ಇಬ್ಬರು ಯುವ ವೈದ್ಯರ ದುರ್ಮರಣ: Google Map ಅನ್ನು ಕಣ್ಣುಮುಚ್ಚಿ ನಂಬಬೇಡಿ ಎಂದ ಪೊಲೀಸರು
ಅನೇಕ ಜನರು ಒಂದು ಸ್ಥಳದಿಂದ ಮತ್ತೊಂದು ಜಾಗಕ್ಕೆ ಹೋಗಲು ದಾರಿ ಗೊತ್ತಿಲ್ಲ ಅಂದರೆ ಗೂಗಲ್ ಮ್ಯಾಪ್ಸ್ (Google Map) ಮೇಲೆ ಅವಲಂಬಿತರಾದ್ದಾರೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಸಾಮಾನ್ಯವಾಗಿ ನಿಖರವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಅಷ್ಟು ನಿಖರವಿರಲ್ಲ. ಕೆಲವು ಸಲ ಇತರ ಜಾಗಗಳಿಗೂ ಕರೆದುಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ.
ನಾವು ಗೂಗಲ್ ಮ್ಯಾಪ್ ನೋಡಿ ಹೋಗುವಾಗ, ಸಾಮಾನ್ಯವಾಗಿ ಫ್ಲೈಓವರ್ ತೆಗೆದುಕೊಳ್ಳುವ ಅಥವಾ ಅದರ ಕೆಳಗೆ ಹೋಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತೇವೆ. ಗೂಗಲ್ ಮ್ಯಾಪ್ ನಮ್ಮ ಡ್ರೈವಿಂಗ್‌ನ ಅವಿಭಾಜ್ಯ ಅಂಗವಾಗಿರುವುದರಿಂದ, ನಮ್ಮಲ್ಲಿ ಹೆಚ್ಚಿನವರು ನಾವು ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಗೂಗಲ್ ಮ್ಯಾಪ್ ಅನ್ನು ಆನ್ ಮಾಡುತ್ತೇವೆ. ಗೂಗಲ್ ಮ್ಯಾಪ್ ಅನ್ನು ಕಣ್ಮುಚ್ಚಿ ನಂಬುವ ಹಾಗೆಯೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಅನೇಕ ಘಟನೆಗಳ ಬಗ್ಗೆ ವರದಿಗಳಾಗಿದೆ.

ಇತ್ತೀಚೆಗೆ ಪಕ್ಕದ ಕೇರಳ ರಾಜ್ಯದಲ್ಲಿ ಗೂಗಲ್ ಮ್ಯಾಪ್ ನಂಬಿ ದುರ್ಘಟನೆ ಸಂಭವಿಸಿದ ಬಗ್ಗೆ ವರದಿಗಳಾಗಿದೆ. ಕೇರಳದ ಇಬ್ಬರು ಯುವ ವೈದ್ಯರು ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರಿಗೆ ದಾರಿ ಗೊತ್ತಿಲ್ಲದ ಕಾರಣ ಗೂಗಲ್ ಮ್ಯಾಪ್ ಹಾಕಿ ಅದನ್ನು ನೋಡಿ ಹೋಗುತ್ತಿದ್ದರು. ಈ ವೇಳೆ ಮಾರ್ಗದ ಕುರಿತಾದ ಎಡವಟ್ಟಿನಿಂದಾಗಿ ಕೊಚ್ಚಿಯ ಗೋಥೂರತ್ ಎಂಬಲ್ಲಿ ಕಾರು ಪೆರಿಯಾರ್ ನದಿಗೆ ಬಿದ್ದಿದೆ.
ಕೇರಳದ ಇಬ್ಬರು ಯುವ ವೈದ್ಯರು ಈ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಯುವ ವೈದ್ಯರಾದ 29 ವರ್ಷ ವಯಸ್ಸಿನ ಅದ್ವೈತ್ ಹಾಗೂ ಅಜ್ಮಲ್ ಮೃತಪಟ್ಟಿದ್ದಾರೆ. ಕೊಚ್ಚಿಯ ಗೋಥೂರತ್ ನಲ್ಲಿ ತಡರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಈ ವೇಳೆ ಭಾರೀ ಮಳೆಯಾಗುತ್ತಿತ್ತು. ಗೋಚರತೆ ಕೂಡ ತುಂಬಾ ಕಡಿಮೆ ಇತ್ತು. ಚಾಲಕ ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಕಾರು ಚಲಾಯಿಸುತ್ತಿದ್ದರು.

ಎಡ ತಿರುವಿನಲ್ಲಿ ಕಾರನ್ನು ತಿರುಗಿಸಬೇಕಾಗಿದ್ದರೂ ಆಕಸ್ಮಿಕವಾಗಿ ಮುಂದೆ ಹೋಗಿದ್ದರಿಂದ ಕಾರು ನದಿಗೆ ಬಿದ್ದಿದೆ. ವರದಿಗಳ ಪ್ರಕಾರ, ಶನಿವಾರ ಡಾ.ಅದ್ವೈತ್ ಅವರ ಹುಟ್ಟುಹಬ್ಬವಾಗಿತ್ತು. ಈ ಕಾರಿನಲ್ಲಿ ಅದ್ವೈತ್ ಜೊತೆಗೆ ನಾಲ್ವರು ಇದ್ದರು. ಐವರೂ ಕೊಚ್ಚಿಯಿಂದ ಕೊಡಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಅದ್ವೈತ್ ಹುಟ್ಟುಹಬ್ಬಕ್ಕೆ ಇವರು ಶಾಪಿಂಗ್‌ಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ, ಗೂಗಲ್ ಮ್ಯಾಪ್ ನೀಡಿದ ತಪ್ಪು ನಿರ್ದೇಶನದಿಂದ ಅಥವಾ ವಾಹನದ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆಯೇ ಎಂಬ ಬಗ್ಗೆ ನಾವು ಯಾವುದೇ ನಿಖರವಾದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಅಪಘಾತದ ಬಗ್ಗೆ ಪೊಲೀಸರು (Police) ತನಿಖೆ ನಡೆಸುತ್ತಿದ್ದಾರೆ. ಇಬ್ಬರು ಯುವ ವೈದ್ಯರ ಜೊತೆಗೆ ಇನ್ನೂ ಮೂವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಅವರು ಬದುಕುಳಿದಿದ್ದಾರೆ.

ಗಾಯಗೊಂಡ ಮೂವರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಲಾವಣೆ ಮಾಡುತ್ತಿದ್ದ ಯುವ ವೈದ್ಯರು ಗೂಗಲ್ ಮ್ಯಾಪ್ ಹಾಕಿಕೊಂಡಿದ್ದರು. ಈ ವೇಳೆ ತಾಂತ್ರಿಕ ದೋಷ ಉಂಟಾಗಿ ಗೂಗಲ್ ಮ್ಯಾಪ್ ಅವರನ್ನು ನದಿ ಬಳಿಗೆ ತಂದು ನಿಲ್ಲಿಸಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಈ ಘಟನೆ ನಡೆದಿರುವುದು ಮಧ್ಯ ರಾತ್ರಿಯಾಗಿತ್ತು. ಜೊತೆಗೆ ವಿಪರೀತ ಮಳೆ ಕೂಡಾ ಬರುತ್ತಿತ್ತು.ಸ ರಿಯಾಗಿ ಏನೂ ಕಾಣುತ್ತಿರಲಿಲ್ಲ.
ಹೀಗಾಗಿ. ಗೂಗಲ್ ಮ್ಯಾಪ್‌ನ ಮಾರ್ಗವನ್ನು ಆತನ ಸೂಕ್ತವಾಗಿ ಗ್ರಹಿಸಲು ಸಾಧ್ಯವಾಗಲಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಇನ್ನು ಗೂಗಲ್ ಮ್ಯಾಪ್ ರಸ್ತೆ ಗೊತ್ತಿಲ್ಲದ ವಾಹನ ಸವಾರರಿಗೆ ನೆರವಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೆಲವೊಮ್ಮೆ ಗೂಗಲ್ ಮ್ಯಾಪ್ ಅನ್ನು ಕಣ್ಣುಮುಚ್ಚಿ ನಂಬುವುದು ಅಪಾಯಕ್ಕೆ ದೂಡಬಹುದು. ಈ ರೀತಿಯ ಹಲವಾರು ಘಟನೆಗಳು ವಿಶ್ವಾದ್ಯಂತ ಹಾಗೂ ಭಾರತದಲ್ಲಿಯೂ ನಡೆದಿವೆ. ಕೆಲವರು ಗೂಗಲ್ ಮ್ಯಾಪ್ ಅನ್ನು ನಂಬಿ ದಾರಿ ತಪ್ಪಿರುವ ಹಲವಾರು ಉದಾಹರಣೆಗಳಿವೆ.
ಗೂಗಲ್ ಮ್ಯಾಪ್ ಅನ್ನು ಅತಿಯಾಗಿ ನಂಬಿಕೊಂಡವರಿಗೆ ಈ ಘಟನೆಯು ಆಘಾತವನ್ನುಂಟು ಮಾಡಿದೆ. ನಗರ ಪ್ರದೇಶಗಳಲ್ಲಿ ದಿನ ನಿತ್ಯ ಗೂಗಲ್ ಮ್ಯಾಪ್ ಬಳಸಿದರೆ ಯಾವುದೇ ತೊಂದರೆಯಿಲ್ಲ. ಆದರೆ ದೂರದ ಪ್ರಯಾಣ ಮಾಡುವಾಗ, ಗೂಗಲ್ ಮ್ಯಾಪ್ ಅನ್ನು ಕುರುಡಾಗಿ ನಂಬುವುದು ಅಪಾಯಕಾರಿಯಾಗಬಲ್ಲದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ದೂರದ ಪ್ರಯಾಣವನ್ನು ಆರಂಭಿಸುವ ಮೊದಲು ಆ ಮಾರ್ಗದಲ್ಲಿ ಓಡಾಡಿ ಅನುಭವವಿರುವವರಿಂದ ಮಾರ್ಗದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.


Click it and Unblock the Notifications