ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಸಿಹಿಸುದ್ದಿ: ಹೊಸ ಆಪ್ ಲೋಕಾರ್ಪಣೆ.. ಪ್ರಯೋಜನಗಳೇನು?
ಭಾರತದಲ್ಲಿ ಇವಿ ಮಾರುಕಟ್ಟೆ ದಿನದಿಂದ ದಿನಕ್ಕೆ ವೇಗವಾಗಿ ಬೆಳವಣಿಗೆಯಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಆರಂಭವಾದಂತೆ ಭಾಸವಾಗುತ್ತಿದೆ. ಪರಿಸರ ಸ್ನೇಹಿ, ಪರ್ಯಾಯ ಇಂಧನಗಳಲ್ಲಿ ಚಲಿಸುವ ವಾಹನಗಳ ಬಗ್ಗೆ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದು, ಗ್ರಾಹಕರು ಇಂತಹ ವಾಹನಗಳನ್ನು ನಿರ್ವಹಿಸಲು ಮುಖ್ಯವಾಗಿ ಬೇಕಿರುವುದು ಚಾರ್ಜಿಂಗ್ ಸೌಲಭ್ಯ.
ಇತ್ತೀಚಿನ ದಿನಗಳಲ್ಲಿ ಹಲವಾರು ಕಂಪನಿಗಳ ನೂತನ ಎಲೆಕ್ಟ್ರಿಕ್ ವಾಹನಗಳು ಮಾರುಕಟ್ಟೆಗೆ ಬರುತ್ತಿದ್ದು, ಇವಿಗಳ ಚಾರ್ಜಿಂಗ್ ಸಮಸ್ಯೆ ಬಗೆಹರಿಸಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೆಹಲಿಯಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಕಾರ್ಯಕ್ರಮದ ವೇಳೆ 'ಇವಿ-ಯಾತ್ರಾ ಪೋರ್ಟಲ್ ಮೊಬೈಲ್ ಅಪ್ಲಿಕೇಶನ್' ಅನ್ನು ಬಿಡುಗಡೆ ಮಾಡಿದ್ದಾರೆ. ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ) ಅಭಿವೃದ್ಧಿಪಡಿಸಿದೆ.

ಈ ಅಪ್ಲಿಕೇಶನ್ ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಸಮೀಪವಿರುವ ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್ ಅನ್ನು ಹುಡುಕಲು ಸಹಾಯ ಮಾಡುತ್ತದೆ. 'ಇವಿ ಯಾತ್ರಾ ಅಪ್ಲಿಕೇಶನ್' ಚಾರ್ಜ್ ಪಾಯಿಂಟ್ ಆಪರೇಟರ್‌ಗಳಿಗೆ (CPOs) ತಮ್ಮ ಕೇಂದ್ರವನ್ನು ನೋಂದಾಯಿಸಲು ಮತ್ತು ರಾಷ್ಟ್ರೀಯ ಆನ್‌ಲೈನ್ ಡೇಟಾಬೇಸ್‌ನಲ್ಲಿ ಅವರ ವಿವರಗಳನ್ನು ನಮೂದಿಸಲು ಅನುಮತಿಸುತ್ತದೆ. ಇದು ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ತಮ್ಮ ಸಮೀಪದಲ್ಲಿರುವ ಪಬ್ಲಿಕ್ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸುಲಭವಾಗಿ ಹುಡುಕಲು ಸಹಾಯ ಮಾಡುತ್ತದೆ ಎಂದು ಹೇಳಬಹುದು.
ಚಾರ್ಜಿಂಗ್ ಕೇಂದ್ರದಲ್ಲಿರುವ ಚಾರ್ಜರ್ ಪ್ರಕಾರಗಳು, ಚಾರ್ಜಿಂಗ್ ಸ್ಲಾಟ್‌ಗಳ ಲಭ್ಯತೆ, ಇವಿ ಚಾರ್ಜಿಂಗ್ ಶುಲ್ಕ, ಸೇವೆ ಸೇರಿದಂತೆ ಇತರೆ ಅಂಶಗಳ ಕುರಿತು ಈ ಅಪ್ಲಿಕೇಶನ್ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸುತ್ತದೆ. ಉತ್ತರ ಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅತಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗುತ್ತದೆ. ಇಷ್ಟೇ ಅಲ್ಲದೆ, ಉತ್ತರ ಪ್ರದೇಶ ಮತ್ತು ದೆಹಲಿ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿರುವ ಭಾರತದ ಮೊದಲ ಎರಡು ರಾಜ್ಯಗಳಾಗಿವೆ. ಉತ್ತರ ಪ್ರದೇಶವು ಅತಿ ಹೆಚ್ಚು ನೋಂದಾಯಿತ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿದ್ದು, ಅಲ್ಲಿ ಪ್ರಸ್ತುತ 4,14,978 ಇವಿಗಳು ರಸ್ತೆಗಳಲ್ಲಿವೆ.
ಬರೋಬ್ಬರಿ 1,83,074 ಎಲೆಕ್ಟ್ರಿಕ್ ವಾಹನಗಳೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ. 1,79,087 ಇವಿಗಳು ನೋಂದಣಿಯಾಗಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ ಎಂದು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಈ ಹಿಂದೆ, ರಾಜ್ಯಸಭೆಗೆ ತಿಳಿಸಿದ್ದರು. ವಿವಿಧ ರಾಜ್ಯಗಳು ಇವಿ ವಾಹನಗಳಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಗಮನಿಸಿರುವ ಉತ್ತರ ಪ್ರದೇಶ ಕೆಲವು ತಿಂಗಳ ಹಿಂದೆ ತನ್ನ ಎಲೆಕ್ಟ್ರಿಕ್ ವಾಹನ ನೀತಿಯನ್ನು ಘೋಷಿಸಿತ್ತು. ಅದರಲ್ಲಿ ಕೆಲವು ದೊಡ್ಡ ಘೋಷಣೆಗಳನ್ನು ಮಾಡಿದೆ ಎಂದು ಹೇಳಬಹುದು.
ಎಲ್ಲಾ ರೀತಿಯ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಮತ್ತು ರಸ್ತೆ ತೆರಿಗೆಯಲ್ಲಿ 100% ವಿನಾಯಿತಿ. ಎಲೆಕ್ಟ್ರಿಕ್ ವಾಹನ ನೀತಿಯ ಪ್ರಾರಂಭದ ಮೂರು ವರ್ಷಗಳ ಅವಧಿಗೆ ಈ ಪ್ರಯೋಜನಗಳು ಲಭ್ಯವಿವೆ. ಇಷ್ಟೇ ಅಲ್ಲದೆ, ಉತ್ತರ ಪ್ರದೇಶದಲ್ಲಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳು ನಾಲ್ಕು ಮತ್ತು ಐದನೇ ವರ್ಷವು ಈ ವಿನಾಯಿತಿ ಸೌಲಭ್ಯವನ್ನು ಪಡೆಯಲಿವೆ. ಇನ್ನು, ಇವಿ ಯಾತ್ರಾ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಬಳಕೆದಾರರು ಚಾರ್ಜಿಂಗ್ ಸ್ಲಾಟ್ ಅನ್ನು ಸಹ ಮೊದಲೇ ಬುಕ್ ಮಾಡಬಹುದಾಗಿದೆ.
ಈ ಯಾತ್ರಾ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದು. ಇದನ್ನು ಬಹುತೇಕ ಸ್ಮಾರ್ಟ್‌ಫೋನ್‌ಗಳು ಸಪೋರ್ಟ್ ಮಾಡಲಿವೆ. ಅಪ್ಲಿಕೇಶನ್ ಪ್ರಸ್ತುತ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಬಹುದು. ಇವಿಗಳನ್ನು ಖರೀದಿಸುವಂತೆ ಜನರನ್ನು ಪ್ರೋತ್ಸಾಹಿಸುವ ಉತ್ತಮ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಪವರ್ ಫುಲ್ ಪಬ್ಲಿಕ್ ಚಾರ್ಜಿಂಗ್ ಸೌಲಭ್ಯ ಜಾರಿಯಲ್ಲಿದ್ದರೆ ಮಾತ್ರ ಸರ್ಕಾರವು ತನ್ನ ಅಪೇಕ್ಷಿತ ಗುರಿ ತಲುಪಲು ಸಾಧ್ಯವಾಗುತ್ತದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹೇಳಿಕೆಯಲ್ಲಿ ದೇಶದಲ್ಲಿ ಇವಿಗಳಿಗಾಗಿ ಸುಮಾರು 5,151 ಪಬ್ಲಿಕ್ ಚಾರ್ಜಿಂಗ್ ಸ್ಟೇಷನ್‌ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಸುಮಾರು 698, ಮಹಾರಾಷ್ಟ್ರ 660 ದೆಹಲಿಯು 539 ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ. ಇವಿ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವಿಸ್ತರಿಸುವುದರ ಹೊರತಾಗಿ, ಕೇಂದ್ರ ಸರ್ಕಾರವು ಇವಿ ಘಟಕಗಳು ಮತ್ತು ಬ್ಯಾಟರಿ ಸೆಲ್‌ಗಳನ್ನು ತಯಾರಿಸಲು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗಳನ್ನು ಪರಿಚಯಿಸಿದೆ. ದೇಶದಲ್ಲಿ ಇದುವರೆಗೆ 18 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.


Click it and Unblock the Notifications