ಬೈಕ್ ಅಪಘಾತಕ್ಕೆ ದೇಶದ ಅಗ್ರ ಮಹಿಳಾ ರೈಡರ್ ಬಲಿ
ಅತ್ಯಂತ ಖೇದಕರ ವಾರ್ತೆಯೊಂದರಲ್ಲಿ ದೇಶದ ಅಗ್ರ ಮಹಿಳಾ ರೈಡರ್ ವೀಣು ಪ್ಯಾಲಿವಾಲ್ (Veenu Paliwal) ಬೈಕ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಈ ಸುದ್ದಿಯು ವಾಹನ ಲೋಕಕ್ಕೆ ಭಾರಿ ಆಘಾತವನ್ನುಂಟು ಮಾಡಿದೆ.
ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ಸೋಮವಾರ ಸಂಜೆ ಅಪಘಾತ ಘಟಿಸಿದೆ. ಈ ವೇಳೆಯಲ್ಲಿ 44ರ ಹರೆಯದ ಪ್ಯಾಲಿವಾಲ್, ಹಾರ್ಲೆ ಡೇವಿಡ್ಸನ್ ರಾಷ್ಟ್ರವ್ಯಾಪಿ ಪ್ರವಾಸದಲ್ಲಿದ್ದರು.

ಭೋಪಾಲ್ ನಿಂದ 100 ಕೀ.ಮೀ. ದೂರದಲ್ಲಿರುವ ಗ್ಯಾರಸ್ ಪುರದ ಸಮೀಪದಲ್ಲಿ ರಸ್ತೆ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿತ್ತು.

ಈ ಸಂದರ್ಭದಲ್ಲಿ ಬೈಕ್ ನಿಂದ ಉರುಳಿದ್ದ ಪ್ಯಾಲಿವಾಲ್ ದೇಹಕ್ಕೆ ಗಂಭೀರ ಗಾಯಗಳು ಸಂಭವಿಸಿತ್ತು.

ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ವಿಧಿಶಾ ಜಿಲ್ಲಾ ಆಸ್ಪತ್ರೆಗೆ ತೆರಳಿದರೂ ವೈದ್ಯರಿಗೆ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಭೋಪಾಲದಿಂದ ಸಾಗರಕ್ಕೆ ಸಂಚರಿಸುತ್ತಿರುವ ವೇಳೆ ಅಪಘಾತ ಸಂಭವಿಸಿದೆ. ಈ ಸಂದರ್ಭದಲ್ಲಿ ಸಹ ಚಾಲಕ ದಿನೇಶ್ ತನ್ವಾರ್ ಜೊತೆಗಿದ್ದರು.

ಮೂಲತ: ಜೈಪುರ ನಿವಾಸಿಯಾಗಿರುವ ಪ್ಯಾಲಿವಾಲ್, ಮೋಟಾರ್ ಸೈಕಲ್ ಕೌಶಲ್ಯ ಪ್ರದರ್ಶಿಸುವುದರಲ್ಲಿ ನಿಪುಣರಾಗಿದ್ದರು. ಅಲ್ಲದೆ ಹಾರ್ಲೆ ಡೇವಿಡ್ಸನ್ ಬೈಕ್ ನಲ್ಲಿ ಗಂಟೆಗೆ 180 ಕೀ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಗಮನ ಗಿಟ್ಟಿಸಿಕೊಂಡಿದ್ದರು.

ತಮ್ಮ ರಾಷ್ಟ್ರವ್ಯಾಪಿ ಸಂಚಾರದ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸುವುದು ವೀಣು ಪ್ಯಾಲಿವಾಲ್ ಅವರ ಉದ್ದೇಶವಾಗಿತ್ತು.

ಅಷ್ಟೇ ಯಾಕೆ ಇತ್ತೀಚೆಗಷ್ಟೇ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, 'ಲೇಡಿ ಆಫ್ 2016' ಎಂಬ ಬಿರುದನ್ನು ನೀಡಿ ಆಕೆಯನ್ನು ಗೌರವಿಸಿತ್ತು.

ಪ್ರಸ್ತುತ ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ.


Click it and Unblock the Notifications








