ಭಾರತದ ಅತ್ಯಂತ ಜನಪ್ರಿಯ ಕಾರು ಹ್ಯುಂಡೈ ಕ್ರೆಟಾ, ಬೈಕ್ ಬಜಾಜ್ ಪಲ್ಸರ್: ಅಧ್ಯಯನ ವರದಿ
ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಬೆಳವಣಿಗೆಯನ್ನು ಸಾಧಿಸುತ್ತಿದೆ. ಭಾರತದಲ್ಲಿ ಹಲವು ವಿಧಗಳ ಬೈಕ್ ಮತ್ತು ಕಾರುಗಳು ಲಭ್ಯವಿದೆ. ಇದರಲ್ಲಿ ಅತ್ಯಂತ ಜನಪ್ರಿಯ ಬೈಕ್ ಮತ್ತು ಕಾರು ಯಾವುದು ಎಂಬ ಕುತೂಹಲ ಹಲವರಿಗಿರುತ್ತದೆ. ಇದಕ್ಕೆ ಸಂಬಂಧಿಸಿದ ಆಟೋ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆದ ಡ್ರೂಮ್‌ನ ಹೊಸ ಅಧ್ಯಯನ ವರದಿ ಬಹಿರಂಗವಾಗಿದೆ.
ಅಧ್ಯಯನ ವರದಿಯ ಪ್ರಕಾರ, ಹ್ಯುಂಡೈ ಕ್ರೆಟಾ ಎಸ್ಯುವಿ ಮತ್ತು ಬಜಾಜ್ ಪಲ್ಸರ್ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ನಾಲ್ಕು-ಚಕ್ರ ಮತ್ತು ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಭಾರತೀಯ ಮಾರುಕಟ್ಟೆಯ ಕಾರು ವಿಭಾಗದಲ್ಲಿ ಎಸ್‍ಯುವಿಗಳು ಹೆಚ್ಚು ಪ್ರಾಬಲ್ಯವನ್ನು ಸಾಧಿಸುತ್ತಿದೆ. ದ್ವಿಚಕ್ರ ವಾಹನಗಳಲ್ಲಿ, ಸ್ಕೂಟರ್‌ಗಳಿಗಿಂತ ಮೋಟಾರ್‌ಸೈಕಲ್‌ಗಳು ಖರೀದಿದಾರರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಬಜಾಜ್ ಪಲ್ಸರ್ ತನ್ನ ಕೆಲವು ಪ್ರಮುಖ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆಯುತ್ತಿದೆ.

ಐಷಾರಾಮಿ ಕಾರು ವಿಭಾಗ ಸೇರಿದಂತೆ ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಎಲ್ಲಾ ICE ಮಾದರಿಗಳನ್ನು ಅಧ್ಯಯನವು ಒಳಗೊಂಡಿದೆ. ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಇದೇ ರೀತಿಯ ಡೇಟಾವನ್ನು ಬಿಡುಗಡೆ ಮಾಡಿಲ್ಲ. ಆಟೋ ಇ-ಕಾಮರ್ಸ್ ದೈತ್ಯ ಡ್ರೂಮ್‌ನ ಅಧ್ಯಯನದಲ್ಲಿ ಹ್ಯುಂಡೈ ಕ್ರೆಟಾ ಎಸ್ಯುವಿ ಮತ್ತು ಬಜಾಜ್ ಪಲ್ಸರ್ ಅನ್ನು ಭಾರತದ ಅತ್ಯಂತ ಜನಪ್ರಿಯ ಕಾರು ಮತ್ತು ಮೋಟಾರ್‌ಸೈಕಲ್ ಎಂದು ಹೇಳಿದೆ.
2022ರ ಡ್ರೂಮ್‌ನ ವಾರ್ಷಿಕ 'ಇಂಡಿಯಾ ಆಟೋಮೊಬೈಲ್ ಇಕಾಮರ್ಸ್ ವರದಿ, ಕಳೆದ ವರ್ಷ ಕೊರಿಯನ್ ಎಸ್‍ಯುವಿಗಳ ಪ್ರಾಬಲ್ಯವನ್ನು ತೋರಿಸುತ್ತದೆ. ಹ್ಯುಂಡೈ ಕ್ರೆಟಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ನಂತರ ಸ್ಥಾನದಲ್ಲಿ ಕೊರಿಯಾದ ಸಹೋದರ ಕಿಯಾ ಸೆಲ್ಟೋಸ್ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ಖರೀದಿದಾರರಲ್ಲಿ ಅಚ್ಚುಮೆಚ್ಚಿನ ಇತರ ಎಸ್‍ಯುವಿಗಳಲ್ಲಿ ಹೊಸ ಮಾರುತಿ ಸುಜುಕಿ ಬ್ರೆಝಾ ಕೂಡ ಸೇರಿದೆ. ಒಟ್ಟಿನಲ್ಲಿ ಇಂಡೋ-ಜಪಾನೀಸ್ ಎಸ್‍ಯುವಿಗಳಿಗೆ ಕೊರಿಯಾದ ಎಸ್‍ಯುವಿಗಳು ಸೆಡ್ಡು ಹೊಡೆದಿದೆ.
ಎಂಪಿವಿ ಅಥವಾ ದೊಡ್ಡ ಎಸ್‌ಯುವಿಗಳಂತಹ ದೊಡ್ಡ ಕಾರುಗಳ ವಿಭಾಗದಲ್ಲಿ, ಟೊಯೊಟಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚುನರ್ ಮಾದರಿಗಳು ಖರೀದಿದಾರ ಅಚ್ಚುಮೆಚ್ಚು ಆಗಿದೆ, ಭಾರತದಲ್ಲಿ ಐಷಾರಾಮಿ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್, ಅದರ ಇ-ಕ್ಲಾಸ್ ಕಾರ್ ಅತ್ಯಂತ ಜನಪ್ರಿಯ ಮಾದರಿಯಾಗಿದೆ. ಐಷಾರಾಮಿ ಕಾರು ಪ್ರಿಯರು ಹೆಚ್ಚಾಗಿ ಈ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರ್ ಅನ್ನು ಆಯ್ಕೆ ಮಾಡಿಕೊಳುತ್ತಾರೆ.
ಖರೀದಿದಾರರಲ್ಲಿ ಜನಪ್ರಿಯವಾದ ಇತರ ಐಷಾರಾಮಿ ಕಾರುಗಳಲ್ಲಿ ಜೀಪ್ ಕಂಪಾಸ್ ಮತ್ತು ಬಿಎಂಡಬ್ಲ್ಯು 5 ಸಿರೀಸ್ ಸೇರಿವೆ. ಇನ್ನು ದ್ವಿಚಕ್ರ ವಾಹನ ವಿಭಾಗದಲ್ಲಿ, ಬಜಾಜ್ ಆಟೋ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್‌ಗಿಂತ ಹೆಚ್ಚಿನ ಮಾದರಿಗಳನ್ನು ಹೊಂದಿದೆ. ಅಧ್ಯಯನದ ಪ್ರಕಾರ ಬಜಾಜ್ ಪಲ್ಸರ್ ಅನ್ನು ಅತ್ಯಂತ ಮೆಚ್ಚಿನವು ಎಂದು ಹೇಳಿದೆ. ಬಜಾಜ್ ಪಲ್ಸರ್ ಬೈಕಿಗೆ ಇಂದಿಗೂ ಸಾಕಷ್ಟು ಅಭಿಮಾನಿಗಳಿದೆ.
ನಂತರ ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪಲ್ಸರ್ ಎನ್ಎಸ್, ಟಿವಿಎಸ್ ಅಪಾಚೆ ಆರ್‌ಟಿಆರ್, ಮತ್ತು ಹೋಂಡಾ ಸಿಬಿ ಶೈನ್‌ನಂತಹ ಇತರ ಮೋಟಾರ್‌ಸೈಕಲ್‌ಗಳು ಸ್ಥಾನವನ್ನು ಪಡೆದುಕೊಂಡಿದೆ. ಐಷಾರಾಮಿ ವಿಭಾಗದಲ್ಲಿ, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಅತ್ಯಂತ ಜನಪ್ರಿಯ ಮಾದರಿಯಾಗಿದೆ, ನಂತರ ಹಾರ್ಲೆ ಡೇವಿಡ್‌ಸನ್ ಸ್ಟ್ರೀಟ್ 750 ಮತ್ತು ಕವಾಸಕಿ ನಿಂಜಾ ZX-10R ಬೈಕ್ ಗಳು ಸ್ಥಾನವನ್ನು ಪಡೆದುಕೊಂಡಿದೆ. ಈ ಅಧ್ಯಯನದ ಪ್ರಕಾರ, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿವೆ.
2015 ರಿಂದ, ಆಟೋಮ್ಯಾಟಿಕ್ ವಾಹನಗಳ ಪಾಲು ಕಳೆದ ವರ್ಷ ಶೇಕಡಾ 23 ರಿಂದ 33ಕ್ಕೆ ಏರಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಒಟ್ಟು ವಾಹನ ಮಾರಾಟದ ಶೇಕಡಾ ಒಂದರಲ್ಲಿ ನಿಂತಿದೆ ಎಂದು ಅಧ್ಯಯನ ಹೇಳುತ್ತದೆ. ಡೀಸೆಲ್ ಕಾರುಗಳು ಸಹ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿವೆ. ವಿಶೇಷವಾಗಿ ಮಾಲಿನ್ಯವನ್ನು ಕಡಿಮೆ ಮಾಡಲು ಎಲ್ಲಾ ಡೀಸೆಲ್ ಕಾರುಗಳ ಮೇಲೆ ಹೊಸ 10 ವರ್ಷಗಳ ಮಿತಿಯ ನಂತರ. ಡೀಸೆಲ್ ವಾಹನ ಪಾಲು ಇಳಿದಿದೆ.


Click it and Unblock the Notifications