ನೋ ಪಾರ್ಕಿಂಗ್‌ನಲ್ಲಿ ಲ್ಯಾಂಬೋರ್ಗಿನಿ ಪಾರ್ಕ್ ಮಾಡಿದ ನಟ: ದಂಡ ವಿಧಿಸಿ ಪೊಲೀಸರು ಟ್ವಿಟ್ಟರ್‌ನಲ್ಲಿ ಹಾಕಿದ್ದು ಯಾಕೆ?
ನಿಯಮಗಳು ಎಲ್ಲರಿಗೂ ಒಂದೇ, ಅದು ಸಾಮಾನ್ಯ ಸಾರ್ವಜನಿಕರಾದರೂ ಸರಿ ಅಥವಾ ಸೆಲೆಬ್ರಿಟಿಗಳಾದರೂ ಸರಿ. ಕೊಂಚ ತಡವಾದರೂ ಸರಿ, ನಿಯಮಗಳನ್ನು ಉಲ್ಲಂಘಿಸಿದವರಿಗೆ ನಮ್ಮಲ್ಲಿ ಶಿಕ್ಷೆ ಖಂಡಿತಾ ಸಿಗುತ್ತದೆ. ಈ ಹಿಂದೆ ಇದರ ಕುರಿತಾಗಿನ ಹಲವಾರು ಉದಾಹರಣೆಗಳನ್ನು ನಾವು ಟಿವಿ ಚಾನಲ್ ಮತ್ತು ಪತ್ರಿಕೆಗಳಲ್ಲಿ ನೋಡಿದ್ದೇವೆ.
ಇಲ್ಲೊಬ್ಬ ಖ್ಯಾತ ನಟ ತನ್ನ ದುಬಾರಿ ಐಶಾರಾಮಿ ಲ್ಯಾಂಬೋರ್ಗಿನಿ ಕಾರನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದಕ್ಕಾಗಿ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ ಅಪರೂಪದ ಘಟನೆಯೊಂದು ನಡೆದಿದೆ. ಹೌದು, ಬಾಲಿವುಡ್‌ನ ಖ್ಯಾತ ನಟರಾದಂತಹ ಕಾರ್ತಿಕ್ ಆಯರ್ನ್ ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದರು. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಕಾರ್ತಿಕ್ ಆರ್ಯನ್ ಅವರ ಬಳಿ ದಂಡ ವಸೂಲಿ ಮಾಡಿದ್ದಾರೆ.

ಕಾರ್ತಿಕ್ ಆರ್ಯನ್ ಅವರು ಹೊಸ ಚಿತ್ರವಾದ ಶೆಹ್ಝಾದ್ ಚಿತ್ರ ಆರಂಭಿಸುವ ಮೊದಲು ದೇವರ ಆಶಿರ್ವಾದ ಪಡೆಯಲು ಮುಂಬೈನ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿದ್ದರು. ಪೂಜೆ ಮುಗಿಸಿ ಮರಳಿ ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದಾಗ ಅಲ್ಲಿದ್ದ ಮುಂಬೈ ಪೊಲೀಸರು ದಂಡ ವಿಧಿಸಿದ ರಶೀದಿಯನ್ನು ನಟನ ಕೈಗಿಟ್ಟರು. ಆಗಲೇ ಕಾರ್ತಿಕ್ ಆರ್ಯನ್ ಅವರಿಗೆ ತಿಳಿದಿದ್ದು ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ನಿಲ್ಲಿಸಿದ್ದ ಸ್ಥಳ ನೋ ಪಾರ್ಕಿಂಗ್ ಎಂದು.
ಇನ್ನು ಇತ್ತ ಕಡೆ ಕಾರ್ತಿಕ್ ಆಯರ್ನ್ ಅವರಿಗೆ ಚಲನ್ ನೀಡಿದ ಕೂಡಲೇ ಮುಂಬೈ ಪೊಲೀಸರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟನ ಕಪ್ಪು ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರ್‌ನ ಚಿತ್ರವನ್ನು ತೆಗೆದು ಆರ್ಯನ್ ಅವರ ಚಿತ್ರಗಳ ಹೆಸರುಗಳನ್ನು ಪೋಣಿಸಿಕೊಂಡು ಆಕರ್ಷಕ ತಲೆ ಬರಹವೊಂದನ್ನು ನೀಡಿ ಪೋಸ್ಟ್ ಮಾಡಿದ್ದಾರೆ. ಪೊಲೀಸರು ಪೋಸ್ಟ್ ಮಾಡಿದ ಆ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮುಂಬೈ ಪೊಲೀಸರಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸೆಲೆಬ್ರಿಟಿಗಳಿಗೆ ಪೊಲೀಸರು ದಂಡ ವಿಧಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕಿಂತಲೂ ಹಿಂದೆ ನಿಯಮಗಳನ್ನು ಮೀರಿದ ಹಲವಾರು ಸೆಲೆಬ್ರಿಟಿಗಳು, ನಟರಿಗೆ ಪೊಲೀಸರು ದಂಡವನ್ನು ವಿಧಿಸಿರುವ ಉದಾಹರಣೆ ನಮ್ಮ ಮುಂದಿದೆ. ಕಳೆದ ವರ್ಷ ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೂ ಹೈದರಬಾದ್ ಪೊಲೀಸರು ದಂಡ ವಿಧಿಸಿದ್ದರು. ತಮ್ಮ ಕಾರಿಗೆ ಕಪ್ಪು ಬಣ್ಣದ ಕೂಲಿಂಗ್ ಪೇಪರನ್ನು ಹಾಕಿದ್ದರು ಎಂಬ ಕಾರಣಕ್ಕೆ ಅಲ್ಲು ಅರ್ಜುನ್ ಪೊಲೀಸರಿಗೆ ದಂಡ ತೆತ್ತಿದ್ದರು.
ಇದೇ ರೀತಿ ತೆಲುಗಿನ ಮತ್ತೋರ್ವ ಸ್ಟಾರ್ ಆತ ನಾಗ ಚೈತನ್ಯ ಅವರೂ ಸಹ ಪೊಲೀಸರಿಗೆ ದಂಡ ತೆತ್ತಿದ್ದರು. ತಮ್ಮ ಟೊಯೋಟಾ ವೆಲ್ಫಯೈರ್ ಐಶಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡ ಹಾಕಿದ ಪೊಲೀಸರು ದಂಡ ವಿಧಿಸಿದ್ದರು. ಇವರೂ ಸಹ ತಮ್ಮ ಕಾರಿನಲ್ಲಿ ಕಪ್ಪು ಬಣ್ಣದ ಟಿಂಟನ್ನು ಬಳಸಿದ್ದರು ಎಂಬ ಕಾರಣಕ್ಕೆ ಪೊಲೀಸರು ಚಲನ್ ಹರಿದಿದ್ದರು. ಕಪ್ಪು ಬಣ್ಣದ ಟಿಂಟನ್ನು ಸರ್ವೋಚ್ಚ ನ್ಯಾಯಲಯವು ನಿರೋಧಿಸಿದ್ದು, ಇದನ್ನು ಬಳಸಲು ವಿಶೇಷ ಅನುಮತಿಯನ್ನು ಪಡೆಯಬೇಕಾಗಿದೆ.

ಇನ್ನು ಕಾರ್ತಿಕ್ ಆರ್ಯನ್ ಅವರು ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಭಾರತಕ್ಕೆ ತರಲು ಬರೋಬ್ಬರಿ 50 ಲಕ್ಷ ರೂಪಾಯಿಗಳನ್ನು ಹೆಚ್ಚುವರಿಯಾಗಿ ಖರ್ಚು ಮಾಡಿದ್ದರು. ಆರ್ಯನ್ ಈ ಕಾರನ್ನು ನೇರವಾಗಿ ಲ್ಯಾಂಬೋರ್ಗಿನಿಯ ಮೂಲಸ್ಥಾನವಾದ ಇಟಲಿಯ ಸಾಂತ್ ಆಗಸ್ಟಾ ಬೋಲೋನ್ಸೆಯಿಂದ ಏರ್‌ಲಿಫ್ಟ್ ಮಾಡಿದ್ದರು.ಮೂರು ತಿಂಗಳ ಹಿಂದೆ ಕೈ ಸೇರಿದ ಈ ಲ್ಯಾಂಬೋರ್ಗಿನಿ ಉರಸ್ ಕಾರು ತಮ್ಮ ಕೈ ಸೇರಲು ಕಾರ್ತಿಕ್ ಆರ್ಯನ್ ಬಹಳಷ್ಟು ಖರ್ಚು ಮಾಡಿದ್ದಾರೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ಕಾರ್ತಿಕ್ ಆರ್ಯನ್ ಅವರ ಬಳಿ ಕೇವಲ ಲ್ಯಾಂಬೋರ್ಗಿನಿ ಉರುಸ್ ಮಾತ್ರವಲ್ಲ, ಮೆಕ್‌ಲಾರ್ನ್ ಜಿಟಿಯಂತಹ ಹಲವಾರು ಐಷಾರಾಮಿ ಕಾರುಗಳಿವೆ. ಭೂಲ್ ಭುಲಯ್ಯ - ೨ ಚಿತ್ರದ ಯಶಸ್ಸಿಗಾಗಿ ಆ ಚಿತ್ರದ ನಿರ್ಮಾಪಕರಾದ ಭೂಷಣ್ ಕುಮಾರ್ ಅವರು ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಟ್ರಾಫಿಕ್ ನಿಯಮಗಳು ಎಲ್ಲರಿಗೂ ಒಂದೆ. ಟ್ರಾಫಿಕ್ ನಿಯಮಗಳನ್ನು ಮೀರಿದರೆ ಖಂಡಿತಾ ಅಂತಹ ವ್ಯಕ್ತಿಗಳಿಗೆ ದಂಡ ವಿಧಿಸುವುದಲ್ಲಿ ಯಾವುದೇ ತಪ್ಪಿಲ್ಲ.


Click it and Unblock the Notifications