ರಷ್ಯಾದ ಬಲಿಷ್ಠ 'ಅಕುಲಾ ಕ್ಲಾಸ್' ಜಲಾಂತರ್ಗಾಮಿ ನೌಕೆ ಭಾರತಕ್ಕೆ
ಬಹಳ ಹಿಂದಿನಿಂದಲೇ ರಷ್ಯಾ ಜೊತೆ ಅತ್ಯುತ್ತಮ ಬಾಂಧವ್ಯವನ್ನು ಹೊಂದಿರುವ ಭಾರತ ಉಭಯ ದೇಶಗಳ ನಡುವಣ ಮಿಲಿಟರಿ ಮಿತ್ರತ್ವವನ್ನು ಮತ್ತಷ್ಟು ಗಟ್ಟಿಪಡಿಸುವ ಇರಾದೆ ಹೊಂದಿದೆ. ಇದರಂತೆ ರಷ್ಯಾದಿಂದ ಮಗದೊಂದು ಪರಮಾಣು ಇಂಧನ ಚಾಲಿತ ಅಕುಲಾ ಕ್ಲಾಸ್ ಜಲಾಂತರ್ಗಾಮಿ ನೌಕೆಯನ್ನು ಗುತ್ತಿಗೆ ಪಡೆಯಲು ನಿರ್ಧರಿಸಿದೆ.
2010ರಲ್ಲಿ ರಷ್ಯಾ ಜೊತೆಗೆ 10 ವರ್ಷಗಳ ಕಾಲದ ಅಕುಲಾ ಶ್ರೇಣಿಯ ನೆರ್ಪಾ ಜಲಾಂತರ್ಗಾಮಿ ನೌಕೆಗೆ ಗುತ್ತಿಗೆ ಪಡೆದುಕೊಂಡಿತ್ತು. ಇದನ್ನು ಬಳಿಕ ಭಾರತೀಯ ನೌಕಾದಳವು 'ಐಎನ್ಎಸ್ ಚಕ್ರ' ಎಂದು ಪುನರ್ ನಾಮಕರಣಗೊಳಿಸಿತ್ತು. ಈಗ ಎರಡನೇ ಅಕುಲಾ ಕ್ಲಾಸ್‌ನ ಜಲಾಂತರ್ಗಾಮಿ ನೌಕೆ ಖರೀದಿಸಲು ಸಜ್ಜಾಗಿದೆ.

ಭಾರತದ ಸಮುದ್ರ ಗಡಿ ಕಾಯಲು ಪರಮಾಣು ಚಾಲಿತ ಅಕುಲಾ ಕ್ಲಾಸ್ ಜಲಾಂತರ್ಗಾಮಿ ನೌಕೆಗಳು ನೆರವಾಗಲಿದೆ. ಇದು ರಹಸ್ಯ ಕಾರ್ಯಾಚರಣೆಗಳಿಗೆ ಹೆಚ್ಚು ಉಪಯುಕ್ತವೆನಿಸಲಿದೆ.

ಪರಮಾಣು ಚಾಲಿಂತ ಅಕುಲಾ ಕ್ಲಾಸ್ ಜಲಾಂತರ್ಗಾಮಿ ನೌಕೆಗಳ ಸೇರ್ಪೆಡೆಯೊಂದಿಗೆ ಭಾರತದ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ.

ಅಕುಲಾ ಶ್ರೇಣಿಯ ಜಲಾಂತರ್ಗಾಮಿ ನೌಕೆಗಳು 12 ಕ್ರೂಸ್ ಮಿಸೈಲ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೆಯ್ಯುವ ಸಾಮರ್ಥ್ಯ ಹೊಂದಿದೆ.

ಹಡಗು ಸ್ಪೋಟಕ ಮಿಸೈಲ್ ಜೊತೆಗೆ ಶತ್ರು ಪಡೆಯನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯದೊಂದಿಗೆ 3,000 ಕೀ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುವಷ್ಟು ಪರಿಣಾಮಕಾರಿಯೆನಿಸಿಕೊಂಡಿದೆ.

ಪ್ರೊಜೆಕ್ಟ್ 971 ಅಥವಾ ನ್ಯಾಟೋ ಹೆಸರಿಸಿರುವ ಅಕುಲಾ ಕ್ಲಾಸ್ ಜಲಾಂತರ್ಗಾಮಿ ನೌಕೆಯನ್ನು ಮೊದಲ ಬಾರಿಗೆ 1986ನೇ ಇಸವಿಯಲ್ಲಿ ಸೋವಿಯತ್ ಒಕ್ಕೂಟವು ಸಮುದ್ರಕ್ಕಿಳಿಸಿತ್ತು. ತದಾ ಬಳಿಕ ವಿವಿಧ ಶ್ರೇಣಿಯ ಅಕುಲಾ ಜಲಾಂತರ್ಗಾಮಿ ನೌಕೆಗಳನ್ನು ರಷ್ಯಾ ಅಭಿವೃದ್ಧಿಪಡಿಸಿದೆ.

ಅಕುಲಾ II ನೆರ್ಪಾ ಜಲಾಂತರ್ಗಾಮಿ ನೌಕೆಯ ನಿರ್ವಹಣೆಗಾಗಿ ಭಾರತೀಯ ನೌಕಾದಳದ 300ರಷ್ಟು ನಾವಿಕರಿಗೆ ರಷ್ಯಾದಲ್ಲಿ ತರಬೇತಿಯನ್ನು ನೀಡಲಾಗಿತ್ತು. ಬಳಿಕ ಪುನರ್ ನಾಮಕರಣಗೊಂಡಿರುವ ಐಎನ್ ಎಸ್ ಚಕ್ರ, 2012 ಎಪ್ರಿಲ್ 04ರಂದು ಸೇವೆಗೆ ನಿಯುಕ್ತಿಗೊಳಿಸಲಾಗಿತ್ತು.

ಕಳೆದ ನಾಲ್ಕು ವರ್ಷಗಳ ಐಎನ್ ಎಸ್ ಚಕ್ರ ಸೇವೆಯಿಂದ ಸಂತುಷ್ಟಗೊಂಡಿರುವ ಭಾರತೀಯ ನೌಕಾದಳವು ಮಗದೊಂದು ಪರಮಾಣು ಚಾಲಿತ ಅಕುಲಾ ಕ್ಲಾಸ್ ಜಲಾಂತರ್ಗಾಮಿ ನೌಕೆಯನ್ನು ಸದ್ಯದಲ್ಲೇ ಖರೀದಿಸಲಿದೆ ಎಂಬುದು ತಿಳಿದು ಬಂದಿದೆ.


Click it and Unblock the Notifications








