ಉದ್ಯೋಗಿಗೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರು ಉಡುಗೊರೆ ನೀಡಿದ ಉದ್ಯಮಿ
ಸಾಮಾನ್ಯವಾಗಿ ಹಲವು ಸಂಸ್ಥೆಗಳು ಉದ್ಯೋಗಿಗಳಿಗೆ ಸಿಹಿ ತಿಂಡಿ, ಬಟ್ಟೆ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಕೇರಳದ ಒಬ್ಬ ಉದ್ಯೋಗಿಯೊಬ್ಬರಿಗೆ ದುಬಾರಿ ಬೆಲೆಯ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಎಸ್‍ಯುವಿ ಕಾರು ಉಡುಗೊರೆಯಾಗಿ ಸಿಕ್ಕಿದೆ.

ಸಿ.ಆರ್. ಅನೀಶ್ ಎಂಬ ವ್ಯಕ್ತಿ ಕಳೆದ 22 ವರ್ಷಗಳಿಂದ ಉದ್ಯಮಿ ಎಕೆ ಶಾಜಿ ಅವರ ಸಂಸ್ಥೆಯ ಮುಖ್ಯ ವ್ಯವಹಾರ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಉದ್ಯಮಿ ಎ.ಕೆ.ಶಾಜಿ.ಅವರು ತನ್ನ ಉದ್ಯೋಗಿ ಸಿ.ಆರ್. ಅನೀಶ್ ಅವರ ಕೆಲಸ ನಿಷ್ಠೆಗಾಗಿ ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಎಸ್‍ಯುವಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಶಾಜಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಸಿಆರ್ ಅನೀಶ್ ಅವರಿಗಾಗಿ ಸಣ್ಣ ಸಮಾರಂಭವ ಏರ್ಪಡಿಸಿ ಕೇಕ್ ಕತ್ತರಿಸಿ ಬಳಿಕ ಈ ಐಷಾರಾಮಿ ಮರ್ಸಿಡಿಸ್ ಬೆಂಝ್ ಕಾರನ್ನು ಹಸ್ತಾಂತರಿಸಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಅನಿ... ಕಳೆದ 22 ವರ್ಷಗಳಿಂದ ನೀವು ನನಗೆ ಬಲವಾದ ಬೆನ್ನೆಲುಬಾಗಿ ಇದ್ದೀರಿ. ನಿಮ್ಮ ಹೊಸ ಪ್ರಯಾಣದ ಪಾಲುದಾರನನ್ನು ನೀವು ಪ್ರೀತಿಸುತ್ತಿದ್ದೀರಿ ಎಂದು ಭಾವಿಸುತ್ತೇವೆ ಎಂದು ಉದ್ಯಮಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಸಿ.ಆರ್. ಅನೀಶ್ ಅವರು ಉದ್ಯಮಿ ಶಾಜಿ ತನ್ನ ರಿಟೇಲ್ ಕಂಪನಿ MyG ಅನ್ನು ಪ್ರಾರಂಬಿಸುವ ಮೊದಲೇ ಶಾಜಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಶಾಜಿ ತನ್ನ ಉದ್ಯೋಗಿಗೆ ಕಾರನ್ನು ಉಡುಗೊರೆಯಾಗಿ ನೀಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಅವರು ತಮ್ಮ 6 ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಉದ್ಯೋಗಿಗಳು ಸಂಸ್ಥೆಯಲ್ಲಿ ಸಂತೋಷವಾಗಿರಬೇಕು ಎಂದು ಶಾಜಿ ಅರ್ಥಮಾಡಿಕೊಂಡಂತೆ ತೋರುತ್ತದೆ.

ಒಬ್ಬ ವ್ಯಕ್ತಿಯು ಒಂದೇ ಸಂಸ್ಥೆಯಲ್ಲಿ ದೀರ್ಘಕಾಲ ಉಳಿಯಲು ನಿರ್ಧರಿಸುವ ನಿರ್ಣಾಯಕ ಅಂಶಗಳಲ್ಲಿ ಇದು ಒಂದಾಗಿದೆ. ಮೇಲೆ ಹೇಳಿದಂತೆ, ಅನೀಶ್ ಕಳೆದ 22 ವರ್ಷಗಳಿಂದ ಶಾಜಿಯ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಅನೀಶ್‌ಗೆ ಉಡುಗೊರೆಯಾಗಿ ನೀಡಿದ ಎಸ್‌ಯುವಿ ಮರ್ಸಿಡಿಸ್ ಬೆಂಝ್ ಜಿಎಲ್‌ಎ 220ಡಿ ಆಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.45.60 ಲಕ್ಷವಾಗಿದೆ. ಇದು 2.0-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಬರುವ ಮಿಡ್-ಸ್ಪೆಕ್ ರೂಪಾಂತರವಾಗಿದೆ.

ಈ ಎಂಜಿನ್ 192 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಹೊಂದಿಕೆಯಾಗುತ್ತದೆ ಅದು ಮುಂಭಾಗದ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಈ ಹಿಂದೆ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಕಳೆದ ವರ್ಷದಿಡ ಭಾರತದಲ್ಲೇ ಪ್ರಮುಖ ಕಾರುಗಳ ಅಸೆಂಬ್ಲಿ ಪ್ರಕ್ರಿಯೆ ಕೈಗೊಂಡಿದ್ದು, ಜಿಎಲ್ಎ ಮಾದರಿಯು ಸಹ ಭಾರತದಲ್ಲಿ ನಿರ್ಮಾಣಗೊಂಡ ಮೂರನೇ ಕಾರು ಮಾದರಿಯಾಗಿದೆ.

ಈ ಎಸ್‍ಯುವಿಯ ಕ್ಯಾಬಿನ್ ಸ್ಪೆಸ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಆವೃತ್ತಿಯು ಈ ಹಿಂದಿನ ಮಾದರಿಗಿಂತ 30 ಎಂಎಂ ಹೆಚ್ಚುವರಿ ಉದ್ದಳತೆ ಮತ್ತು 104 ಎಂಎಂ ಕಡಿಮೆ ಎತ್ತರ ಹೊಂದಿದೆ. ಇನ್ನು ಹಾಗೆಯೇ ಹೊಸ ಕಾರಿನಲ್ಲಿ ನವೀಕರಿಸಲಾದ ಗ್ರಿಲ್ ವಿನ್ಯಾಸ, ಮರುವಿನ್ಯಾಸಗೊಳಿಸಲಾದ ಬಂಪರ್, ದೊಡ್ಡ ಗಾತ್ರದ 19-ಇಂಚಿನ ಅಲಾಯ್ ವೀಲ್ಹ್, ಅಗ್ರೇಸಿವ್ ಟ್ವಿನ್ ಎಕ್ಸಾಸ್ಟ್, ಆಕರ್ಷಕವಾಗಿರುವ ಎಎಂಜಿ ಬ್ಯಾಡ್ಜ್ ಸೇರಿದಂತೆ ಹಲವಾರು ಉನ್ನತೀಕರಿಸಿದ ಐಷಾರಾಮಿ ಫೀಚರ್ಸ್ ಪಡೆದುಕೊಂಡಿದೆ.

ಮರ್ಸಿಡಿಸ್ ಕಂಪನಿಯು ಕಾರಿನಲ್ಲಿ 'ಮಿ ಕನೆಕ್ಟ್' ಕಾರ್ ಕೆನೆಕ್ಟ್ ಟೆಕ್ನಾಲಜಿ ಮೂಲಕ ಗರಿಷ್ಠ ಸೇಫ್ಟಿ ಫೀಚರ್ಸ್‌ಗಳನ್ನು ಹೆಚ್ಚಿಸಿದ್ದು, ವಾಯ್ಸ್ ಅಸಿಸ್ಟ್ ಮತ್ತು ಗೂಗಲ್ ಹೋಂ ಸೌಲಭ್ಯಗಳು ಕಾರು ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಸುರಕ್ಷಿತಗೊಳಿಸುತ್ತವೆ. ಜಿಎಲ್‍ಎ ಎಸ್‍ಯುವಿಯು ಹೊಸ ಎಂಫ್‍ಎ-2 ಪ್ಲಾಟ್‍ಫಾರಂ ಅನ್ನು ಆಧರಿಸಿದೆ. ಮರ್ಸಿಡಿಸ್‍ನ ಇತರ ಕಾಂಪ್ಯಾಕ್ಟ್ ಮಾದರಿಗಳಾದ ಹೊಸ ಎ-ಕ್ಲಾಸ್, ಸಿಎಲ್‍ಎ ಮತ್ತು ಜಿಎಲ್‍ಬಿ ಎಸ್‍ಯುವಿಗಳು ಕೂಡ ಇದೇ ಪ್ಲಾಟ್‍ಫಾರ್ಮ್ ಆಧರಿಸಿ ತಯಾರಾಗಿವೆ. ಜಿಎಲ್‍ಎ ಎಸ್‍ಯುವಿಯು ಕ್ರಾಸ್‌ಒವರ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

ಇನ್ನು ಇದರ ಕ್ಯಾಬಿನ್ ಒಳಗೆ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಹೊಸ ಮರ್ಸಿಡಿಸ್ ಜಿಎಲ್‍ಇ, ಇನ್ಫೋಟೇನ್‍ಮೆಂಟ್ ಸಿಸ್ಟಂ ಹಾಗೂ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ಗಳಿಗಾಗಿ ಪ್ರತ್ಯೇಕ ಎರಡು ಸ್ಕ್ರೀನ್‍ಗಳನ್ನು ಹೊಂದಿರಲಿದೆ. ಜಿಎಲ್ಎ ಎಸ್‍ಯುವಿಯಲ್ಲಿ ಸೆಂಟರ್ ಕಂನ್ಸೋಲ್‍ನಲ್ಲಿ ಟಚ್‍ಪ್ಯಾಡ್ ಹಾಗೂ ಇಂಟಿಗ್ರೇಟೆಡ್ ಗ್ರಾಬ್ ಹ್ಯಾಂಡಲ್‍ಗಳಿರಲಿವೆ. ಹೊಸ ಎಸ್‍ಯುವಿಯ ಕ್ಯಾಬಿನ್‍ಗೆ ಪ್ರೀಮಿಯಂ ಅನುಭವವನ್ನು ನೀಡುವುದಕ್ಕಾಗಿ ಇಂಟಿರಿಯರ್‍ನಲ್ಲಿ ಕ್ಲೈಮೇಟ್ ಕಂಟ್ರೋಲ್, ಎಸಿ ವೆಂಟ್‍ಗಳಿವೆ. ಈ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಎಸ್‍ಯುವಿಯನ್ನು 2020ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶಿಸಲಾಗಿತ್ತು.

ಮರ್ಸಿಡಿಸ್ ಬೆಂಝ್ ಜಿಎಲ್‌ಎ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಕ್ಸ್ 1, ಲ್ಯಾಂಡ್ ರೋವರ್ ಡಿಸ್ಕವರಿ, ಆಡಿ ಕ್ಯೂ3 ಮತ್ತು ವೋಲ್ವೋ ಎಕ್ಸ್‌ಸಿ40 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಮರ್ಸಿಡಿಸ್ ಬೆಂಝ್ ಜಿಎಲ್‌ಎ ಅತ್ಯಾಧುನಿಕ ಪೀಚರ್ಸ್, ಆಕರ್ಷಕ ಮತ್ತು ಉತ್ತಮ ಕಾರ್ಯಕ್ಷಮತೆಯ ಎಸ್‍ಯುವಿಯಾಗಿದೆ


Click it and Unblock the Notifications