾಕಿ ವಿಮೆ ಮಾಡಿಸಿದ ನಂತರವೇ ಇದನ್ನು ಹರಾಜು ಹಾಕಬೇಕಾದ ಪರಿಸ್ಥಿತಿ ಇದೆ. ಒಟ್ಟಿನಲ್ಲಿ 635 ಕೇಸ್‌ಗಳು ಆಗುವ ತನಕವೂ ಸಮ್ಮನೆ ಇದ್ದ ಪೊಲೀಸರಿಗೆ ಇದೀಗ ಸ್ಕೂಟರ್ ಸಿಕ್ಕಿಬಿದ್ದಿರುವುದು ಕೂಡಾ ದಂಡ ವಸೂಲಿ ಮಾಡುವುದೇ ಸವಾಲಾಗಿ ಪರಿಣಮಿಸಿದೆ.


Click it and Unblock the Notifications








