ಕರ್ನಾಟಕಕ್ಕೆ ಟ್ರಿಪಲ್ ಧಮಾಕ: 10 ವಂದೇ ಭಾರತ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ಕರ್ನಾಟಕದ ಜನರಿಗೆ ರೈಲ್ವೆ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. ರಾಜ್ಯಕ್ಕೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದಾರೆ. ಇಂದು ಗುಜರಾತ್ನ ಅಹಮದಾಬಾದ್ನಿಂದಲೇ ವರ್ಚುವಲ್ ಮೂಲಕ ಕರ್ನಾಟಕದ 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.
ರೈಲ್ವೇ ಮೂಲಸೌಕರ್ಯ, ಸಂಪರ್ಕ ಮತ್ತು ಪೆಟ್ರೋಕೆಮಿಕಲ್ಸ್ ವಲಯಕ್ಕೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ ಅಹಮದಾಬಾದ್‌ನಲ್ಲಿರುವ ಡಿಎಫ್‌ಸಿಯ ಆಪರೇಷನ್ ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿನ 85 ಸಾವಿರ ಕೋಟಿ ರೂಪಾಯಿಗಳ ರೈಲ್ವೆ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಅಹಮದಾಬಾದ್-ಮುಂಬೈ ಸೆಂಟ್ರಲ್, ಸಿಕಂದರಾಬಾದ್-ವಿಶಾಖಪಟ್ಟಣಂ, ಮೈಸೂರು-ಡಾ.ಎಂಜಿಆರ್ ಸೆಂಟ್ರಲ್ (ಚೆನ್ನೈ), ಪಾಟ್ನಾ-ಲಕ್ನೋ, ನ್ಯೂ ಜಲ್ಪೈಗುರಿ-ಪಾಟ್ನಾ, ಪುರಿ-ವಿಶಾಖಪಟ್ಟಣಂ, ಲಕ್ನೋ-ಡೆಹ್ರಾಡೂನ್, ಕಲಬುರಗಿ-ಸರ್. ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ರಾಂಚಿ-ವಾರಣಾಸಿ, ಖಜುರಾಹೊ-ದೆಹಲಿ ನಡುವಿನ 10 ಹೊಸ ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ ನೀಡಿದ್ದಾರೆ.
ಕಲಬುರಗಿ - ಎಸ್‌ಎಂವಿಟಿ ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ (Vande Bharat) ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 22231), ಕಲಬುರಗಿಯಿಂದ ಬೆಳಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಬೆಂಗಳೂರನ್ನು ತಲುಪಲಿದೆ. ಮಾರ್ಗ ಮಧ್ಯೆ ರಾಯಚೂರು, ಮಂತ್ರಾಲಯ ರೋಡ್, ಗುಂತಕಲ್, ಅನಂತಪುರ ಹಾಗೂ ಯಲಹಂಕದಲ್ಲಿ ನಿಲುಗಡೆಯಾಗಲಿದೆ. ಶುಕ್ರವಾರ ಹೊರತುಪಡಿಸಿ ವಾರದ ಎಲ್ಲ ದಿನವು ಕಾರ್ಯಾಚರಣೆಯನ್ನು ನಡೆಸಲಿದೆ.

ಎಸ್‌ಎಂವಿಟಿ ಬೆಂಗಳೂರಿಂದ ಮಧ್ಯಾಹ್ನ 2:40ಕ್ಕೆ ಸಂಚಾರವನ್ನು ಆರಂಭಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಗಾಡಿ ಸಂಖ್ಯೆ 22232), ರಾತ್ರಿ 11:30ರ ಸುಮಾರಿಗೆ ಕಲಬುರಗಿಗೆ ಹೋಗಲಿದೆ. ಈ ರೈಲು ಗರಿಷ್ಠ ವೇಗದಲ್ಲಿ ಓಡಾಟವನ್ನು ನಡೆಸುವುದರಿಂದ ಇವೆರೆಡು ನಗರಗಳ ನಡುವಿನ ಪ್ರಯಾಣದ ಅವಧಿಯು ಕಡಿಮೆಯಾಗಲಿದ್ದು, 543 ಕಿಲೋಮೀಟರ್ ಅಂತರವನ್ನು 8.45 ಗಂಟೆಗಳಲ್ಲಿ ಕ್ರಮಿಸುತ್ತದೆ.
ಇನ್ನು ಕಲಬುರುಗಿ ಮಾತ್ರವಲ್ಲದೆ ಮೈಸೂರು - ಬೆಂಗಳೂರು - ಎಂಜಿಆರ್ ಚೆನ್ನೈ (Mysuru - Bengaluru- MGR Chennai) ನಡುವೆಯು ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಶುರು ಮಾಡಲಿದೆ. ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಟು ಮಧ್ಯಾಹ್ನ 12:20ರ ಸುಮಾರಿಗೆ ಎಂಜಿಆರ್ ಚೆನ್ನೈ ನಿಲ್ದಾಣವನ್ನು ತಲುಪಲಿದೆ. ಮಾರ್ಗ ಮಧ್ಯೆ ಮಂಡ್ಯ, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ ಹಾಗೂ ಕಟಪಾಡಿಯಲ್ಲಿ ನಿಲುಗಡೆಯಾಗುತ್ತದೆ.

ಈ ಎಂಜಿಆರ್ ಚೆನ್ನೈ ರೈಲು ನಿಲ್ದಾಣದಿಂದ ಸಂಜೆ 5 ಗಂಟೆಗೆ ಹೊರಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾತ್ರಿ 11:20ರ ಮೈಸೂರನ್ನು ತಲುಪಲಿದೆ. ಬುಧವಾರ ಹೊರತುಪಡಿಸಿ, ವಾರದ ಎಲ್ಲ ದಿನವು ಈ ರೈಲು ಸಂಚಾರವನ್ನು ನಡೆಸಲಿದ್ದು, ಪ್ರಯಾಣದ ಅವಧಿಯು 6.5 ಗಂಟೆ ಇರಲಿದೆ. ಪ್ರಮುಖ ಐಟಿ ನಗರಗಳೊಂದಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟವನ್ನು ನಡೆಸುವುದರಿಂದ ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮ ಅವೃದ್ಧಿಸಲಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಪ್ರಧಾನಿ ಮೋದಿಯವರು ಮಂಗಳೂರು-ಗೋವಾ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಇದೀಗ ಕಾಸರಗೋಡು-ತಿರುವನಂತಪರ ವಂದೇ ಭಾರತ್ ರೈಲು ಮಂಗಳೂರು ಸೆಂಟ್ರಲ್ವರೆಗು ವಿಸ್ತರಣೆ ಮಾಡಲಾಗಿದ್ದು, ಈ ರೈಲಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ವಿಸ್ತರಣೆ ಮಾಡಲಾಗಿದೆ.
ಇನ್ನು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆರಂಭಿಸಿರುವ ಒನ್ ಸ್ಟೇಷನ್-ಒನ್ ಪ್ರಾಡಕ್ಟ್ ಮಳಿಗೆಗೂ ಚಾಲನೆ ಸಿಕ್ಕಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ಗರಿಷ್ಠ ವೇಗದಲ್ಲಿ ಸಂಚರಿಸುತ್ತದೆ. ಜೊತೆಗೆ ಇದರಲ್ಲಿ ಪ್ರಯಾಣಿಕರಿಗೂ ಐಷಾರಾಮಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ರೈಲು ಆರಾಮದಾಯಕ ಆಸನಗಳು, ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು, ವೈಫೈ ವ್ಯವಸ್ಯೆ, ಸ್ವಯಂ ಚಾಲಿತ ಬಾಗಿಲು ಹಾಗೂ ಅಗ್ನಿ ನಿರೋಧಕ ಸಾಧನಗಳನ್ನು ಹೊಂದಿದೆ.


Click it and Unblock the Notifications








