Mahindra Armado: ಭಾರತೀಯ ಸೇನೆಗೆ ಆನೆ ಬಲ.. 'ಮಹೀಂದ್ರಾ ಅರ್ಮಡೊ' ವಿತರಣೆ, ಇಲ್ಲಿದೆ ವಿಶೇಷ ಮಾಹಿತಿ
ವಿಶ್ವದಲ್ಲಿಯೇ ಭಾರತೀಯ ಸೇನೆ ಅತ್ಯಂತ ಶಕ್ತಿಯುತವಾಗಿದ್ದು, ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಕ್ಷಣಾ ಪರಿಕರಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಸದ್ಯ, ದೇಶೀಯವಾಗಿ ನಿರ್ಮಾಣ ಮಾಡಿರುವ ಸೈನಿಕ ವಾಹನವನ್ನು 'ಮಹೀಂದ್ರಾ' ವಿತರಣೆ ಮಾಡುವುದನ್ನು ಶುರು ಮಾಡಿದೆ. ಸಂಪೂರ್ಣ ವಿವರ ತಿಳಿಯೋಣ ಬನ್ನಿ.
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಜನಪ್ರಿಯವಾಗಿದ್ದು, ಇತ್ತೀಚೆಗೆ ಭಾರತೀಯ ಸೇನೆಗೆ ಅರ್ಮಾಡೋ (ಆರ್ಮರ್ಡ್ ಲೈಟ್ ಸ್ಪೆಷಲಿಸ್ಟ್ ವೆಹಿಕಲ್ - ALSV) ವಿತರಣೆಯನ್ನು ಪ್ರಾರಂಭಿಸಿದೆ. ಇದು, ಹೆಚ್ಚು ರಕ್ಷಣಾತ್ಮಕವಾಗಿದ್ದು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಸೇನಾ ಕಾರ್ಯಾಚರಣೆಗಳಿಗೆ ದೊಡ್ಡಮಟ್ಟದಲ್ಲಿ ನೆರವಾಗುತ್ತದೆ. ವಿಶೇಷವೆಂದರೆ, ಈ ಅರ್ಮಾಡೋ ವಾಹನವನ್ನು ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ.

ಈ ಮಹೀಂದ್ರಾ ಅರ್ಮಡೊ ವಾಹನದಲ್ಲಿ 8 ಜನ ಸೈನಿಕರು ಸುಲಭವಾಗಿ ಪ್ರಯಾಣಿಸಬಹುದು. ಜೊತೆಗೆ, ಇದನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಲು ಸ್ಥಳಾವಕಾಶವಿರುವಂತೆ ವಿನ್ಯಾಸ ಮಾಡಲಾಗಿದೆ. ಅದರಲ್ಲೂ ಈ ಅರ್ಮಡೊ ವಾಹನದಲ್ಲಿ ಸರಿ ಸುಮಾರು 1,000 ಕಿಲೋಗ್ರಾಂಗಳಷ್ಟು ಮದ್ದುಗುಂಡುಗಳನ್ನು ಇಡಬಹುದಾಗಿದ್ದು, ಇದೊಂದು 'ಬಾಹುಬಲಿ' ವಾಹನ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಸದ್ಯ, ಮಹೀಂದ್ರಾ ಕಂಪನಿಯ ಇತರೆ ವಾಹನಗಳು ಹೊಂದಿರುವುದಕ್ಕಿಂತ ಭಿನ್ನವಾಗಿರುವ ಎಂಜಿನ್ ಅನ್ನು 'ಅರ್ಮಡೊ' ವಾಹನ ಪಡೆದಿದೆ. ಇದು, ಸೇನೆ ವಾಹನವಾಗಿರುವುದಿಂದ ಇದರ ಎಂಜಿನ್ ಹೆಚ್ಚು ಪವರ್ ಫುಲ್ ಆಗಿದೆ. ಅರ್ಮಾಡೋದ 3.2-ಲೀಟರ್, ಟರ್ಬೋಚಾರ್ಜ್ಡ್, 6-ಸಿಲಿಂಡರ್ ಡೀಸೆಲ್ ಎಂಜಿನ್ 3,600 rpmನಲ್ಲಿ 213 bhp ಗರಿಷ್ಠ ಪವರ್ ಹಾಗೂ 2,000 rpmನಲ್ಲಿ 500 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈ ಮಹೀಂದ್ರಾ ಅರ್ಮಡೊ ವಾಹನವನ್ನು ವಿವಿಧ ರೀತಿಯ NATO ಫ್ಯುಯೆಲ್ (ವಿಶೇಷ ಮಿಲಿಟರಿ ಇಂಧನ)ನಿಂದಲೂ ಚಲಿಸುವಂತೆ ವಿನ್ಯಾಸ ಮಾಡಲಾಗಿದೆ. ಪ್ರಮುಖವಾಗಿ ಈ ವೆಹಿಕಲ್ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ಇಂಡಿಪೆಂಡೆಂಟ್ ಸಸ್ಪೆನ್ಷನ್ ಸೆಟಪ್ ಹಾಗೂ ಆಕ್ಸೆಲ್ ಗಳಲ್ಲಿ ಡಿಫರೆನ್ಷಿಯಲ್ ಲಾಕ್‌ನ್ನು ಪಡೆದಿದೆ.
ಮಹೀಂದ್ರಾ ಅರ್ಮಡೊ, ಸೆಂಟರ್ ಟೈರ್ ಇನ್ಫ್ಲೇಶನ್ ಸಿಸ್ಟಮ್, ಏರ್ ಫಿಲ್ಟರೇಶನ್ ಯುನಿಟ್ ಹಾಗೂ ಎಂತಹದ್ದೇ ಭೂ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ಅಡೆ - ತಡೆ ಇಲ್ಲದೆ ಚಲಿಸಲು ಸಾಧ್ಯವಾಗುವಂತೆ ಸೆಲ್ಫ್ ರಿಕವರಿ ವಿಂಚ್‌ನ್ನು ಪಡೆದಿದೆ. ಈ ಅರ್ಮಡೊ 120km/h ಹೆಚ್ಚಿನ ಟಾಪ್ ಸ್ವೀಡ್ ಹೊಂದಿದ್ದು, ಕೇವಲ 12 ಸೆಕೆಂಡುಗಳಲ್ಲಿ 0- 60km/h ವೇಗವನ್ನು ಪಡೆಯಲಿದೆ.
ಒಟ್ಟಾರೆ, ಈ ಅರ್ಮಡೊ ವಿತರಣೆಯಿಂದ ಸೇನೆಗೆ 'ಆನೆ ಬಲ' ಬಂದಂತೆ ಆಗಿದ್ದು, ಇದರಿಂದ ತ್ವರಿತ ಮಿಲಿಟರಿ ಕಾರ್ಯಾಚರಣೆ ಸುಲಭ ಸಾಧ್ಯವಾಗುತ್ತದೆ. ಮುಖ್ಯವಾಗಿ, ಕೆಲವು ವರ್ಷಗಳಿಂದ ಭಾರತೀಯ ಸೇನೆ, ವಿದೇಶಗಳ ರಕ್ಷಣಾ ಪರಿಕರಗಳನ್ನು ಆಮದು ಮಾಡಿಕೊಳ್ಳುವುದನ್ನು ಬಿಟ್ಟು, ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರ ಸಾಧನಗಳ ಮೇಲೆ ಅವಲಂಬನೆ ಆಗುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದು ಹೇಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications