Petrol Diesel Price: ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ? ಇಲ್ಲಿದೆ ಸಂಪೂರ್ಣ ಮಾಹಿತಿ
ದೇಶದಲ್ಲಿ ಪೆಟ್ರೋಲ್, ಡೀಸೆಲ್ (Petrol, Diesel) ದರಗಳು ಗಗನಕ್ಕೇರಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿತ್ತು. ಅಂತಿಮವಾಗಿ ಸಿಹಿಸುದ್ದಿ ಸಿಗುವ ಕಾಲ ಹತ್ತಿರವಾಗಿದೆ. ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಉಕ್ರೇನ್ - ರಷ್ಯಾ ಯುದ್ಧ ಹಾಗೂ ಇನ್ನಿತರೇ ಕಾರಣಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದ ತೈಲ ಮಾರಾಟ ಕಂಪನಿಗಳು ತಮ್ಮ ನಷ್ಟವನ್ನು ಸರಿದೂಗಿಸಿಕೊಂಡು ತ್ರೈಮಾಸಿಕ ವರದಿಯಲ್ಲಿ ಚೇತರಿಕೆ ಕಂಡಿವೆ. ಅದರ ಫಲಿತಾಂಶವೇ ಮುಂಬರುವ ಕೆಲವೇ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಇಳಿಕೆ ಮಾಡುವ ಮೂಲಕ ಆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿವೆ ಎಂದು ವರದಿಯಾಗಿದೆ.

ಪೆಟ್ರೋಲಿಯಂ ರಫ್ತು ಮಾಡುವ ರಾಷ್ಟ್ರಗಳ ಸಂಘಟನೆಯಲ್ಲಿ (OPEC) ಪ್ರಮುಖ ದೇಶವಾಗಿರುವ 'ಸೌದಿ ಅರೇಬಿಯಾ' ಜುಲೈನಿಂದ ತೈಲ ಉತ್ಪಾದನೆಯನ್ನು ಮತ್ತಷ್ಟು ಕಡಿಮೆ ಮಾಡುತ್ತೇವೆ ಎಂದು ಹೇಳಿದೆ. ಆದರೆ, ಇದರಿಂದ ಮತ್ತೆ ಭಾರತದಲ್ಲಿ ಯಾವುದೇ ರೀತಿಯಲ್ಲಿ ಇಂಧನ ದರ ಹೆಚ್ಚಳವಾಗುವ ಭೀತಿ ಇಲ್ಲ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಷ್ಯಾ ಸೇರಿದಂತೆ ಇತರೆಡೆಯಿಂದ ತೈಲ ಪೂರೈಕೆ ಉತ್ತವಾಗಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಅಭಾವ ಸೃಷ್ಟಿಯಾಗುವುದಿಲ್ಲ ಎಂದು ಹೇಳಲಾಗಿದೆ. ಇದಿಷ್ಟೇ ಅಲ್ಲದೆ, ದೇಶದಲ್ಲಿ ಶುದ್ಧ ಪರಿಸರ ನಿರ್ಮಾಣಕ್ಕಾಗಿ 'ಗ್ರೀನ್ ಹೈಡ್ರೋಜನ್ ಮಿಷನ್' ಬಗ್ಗೆಯು ಕೇಂದ್ರ ಸರ್ಕಾರ ಸಭೆ ನಡೆಸಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ವಿವರಗಳು ಸದ್ಯ ಲಭ್ಯವಾಗಿಲ್ಲ.
ಜೊತೆಗೆ ಇಂಧನ ಚಾಲಿತ ವಾಹನಗಳಲ್ಲಿ ಶೇಕಡ 20% ಎಥೆನಾಲ್ ಇಂಧನ ಬಳಕೆ ಯೋಜನೆಯು ಸರಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಬಹುತೇಕರಿಗೆ ಎಥೆನಾಲ್ ಇಂಧನದ ಬಗ್ಗೆ ಗೊಂದಲವಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಇಂತಹ ವಾಹನಗಳಲ್ಲಿ ಶೇಕಡ 80% ಪೆಟ್ರೋಲ್ ಹಾಗೂ 20% ಎಥನಾಲ್ ಬಳಕೆ ಮಾಡಲಾಗುತ್ತದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರ ಎಷ್ಟಿದೆ ಎಂದು ನೋಡುವುದಾದರೆ, ಮೊದಲಿಗೆ ನವದೆಹಲಿಯಲ್ಲಿ 1 ಲೀಟರ್ ಪೆಟ್ರೋಲ್ ದರ ರೂ.96.72 ಇದ್ದು, ಡೀಸೆಲ್ ದರ ರೂ.89.62 ದಾಖಲಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.106.31 ಇದ್ದು, ಡೀಸೆಲ್ ದರ ರೂ.94.27 ಆಗಿದೆ.
ಕರ್ನಾಟಕದಲ್ಲಿ ವಿವಿಧ ನಗರಗಳ ಪೆಟ್ರೋಲ್, ಡೀಸೆಲ್ ಬೆಲೆ ಬಗ್ಗೆ ವಿವರವನ್ನು ತಿಳಿಯುವುದಾದರೆ, ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರೂ.101.94 ಇದ್ದು, ಲೀಟರ್ ಡಿಸೇಲ್ ದರ ರೂ.87.89 ಆಗಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ರೂ.101.50 ಇದ್ದು, ಡಿಸೇಲ್ ದರ ರೂ.87.49 ದಾಖಲಾಗಿದೆ.
ಪೆಟ್ರೋಲ್, ಡೀಸೆಲ್ ದರ ಒಂದು ಲೀಟರ್ ಗೆ ಸರಿ ಸುಮಾರು ರೂ.5 ರಿಂದ ರೂ.10 ಇಳಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ. ಇಂಧನ ದರ ಕಡಿಮೆಯಾಗುವುದನ್ನು ವಾಹನ ಸವಾರರು ಮಾತ್ರವಲ್ಲದೆ, ದ್ವಿಚಕ್ರ ವಾಹನ ಹಾಗೂ ಕಾರು ತಯಾರಕ ಕಂಪನಿಗಳು ಕಾಯುತ್ತಿವೆ. ಇದಕ್ಕೆ ಕಾರಣ, ವಾಹನ ಮಾರಾಟ ಪ್ರಮಾಣ ಮತ್ತಷ್ಟು ವೇಗ ಪಡೆಯಲಿದ್ದು, ಬೆಲೆ ಇಳಿಕೆ ಸಂಬಂಧ ಅಧಿಕೃತ ಮಾಹಿತಿ ಕೆಲವೇ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications