ಮುಂಬೈ-ಅಹಮಾದಾಬಾದ್ ಬುಲೆಟ್ ರೈಲು ಮುಹೂರ್ತ ಫಿಕ್ಸ್
ದೇಶದ ಅತ್ಯಂತ ವೇಗದ ಬುಲೆಟ್ ರೈಲು ಓಡಾಟಕ್ಕೆ ಕಾಲ ಹತ್ತಿರವಾಗಿದೆ. ಮುಂಬೈ-ಅಹಮದಾಬಾದ್ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ದೇಶದ ಮಹತ್ತರ ಬುಲೆಟ್ ರೈಲು ಯೋಜನೆಗೆ ಸದ್ಯದಲ್ಲೇ ಮುಹೂರ್ತ ಫಿಕ್ಸ್ ಆಗಲಿದೆ.
Also Read: ಜಪಾನ್ ಹೈ ಸ್ಪೀಡ್ ರೈಲು ಭಾರತಕ್ಕೆ ಬರುತ್ತಾ?
ಮುಂದಿನ ವಾರದಲ್ಲಿ ಭಾರತಕ್ಕೆ ಭೇಟಿ ಕೊಡಲಿರುವ ಜಪಾನ್ ಪ್ರಧಾನ ಮಂತ್ರಿ ಶಿನ್ಜೊ ಅಬೆ ಜೊತೆ ಭಾರತ, ಹೈ-ಸ್ಪೀಡ್ ರೈಲು ಯೋಜನೆಗೆ ಸಹಿ ಮಾಡುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿದೆ ಎಂದು ಸರಕಾರ ಮೂಲದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್‌ನಲ್ಲಿ ಶಿಂಕಾನ್ಸೆನ್ ಎಂದು ಅರಿಯಲ್ಪಡುವ ಬುಲೆಟ್ ಟ್ರೇನ್‌ಗಳು ಭಾರತದ ದೀರ್ಘ ಕಾಲದ ಯೋಜನೆಯಾಗಿದೆ. ಈ ಸಂಬಂಧ ಜಪಾನ್ ಅಧಿಕಾರಿಗಳು ಪ್ರಧಾನ ಮಂತ್ರಿ ಕಾರ್ಯಾಲಯ ಹಾಗೂ ರೈಲ್ವೇ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದೆ.

ಇದರೊಂದಿಗೆ ಮುಂಬೈ-ಅಹಮದಾಬಾದ್ ನಡುವಣ ಪ್ರಯಾಣ ಅವಧಿ ಏಳು ತಾಸಿನಿಂದ ಬರಿ ಎರಡು ಗಂಟೆಗಳಿಗೆ ಇಳಿಕೆಯಾಗಲಿದೆ.

ಭಾರತದ ಈ ಮಹತ್ತರ ಯೋಜನೆಗೆ ಜಪಾನ್ ಆರ್ಥಿಕ ಸಹಾಯಹಸ್ತವನ್ನು ಚಾಚಿದ್ದು, 0.5 ಬಡ್ಡಿದರಗಳಲ್ಲಿ ಬರೋಬ್ಬರಿ 90,000 ಕೋಟಿ ರು.ಗಳ ಹಣಕಾಸು ನೆರವನ್ನು ಮಾಡಲಿದೆ. ಇದನ್ನು 50 ವರ್ಷಗಳ ಕಾಲಾವಧಿಯಲ್ಲಿ ಮರು ಪಾವತಿ ಮಾಡಬೇಕಿದೆ. ಈ ವಿಶೇಷ ಸವಲತ್ತನ್ನು ಭಾರತಕ್ಕೆ ಮಾತ್ರ ನೀಡುತ್ತಿದೆ.

ಜಪಾನ್ ಅಂತರಾಷ್ಟ್ರೀಯ ಸಹಕಾರ ಏಜೆನ್ಸಿಯು (ಜೆಐಸಿಎ) ಈಗಾಗಲೇ 505 ಕೀ.ಮೀ. ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿದ್ದು, ತಾಂತ್ರಿಕವಾಗಿಯೂ ಆರ್ಥಿಕವಾಗಿಯೂ ಈ ಯೋಜನೆ ಸಾಧ್ಯ ಎಂದು ಹಸಿರು ಬಾವುಟವನ್ನು ತೋರಿಸಿದೆ.

ಈ ಯೋಜನೆಯಂತೆ ಬುಲೆಟ್ ರೈಲುಗಳು ಗಂಟೆಗೆ 300 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಪ್ರಾಥಮಿಕ ಅಂಕಿಅಂಶಗಳ ಪ್ರಕಾರ ಇದರ ನಿರ್ಮಾಣಕ್ಕೆ 98,805 ಕೋಟಿ ರು. ಅಂದಾಜಿಸಲಾಗಿದ್ದು, 2024ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.

ಇದರೊಂದಿಗೆ ಬುಲೆಟ್ ರೈಲಿಗೆ ಸಂಬಂಧಪಟ್ಟ ಎಲ್ಲ ತಾಂತ್ರಿಕ ವಿಜ್ಞಾನ, ಪರಿಣಿತ ಕೆಲಸಗಾರರು, ತಯಾರಕ ಯಂತ್ರ ಮತ್ತು ನಿರ್ವಹಣೆಯನ್ನು ಜಪಾನ್ ಭಾರತದ ಜೊತೆ ಹಂಚಿಕೊಳ್ಳಲಿದೆ.

ಕಳೆದ ವರ್ಷ ಜಪಾನ್ ಸಂದರ್ಶನದಲ್ಲಿದ್ದ ಮೋದಿ ಭೇಟಿಯ ವೇಳೆಯಲ್ಲೇ ಇದಕ್ಕಾಗಿ ವಿಶೇಷ 'ಜಪಾನ್ ಪ್ಲಸ್' ತಂಡವನ್ನು ರಚಿಸಲಾಗಿತ್ತು.

ಒಟ್ಟಿನಲ್ಲಿ ಬುಲೆಟ್ ಟ್ರೈನ್ ಭಾರತದ ರೈಲು ಸಂಚಾರ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆದುಕೊಳ್ಳಲಿದೆ.

ಜಪಾನ್ ಬುಲೆಟ್ ಟ್ರೇನ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು


Click it and Unblock the Notifications








