Petrol Diesel Prices: ಇಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ.. ದಿಢೀರ್ ಶಾಕ್!
ಭಾರತದಲ್ಲಿ ಪೆಟ್ರೋಲ್, ಡಿಸೇಲ್ (Petrol, Diesel) ದರಗಳು ಇಳಿಕೆಯಾಗಲಿದೆ ಎಂದು ಇತ್ತೀಚೆಗೆ ಕೇಂದ್ರ ಸರ್ಕಾರದ ಮೂಲಗಳು ಹೇಳಿದ್ದವು. ಆದರೆ, ಪಂಜಾಬ್ ರಾಜ್ಯದ ಜನರಿಗೆ ಅಲ್ಲಿನ ಸರ್ಕಾರ ದಿಢೀರ್ ಶಾಕ್ ಕೊಟ್ಟಿದ್ದು, ಇಂಧನ ಬೆಲೆಯನ್ನು ಏರಿಕೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ, ಭಾನುವಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್)ಯನ್ನು ಶೇಕಡ 10% ಹೆಚ್ಚಿಸಿದೆ. ಈ ಮೂಲಕ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.92 ಪೈಸೆ, ಡೀಸೆಲ್ ದರ ರೂ.88 ಪೈಸೆ ಹೆಚ್ಚಳವಾಗಿದೆ. ಎಎಪಿ ಸರ್ಕಾರ ಪಂಜಾಬ್‌ನಲ್ಲಿ ಅಧಿಕಾರ ಹಿಡಿದ ನಂತರ, ಇದು ಎರಡನೇ ಬಾರಿಗೆ ದರ ಹೆಚ್ಚಳವಾಗಿದೆ.

ಈ ಬೆಲೆ ಏರಿಕೆಯಿಂದ ಪಂಜಾಬ್ ಸರ್ಕಾರಕ್ಕೆ ರೂ.600 ಕೋಟಿ ಆದಾಯ ಬರಲಿದೆ. ದರ ಹೆಚ್ಚಳ ಬಳಿಕ, ಮೊಹಾಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 98.95 ಇದ್ದು, ಪ್ರತಿ ಲೀಟರ್ ಡಿಸೇಲ್ ದರ ರೂ.89.25 ದಾಖಲಾಗಿದೆ. ಚಂಡೀಗಢದಲ್ಲಿ ಲೀಟರ್ ಪೆಟ್ರೋಲ್ ಬೆಲೆ ರೂ.96.20 ಆಗಿದ್ದರೆ, ಡೀಸೆಲ್ ಲೀಟರ್‌ಗೆ ರೂ.84.26 ಆಗಿದೆ.
ಕಳೆದ ಕೆಲವು ದಿನಗಳ ಹಿಂದೆ, ದೇಶಾದ್ಯಂತ ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಕಡಿಮೆಯಾಗಲಿದೆ ಎಂಬ ಸುಳಿವನ್ನು ಕೇಂದ್ರ ಸರ್ಕಾರದ ಮೂಲಗಳು ನೀಡಿದ್ದವು. ಉಕ್ರೇನ್ - ರಷ್ಯಾ ಯುದ್ಧ ಸೇರಿದಂತೆ ಇನ್ನಿತರೇ ಕಾರಣಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿ ತತ್ತರಿಸಿದ್ದ ಭಾರತದ ತೈಲ ಮಾರಾಟ ಕಂಪನಿಗಳು ತಮ್ಮ ನಷ್ಟವನ್ನು ಸರಿದೂಗಿಸಿಕೊಂಡು ಕಳೆದ ತ್ರೈಮಾಸಿಕ ವರದಿಯಲ್ಲಿ ಸುಧಾರಣೆ ಕಂಡಿವೆ.
ಮುಂದಿನ ತ್ರೈಮಾಸಿಕದಲ್ಲೂ ಲಾಭದತ್ತ ಮುನ್ನುತ್ತಿವೆ. ಅದರ ಭಾಗವಾಗಿ ಮುಂಬರುವ ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಈ ಬಗ್ಗೆ ಸ್ವತಃ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯೆ ನೀಡಿದ್ದು, ಇದನ್ನೇ ಪುನರುಚ್ಚರಿಸಿದ್ದರು. ಆದರೆ, ಯಾವಾಗ ಇಳಿಕೆಯಾಗುತ್ತದೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕಳೆದ ವರ್ಷದ (2022) ಏಪ್ರಿಲ್‌ನಲ್ಲಿ ಪೆಟ್ರೋಲ್, ಡಿಸೇಲ್ ದರವನ್ನು ಇಳಿಕೆ ಮಾಡಿದ ಬಳಿಕ, ಈವರೆಗೆ ಅಂದರೇ, ಹತ್ತಿರ ಹತ್ತಿರ ಒಂದುವರೆ ವರ್ಷವಾದರೂ ಯಾವುದೇ ರೀತಿಯಲ್ಲಿ ಇಂಧನ ದರವನ್ನು ಹೆಚ್ಚಳ ಮಾಡದೇ ಯಥಾಸ್ಥಿತಿ ಕಾಯ್ದುಕೊಂಡಿದೆ. ಜೊತೆಗೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮತೊಮ್ಮೆ ಬೆಲೆ ಕಡಿಮೆ ಮಾಡಿ, ಸಿಹಿಸುದ್ದಿ ನೀಡಲು ಮುಂದಾಗಿದೆಯಂತೆ.
ಆದರೀಗ ಪಂಜಾಬ್ ಸರ್ಕಾರ ಮಾತ್ರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿ, ಅಲ್ಲಿನ ಜನರಿಗೆ ಶಾಕ್ ನೀಡಿದೆ. ಮತ್ತೆ ಬೇರೆ ಯಾವ ರಾಜ್ಯಗಳು ಇದೇ ಮಾರ್ಗವನ್ನು ಅನುಸರಿಸುವ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಹಾಕುತ್ತವೆ ಎಂಬುದನ್ನು ಕಾದುನೋಡಬೇಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಯಾವುದೇ ರೀತಿಯಲ್ಲಿ ಬದಲಾವಣೆಯಾಗದೆ ಯಥಾಸ್ಥಿತಿಯಲ್ಲಿ ಇದೆ.
ಕರ್ನಾಟಕದಲ್ಲಿ ವಿವಿಧ ನಗರಗಳ ಪೆಟ್ರೋಲ್, ಡೀಸೆಲ್ ಬೆಲೆ ಬಗ್ಗೆ ವಿವರವನ್ನು ತಿಳಿಯುವುದಾದರೆ, ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ದರ ರೂ.101.94 ಇದ್ದು, ಲೀಟರ್ ಡಿಸೇಲ್ ದರ ರೂ.87.89 ಆಗಿದೆ. ಕೋಟೆ ನಾಡು ಚಿತ್ರದುರ್ಗದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ ರೂ.102.73 ಇದ್ದು, ಡಿಸೇಲ್ ದರ ರೂ.88.51 ದಾಖಲಾಗಿದೆ.


Click it and Unblock the Notifications