KSRTC 'ಪಲ್ಲಕ್ಕಿ' ನಾನ್-ಎಸಿ ಸ್ಲೀಪರ್ ಬಸ್ ಬರುತ್ತಿವೆ: ಕಡಿಮೆ ಖರ್ಚಿನಲ್ಲಿ ನಿಮ್ಮೂರಿಗೆ ಹೋಗ್ಬಹುದು!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ತನ್ನ ಪ್ರಯಾಣಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ದೂರದೂರುಗಳಿಗೆ ಕಡಿಮೆ ಖರ್ಚಿನಲ್ಲಿ ಜನರು ಹೋಗಲು, ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅತ್ಯಾಧುನಿಕ ನಾನ್ ಎಸಿ ಸ್ಲೀಪರ್ (Non AC Sleeper) ಬಸ್‌ಗಳನ್ನು ಪರಿಚಯಿಸುತ್ತಿದೆ. ಆ ಬಗೆ ಇಲ್ಲಿದೆ ಮಾಹಿತಿ.
ಕೆಎಸ್ಆರ್ಟಿಸಿಯ ಸ್ಲೀಪರ್ ಬಸ್‌ಗಳು ಪ್ರೀಮಿಯಂ ಸೌಲಭ್ಯಗವನ್ನು ಹೊಂದಿರುವುದರಿಂದ ಅವುಗಳಿಗೆ ಪ್ರಯಾಣಿಕರಿಂದ ವಿಪರೀತ ಬೇಡಿಕೆಯಿದ್ದು, ಹಬ್ಬದ ಸಂದರ್ಭದಲ್ಲಿ ತುಂಬಿ ತುಳುಕುತ್ತಿರುತ್ತವೆ. ಎಸಿ (ಹವಾನಿಯಂತ್ರಿತ) ಬಸ್ಗಳಿಗೆ ಹೋಲಿಸಿದರೆ, ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಟಿಕೆಟ್ ದರ ಕಡಿಮೆಯಿರುವುದರಿಂದ ಜನರು ಅವುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದೀಗ, ಕೆಎಸ್ಆರ್ಟಿಸಿ ಹೊಸದಾಗಿ 40 ನಾನ್ ಎಸಿ ಸ್ಲೀಪರ್ ಬಸ್‌ಗಳನ್ನು ಕೊಂಡುಕೊಂಡಿದೆ.

ಈ ಬಸ್‌ಗಳು ಯಾವುದೇ ಎಸಿ ಬಸ್ಗಳಿಗೆ ಕಡಿಮೆ ಇಲ್ಲದಂತೆ ವಿನ್ಯಾಸವನ್ನು ಹೊಂದಿದ್ದು, ಹೆಚ್ಚು ಅತ್ಯಾಧುನಿಕ ಸೌಲಭ್ಯವನ್ನು ಪಡೆದಿವೆ. ನೂತನ ಬಸ್ಗಳ ವಿಡಿಯೋವನ್ನು ಕೆಎಸ್ಆರ್ಟಿಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ಹಂಚಿಕೊಂಡಿದೆ. ಹೊಸ ನಾನ್ ಎಸಿ ಸ್ಲೀಪರ್ ಬಸ್ಗಳಿಗೆ 'ಪಲ್ಲಕ್ಕಿ' ಎಂದು ಹೆಸರಿಡಲಾಗಿದೆ. ಅಂಬಾರಿ ಎಸಿ ಬಸ್ಗೆ ಹೆಚ್ಚುಕಮ್ಮಿ ಹೋಲಿಕೆಯಾಗಲಿದ್ದು, ನಾಳೆಯಿಂದ (ಅ.7) ಅಧಿಕೃತವಾಗಿ ರಸ್ತೆಗಿಳಿಯಲಿವೆ.
ಬೆಂಗಳೂರಿನ ವಿಧಾನಸೌಧ ಪೂರ್ವ ದ್ವಾರದ ಸಮೀಪ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು, 40 'ಪಲ್ಲಕ್ಕಿ' (ನಾನ್ ಎಸಿ ಸ್ಲೀಪರ್) ಬಸ್‌ಗಳನ್ನು ಲೋಕಾರ್ಪಣೆ ಮಾಡಲಾಗಿದ್ದಾರೆ. ಇದರೊಟ್ಟಿಗೆ 100 ನೂತನ ಕರ್ನಾಟಕ ಸಾರಿಗೆ ಬಸ್ಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ. ಕೆಲವೇ ದಿನಗಳಲ್ಲಿ ಪಲ್ಲಕ್ಕಿ ಬಸ್ ಸಂಚಾರಿಸುವ ಮಾರ್ಗ ಹಾಗೂ ಟಿಕೆಟ್ ದರದ ಕುರಿತು ವಿವರಗಳು ಸಿಗಲಿವೆ.

ಆಗಸ್ಟ್ 28 ರಂದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್ಟಿಸಿ), 'ಕಲ್ಯಾಣ ರಥ' ಹೆಸರಿನಲ್ಲಿ ನೂತನ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ನ್ನು ಲೋಕಾರ್ಪಣೆ ಮಾಡಿತ್ತು. ಈ ಬಸ್ ಸಾಕಷ್ಟು ಆಕರ್ಷಕ ಸೌಲಭ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ಸಂಪೂರ್ಣ ಎಸಿ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನಗಳು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಬೆಡ್ ಲೈಟ್ ಸೇರಿದಂತೆ ಹತ್ತಾರು ಸೌಕರ್ಯಗಳನ್ನು ಒಳಗೊಂಡಿದೆ.
ಇದೇ ವರ್ಷದ ಫೆಬ್ರವರಿಯಲ್ಲಿ ಕೆಎಸ್ಆರ್ಟಿಸಿ ತನ್ನ ಪ್ರೀಮಿಯಂ 'ಅಂಬಾರಿ ಉತ್ಸವ' ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್‌ಗಳನ್ನು ರಸ್ತೆಗಿಳಿಸಿತ್ತು. ಇದು, ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರುವ ಬಸ್ ಆಗಿದ್ದು, ಬೆಂಗಳೂರು - ಹೈದರಾಬಾದ್, ಬೆಂಗಳೂರು - ಪಣಜಿ, ಬೆಂಗಳೂರು - ತ್ರಿಶೂರು, ಬೆಂಗಳೂರು - ಎರ್ನಾಕುಲಂ, ಬೆಂಗಳೂರು - ತಿರುವನಂತಪುರ ಸೇರಿದಂತೆ ವಿವಿಧ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತಿದೆ.
ಇನ್ನು, ದೇಶದ ಬೇರೆ ಯಾವುದೇ ಸಾರಿಗೆ ನಿಗಮಗಳು ಹೊಂದಿರದ ರೀತಿಯಲ್ಲಿ ಕೆಎಸ್ಆರ್ಟಿಸಿ ಅಂಬಾರಿ, ಐರಾವತ ಹಾಗೂ ರಾಜಹಂಸದಂತಹ ಪ್ರೀಮಿಯಂ ಬಸ್ಗಳ ಮೂಲಕ ಪ್ರಯಾಣಿಕರಿಗೆ ಸುಖಕರ ಸೇವೆಯನ್ನು ಒದಗಿಸುತ್ತದೆ. ಸದ್ಯ, ಕಡಿಮೆ ಖರ್ಚಿನಲ್ಲಿ ದೂರದ ಊರುಗಳಿಗೆ ತೆರಳುವವವರಿಗೆ ಪಲ್ಲಕ್ಕಿ ಹೆಸರಿನಲ್ಲಿ ನಾನ್ ಎಸಿ ಸ್ಲೀಪರ್ ಬಸ್ ಪರಿಚಯಿಸುತ್ತಿರುವುದು ಹಲವರಿಗೆ ಖುಷಿ ತಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications