ಶೀಘ್ರ ಪ್ರಯಾಣ.. ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಸಿದ್ಧತೆ, ಭೂಮಿಗೆ ಬಂತು ಬಂಗಾರದ ಬೆಲೆ!
ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ಶುರುವಾಗಿದ್ದು, ಹೊಸ ಎಕ್ಸ್‌ಪ್ರೆಸ್‌ವೇ ಹಾಗೂ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಿದ್ದತೆಯನ್ನು ನಡೆಸುತ್ತಿವೆ. ನೂತನ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇ (Bengaluru-Mangaluru Expressway) ನಿರ್ಮಾಣಕ್ಕೆ ಹೆದ್ದಾರಿ ಸಚಿವಾಲಯ ಮುಂದಾಗಿದ್ದು, ಈ ಸಂಬಂಧ ಡಿಪಿಆರ್ ಸಿದ್ದಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಸದ್ಯ, ಇದೇ ಹೆದ್ದಾರಿ ಹಾದು ಹೋಗುವ ಮಾರ್ಗದ ಭೂಮಿಗೆ ಬಂಗಾರದ ಬೆಲೆ ಬಂದಿದೆ ಎಂದು ವರದಿಯಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮಂಗಳೂರಿನ ವಿವಿಧ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಚೇತರಿಕೆ ಕಂಡಿದೆ. ಇಲ್ಲಿನ ಕೊಟ್ಟಾರದಲ್ಲಿ 1.25 ಎಕರೆ ವಾಣಿಜ್ಯ ಭೂಮಿಯ ದರ ರೂ.37 ಕೋಟಿಗೆ ತಲುಪಿದೆ. ಪಂಪ್‌ವೆಲ್ ಹತ್ತಿರ ಮಾರಾಟಕ್ಕಿರುವ ಹಳೆಯ ಮನೆಗಳು ಹಾಗೂ ಜಮೀನಿನ ಬೆಲೆಗಳು ಕೂಡ ಗಗನಕ್ಕೇರಿಕೆಯಾಗಿವೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಈ ದರಗಳು ಮತ್ತಷ್ಟು ಹೆಚ್ಚಾಗುವ ನೀರಿಕ್ಷೆಯಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysore Expressway) ಮಾದರಿಯಲ್ಲಿಯೇ ನೂತನ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್‌ವೇಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಈ ಉದ್ದೇಶಿತ ರಸ್ತೆ 335 ಕಿ.ಮೀ ಉದ್ದವಿರಲಿದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಹೆದ್ದಾರಿ 4 ಅಥವಾ 6 ಲೈನ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಹೊಸ ಎಕ್ಸ್‌ಪ್ರೆಸ್‌ವೇ ಪ್ರಮುಖವಾಗಿ ತುಮಕೂರು ಮತ್ತು ಹಾಸನ ಜಿಲ್ಲೆಗಳಿಗೂ ಸಂಪರ್ಕ ಕೊಂಡಿಯಾಗಲಿದೆ. ಪ್ರಸ್ತುತ ಸಾಮಾನ್ಯ ವಾಹನಗಳಲ್ಲಿ ಬೆಂಗಳೂರಿನಲ್ಲಿ ಕರಾವಳಿ ನಗರಿ ಮಂಗಳೂರಿಗೆ ಹೋಗಲು 7 ಗಂಟೆಯಿಂದ 8 ಗಂಟೆ ಬೇಕಾಗುತ್ತದೆ. ಈ ನೂತನ ಹೆದ್ದಾರಿಯಿಂದ ಆದಷ್ಟು ತ್ವರಿತವಾಗಿ ಪ್ರಯಾಣ ಮಾಡಬಹುದು ಎನ್ನಲಾಗಿದೆ.
ಈ ಹೆದ್ದಾರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ - NHAI) ಹಾಗೂ ರಾಜ್ಯ ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಟೆಂಡರ್ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಒಂದಷ್ಟು ಸಮಯಾವಕಾಶ ಹಿಡಿಯಲಿದ್ದು, ಬಹುತೇಕ 2028ರ ಮೊದಲೇ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು-ಪುಣೆ ಎಕ್ಸ್‌ಪ್ರೆಸ್‌ವೇ (Bengaluru-Pune Expressway) ಕೂಡ ನಿರ್ಮಾಣವಾಗಲಿದೆ: ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್ಎಐ) ಭರದಿಂದ ತಯಾರಿ ನಡೆಸುತ್ತಿದೆ. ನೂತನ ಎಕ್ಸ್‌ಪ್ರೆಸ್‌ವೇ ಕರ್ನಾಟಕದ 9 ಮತ್ತು ಮಹಾರಾಷ್ಟ್ರದ 3 ಜಿಲ್ಲೆಗಳಲ್ಲಿ ಹಾದು ಹೋಗಲಿದೆ ಎನ್ನಲಾಗಿದೆ. ಇದು 8 ಲೈನ್‌ಗಳ ರಸ್ತೆಯಾಗಿರಲಿದ್ದು, ಈ ಹೆದ್ದಾರಿ ನಿರ್ಮಾಣಗೊಳಿಸಲು ರೂ.50,000 ಕೋಟಿ ಅನುದಾನ ಬೇಕಿದೆ ಎಂದು ತಿಳಿದುಬಂದಿದೆ.
ನೂತನ ಹೆದ್ದಾರಿ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕೆಲಸಗಳು ಅತಿ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಈ ಹೆದ್ದಾರಿ 700 ಕಿಲೋಮೀಟರ್ ಉದ್ದವಿರಲಿದ್ದು, ಸದ್ಯ ಬೆಂಗಳೂರು - ಪುಣೆ ನಡುವೆ 15 ಗಂಟೆಗಳ ಪ್ರಯಾಣದ ಅವಧಿಯಿದೆ. ಅದು 7 ಗಂಟೆಗಳಿಗೆ ಇಳಿಕೆಯಾಗುವ ನೀರಿಕ್ಷೆಯಿದೆ. ಎಲ್ಲವು ಅಂದುಕೊಂಡಂತೆ ಭೂ ಸ್ವಾಧೀನ ಒಳಗೊಂಡಂತೆ ಇತರೆ ಪ್ರಕ್ರಿಯೆಗಳು ಸುಸೂತ್ರವಾಗಿ ನಡೆದರೆ, ಈ ಹೆದ್ದಾರಿ 2028ರಲ್ಲಿ ಲೋಕಾರ್ಪಣೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications