ಕಾರು ಚಾಲಕನ ಎಡವಟ್ಟು- ಚಲಿಸುತ್ತಿದ್ದ ರೈಲಿಗೆ ಅಡ್ಡ ನಿಂತ ಬೊಲೆರೊ.!
ಬೊಲೆರೊ ಕಾರೊಂದು ಹಳಿ ಮಧ್ಯದಲ್ಲಿ ಸಿಲುಕಿದ ಪರಿಣಾಮ ರೈಲು ತಡವಾಗಿ ಚಲಿಸಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಸ್ಥಳೀಯ ನೆರವಿನಿಂದಾಗಿ ಕಾರು ಮಾಲೀಕನು ಆಗಬಹುದಾದ ಭೀಕರ ದುರಂತದಿಂದ ಪಾರಾಗಿದ್ದಾನೆ.

ಭಾರತದಲ್ಲಿ ರೈಲು ಹಳಿ ದಾಟುವ ವೇಳೆ ದಿನಂಪ್ರತಿ ಹತ್ತಾರು ಭೀಕರ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಕೆಲವು ಕಡೆಗಳಲ್ಲಿ ರೈಲ್ವೆ ಹಳಿಗೆ ಹೊಂದಿಕೊಂಡತ್ತಿರುವ ಪ್ರಮುಖ ರಸ್ತೆಗಳಲ್ಲಿ ಗೇಟ್ ಹಾಕಿದ್ದರು ಸಹ ಅವಸರದಲ್ಲಿ ರೈಲು ಹಳಿ ದಾಟುವಾಗ ಆಗುವ ಕೆಲವು ಪ್ರಮಾದಗಳಿಂದಲೂ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇಲ್ಲೂ ಕೂಡಾ ಮಹೀಂದ್ರಾ ಬೊಲೆರೊ ಕಾರು ಚಾಲಕ ಕೂಡಾ ಹೀಗೆ ಅಡ್ಡಮಾರ್ಗದಲ್ಲಿ ಹೋಗಲು ಪ್ರಯತ್ನಿಸಿ ಹಳಿ ಮಧ್ಯೆ ಸಿಲುಕಿ ಪರದಾಟಿದ್ದಾನೆ.

ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಹಿನ್ನೆಲೆಯಲ್ಲಿ ಹಳಿ ಮೇಲಿನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದರು ಸಹ ಅದೇ ಮಾರ್ಗದಲ್ಲಿ ಸಂಚರಿಸಲು ಯತ್ನಿಸುತ್ತಿರುವಾಗ ಈ ಘಟನೆ ನಡೆದಿದ್ದು, ಇದೇ ವೇಳೆ ವೇಗದಲ್ಲಿದ್ದ ರೈಲು ಸ್ಥಳೀಯರ ಸಮಯ ಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ನಿಲುಗಡೆಯಾಗಿದೆ.

ಅಂದಹಾಗೆ ಈ ಘಟನೆಯು ಉತ್ತರಾಖಂಡ್‌ನಲ್ಲಿ ನಡೆದಿದ್ದು, ಅವಸರದಲ್ಲಿ ಹಳಿ ದಾಟುತ್ತಿದ್ದ ಬೊಲೆರೊ ಚಾಲಕನಿಗೆ ಹಳಿ ಮಧ್ಯೆದಲ್ಲೇ ಕಾರು ಕೈಕೊಟ್ಟಿದೆ. ಹೀಗಾಗಿ ಹಿಂದಕ್ಕೂ ಹೋಗಲಾಗದೇ ಮುಂದುಕ್ಕೂ ಬರಲಾಗದ ಪರಿಸ್ಥಿತಿಗೆ ಸಿಲುಕಿದ್ದ.

ಇದೇ ಸಮಯದಲ್ಲಿ ಆ ಕಡೆಯಿಂದ ರೈಲು ಬರುತ್ತಿರುವುದು ಚಾಲಕನಿಗೆ ಮತ್ತಷ್ಟು ಆತಂಕ ಮೂಡಿಸಿದ್ದಲ್ಲದೇ ಕಾರನ್ನುಅಲ್ಲಿಯೇ ಬಿಟ್ಟು ಬರಲು ಸಹ ಮನಸ್ಸಾಗಿಲ್ಲ. ಈ ವೇಳೆ ಸ್ಥಳೀಯರು ಕೂಡಾ ಚಾಲಕನಿಗೆ ಸಹಾಯ ಮಾಡಿದ್ದಲ್ಲದೇ ಅತ್ತ ಕಡೆಯಿಂದ ಬರುತ್ತಿದ್ದ ರೈಲ್ ಅನ್ನು ಕೆಂಪು ಬಟ್ಟೆ ತೂರುತ್ತಾ ನಿಲುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ದೂರದಿಂದಲೇ ಪರಿಸ್ಥಿತಿ ಅರಿತ ರೈಲ್ವೆ ಅಧಿಕಾರಿಗಳು ಸಹ ಹಳಿಯಲ್ಲಿ ಸಿಲುಕಿದ್ದ ಕಾರನ್ನು ಹೊರತೆಗೆಯುವ ತನಕ ಕಾಯ್ದು ಮಾನವೀಯತೆ ಮೆರೆದಿದ್ದಾರೆ. ಇತ್ತ ರೈಲ್ವೆ ಹಳಿಯಿಂದ ಕಾರು ಮೇಲೆ ಎತ್ತುತ್ತಿದ್ದಂತೆ ಒಂದು ನಿಮಿಷ ಕೂಡಾ ಕಾರು ಚಾಲಕ ಅಲ್ಲಿ ನಿಲ್ಲಲೇ ಇಲ್ಲ.


Click it and Unblock the Notifications








