BMW R1250 GS: ನಟನ ಜೊತೆ ತಮ್ಮ ಹೊಸ ಸೂಪರ್ ಬೈಕಿನಲ್ಲಿ ನೈಟ್ ರೈಡ್ ಹೋದ ಜನಪ್ರಿಯ ನಟಿ
ಸಿನಿಮಾ ರಂಗ ಎಂಬ ಕಲರ್‍ಫುಲ್ ದುನಿಯಾದಲ್ಲಿ ಇರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍ಗಳಿವೆ. ಇದರಲ್ಲಿ ಬಹುತೇಕ ನಟ, ನಟಿಯರಿಗೆ ಕಾರು ಹಾಗೂ ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಇತ್ತೀಚೆಗೆ ನಟರು ಮಾತ್ರವಲ್ಲದೇ ನಟಿಯರು ಕೂಡ ಬೈಕ್ ಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದು, ಹಲವಾರು ನಟಿಯರು ಕಾರುಗಳ ಜೊತೆ ಬೈಕ್ ಕೂಡ ಹೊಂದಿದ್ದಾರೆ.
ಮಲಯಾಳಂ ಚಿತ್ರರಂಗದ ಲೇಡಿ ಸೂಪರ್‌ಸ್ಟಾರ್ ಮಂಜು ವಾರಿಯರ್ ಅವರಿಗೆ ಸೂಪರ್ ಬೈಕ್ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ಲೇಡಿ ಸೂಪರ್‌ಸ್ಟಾರ್ ಮಂಜು ವಾರಿಯರ್ ಖರೀದಿಸಿದ ಬೈಕ್ BMW R 1250 GS ಆಗಿದೆ. ಇದು ಪ್ರೀಮಿಯಂ ಅಡ್ವೆಂಚರ್ ವಿಭಾಗಕ್ಕೆ ಸೇರಿದ ಬೈಕ್ ಆಗಿದೆ. ವರದಿಗಳ ಪ್ರಕಾರ, ಈ ಹೊಸ BMW R 1250 GS ಅಡ್ವೆಂಚರ್ ಬೈಕ್ ಬೆಲೆಯು ಸುಮಾರು 28 ಲಕ್ಷ ರೂಪಾಯಿ ಆಗಿದೆ.

ಮಂಜು ವಾರಿಯರ್ ತನ್ನ ಈ ಹೊಸ ಬೈಕ್ ವಿತರಣೆ ಪಡೆದುಕೊಂದ ವಾರಗಳ ಬಳಿಕ, ಯುವ ನಟ ಸೌಬಿನ್ ಶಾಹಿರ್ ಸಹ BMW R1250 GS ಟ್ರೋಫಿ ಎಡಿಷನ್ ಬೈಕ್ ಅನ್ನು ಖರೀದಿಸಿದ್ದರು. ಇತ್ತೀಚೆಗೆ, ಮಂಜು ವಾರಿಯರ್ ಮತ್ತು ಸೌಬಿನ್ ಶಾಹಿರ್ ಇಬ್ಬರೂ ತಮ್ಮ ಹೊಸ ಬಿಎಂಡಬ್ಲ್ಯು ಸೂಪರ್ ಬೈಕ್ ಗಳಲ್ಲಿ ತಡರಾತ್ರಿ ರೈಡ್ ಹೋಗಿದ್ದಾರೆ. ಇನ್ನು ನಟಿ ತಮ್ಮ ಮತ್ತು ಸೌಬಿನ್ ಶಾಹಿರ್ ಅವರ ಮೋಟಾರ್‌ಸೈಕಲ್‌ಗಳ ಜೊತೆಗಿನ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ.
ಮಂಜು ವಾರಿಯರ್ ತಮ್ಮ ಫೇಸ್‌ಬುಕ್ ಪೇಜ್ ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಕೆಳಗೆ "ನಾನು ಎದುರಿಸದ ಭಯಗಳು ನನ್ನ ಮಿತಿಗಳಾಗಿವೆ. ಅಂತಹ ಉತ್ತಮ ಸ್ನೇಹಿತರು ಮತ್ತು ತಾಳ್ಮೆಯ ಮಾರ್ಗದರ್ಶಕರಾಗಿ ನನ್ನ ಜೊತೆ ಇರುವುದಕ್ಕೆ ಧನ್ಯವಾದಗಳು, ನೀವು ಹುಡುಗರೇ ಸೂಪರ್ ಕೂಲ್. ಪ್ರಮುಖ: ಮೋಟಾರು ಬೈಕಿಂಗ್ ಮಾಡುವಾಗ ದಯವಿಟ್ಟು ಸರಿಯಾದ ರೈಡಿಂಗ್ ಗೇರ್ ಧರಿಸಿ ಎಂದು ಬರೆದುಕೊಂಡಿದ್ದಾರೆ.

ಇನ್ನು ನಟಿ ಮಂಜು ವಾರಿಯರ್ ಮತ್ತು ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು 2500 ಕಿಮೀ ಲಡಾಖ್ ಪ್ರವಾಸದಲ್ಲಿ ಜೊತೆಗೂಡಿದ್ದರು. ಈ ಪ್ರವಾಸ ಬಳಿಕ ಮಂಜು ವಾರಿಯರ್ ಕೂಡ ಬೈಕ್ ಏಕೆ ಖರೀದಿಸಬಾರದು ಎಂದು ಅಂದುಕೊಂಡರು. ಇದರ ಬಳಿಕ ಅವರು ದ್ವಿಚಕ್ರ ಬಾಹನ ಲೈಸನ್ಸ್ ಅನ್ನು ಪಡೆದುಕೊಂಡರು. ಲೈಸನ್ಸ್ ಪಡೆದ ನಂತರ, ನಟಿ ಸ್ವಂತ ಬೈಕ್ ಅನ್ನು ಖರೀದಿಸಲು ಬಯಸಿದರು.
ಸೂಪರ್ ಸ್ಟಾರ್ ಅಜಿತ್ ಕುಮಾರು ಈ ವರ್ಷ 60 ದಿನಗಳ ಬೈಕ್ ಟ್ರಿಪ್ ಪ್ಲಾನ್ ಮಾಡಿದ್ದಾರೆ. ಈ ಟ್ರಿಪ್ ನಲ್ಲಿ ಮಂಜು ವಾರಿಯರ್ ಕೂಡ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡ ತಮಿಳು ತುನಿವ್ ಚಿತ್ರದಲ್ಲಿ ವರಿಬ್ಬರು ಒಟ್ಟಿಗೆ ನಟಿಸಿದ್ದರು. ಇನ್ನು ನಟಿ ಮಂಜು ವಾರಿಯರ್ ಬಿಎಂಡಬ್ಲ್ಯು ಬೈಕ್ ಹೊರತುಪಡಿಸಿ, ಮಿನಿ ಕೂಪರ್ ಎಸ್ಇ ಎಲೆಕ್ಟ್ರಿಕ್ ಮತ್ತು ರೇಂಜ್ ರೋವರ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ನಟಿ ಮಂಜು ವಾರಿಯರ್ ನ್ಯಾಶನಲ್ ಫಿಲ್ಮ್ ಅವಾರ್ಡ್, ಕೇರಳ ರಾಜ್ಯ ಪ್ರಶಸ್ತಿ, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ನಟಿ ಮಂಜು ವಾರಿಯರ್ ಹೊಸ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಬಗ್ಗೆ ಹೇಳುವುದಾದರೆ, ಈ ಅಡ್ವೆಂಚರ್ ಪ್ರೀಮಿಯಂ ಬೈಕ್ ಸ್ಟ್ಯಾಂಡರ್ಡ್ ಮತ್ತು ಅಡ್ವೆಂಚರ್ ಎಂಬ ಎರಡು ರೂಪಾಂತರಗಳಲ್ಲ ಲಭ್ಯವಿದೆ. ಈ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಲೈಟ್ ವೈಟ್ ಮತ್ತು ರ್ಯಾಲಿ ಬಣ್ಣಗಳ ಆಯ್ಕೆಯನ್ನು ಹೊಂದಿದ್ದರೆ,
ಅಡ್ವೆಂಚರ್ ರೂಪಾಂತರವು ಟ್ರಿಪಲ್ ಬ್ಲ್ಯಾಕ್, ಐಸ್ ಗ್ರೇ ಮತ್ತು ರ್ಯಾಲಿ ಎಂಬ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಈ ಹೊಸ ಐಷಾರಾಮಿ ಬೈಕಿನ ಮುಂಭಾಗದಲ್ಲಿ ಅನನ್ಯವಾಗಿ ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್, ಫ್ರಂಟ್ ಬೀಕ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಅನ್ನು ಕೂಡ ಹೊಂದಿರಲಿದೆ. ಈ ಅಡ್ವೆಂಚರ್-ಟೂರರ್ ಬೈಕಿನಲ್ಲಿ ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಮೆತ್ತನೆಯ ಸೀಟ್ ಮತ್ತು ಆಫ್-ರೋಡ್ ಬಯಾಸ್ಡ್ ಗ್ರಿಪ್ಪಿ ಫುಟ್‌ಪೆಗ್‌ಗಳು ಹೊಂದಿದೆ.


Click it and Unblock the Notifications








