ಮೋದಿ ಮಂತ್ರ; ಸಂಸದರ ಓಡಾಟಕ್ಕೆ ವಿದ್ಯುತ್ ಚಾಲಿತ ಬಸ್
ಇನ್ನು ಮುಂದೆ ಪಾರ್ಲಿಮೆಂಟ್ ಕಲಾಪಕ್ಕೆ ಬರುವ ಸಂಸದರು ವಿದ್ಯುತ್ ಚಾಲಿತ ಬಸ್ಸಿನಲ್ಲಿ ಆಗಮಿಸಲಿದ್ದಾರೆ. ನವದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ನಿಯಂತ್ರಿಸಲು ಮುಂದಾಗಿರುವ ಕೇಂದ್ರ ಸರಕಾರ ಈ ಮಹತ್ತರ ಕಾರ್ಯವನ್ನು ಕೈಗೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಸದರ ಓಡಾಟಕ್ಕಾಗಿ ಎಲೆಕ್ಟ್ರಿಕ್ ಬಸ್ ಉದ್ಘಾಟನೆಗೊಳಿಸಿದ್ದಾರೆ. ಈ ಮೂಲಕ ಕಾರುಗಳಿಗೆ ಇನ್ನು ಗುಡ್ ಬೈ ಹೇಳಲಿದ್ದಾರೆ.

'ಮೇಕ್ ಇನ್ ಇಂಡಿಯಾ' ಯೋಜನೆಯ ಅಂಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜೊತೆ ಕೈಜೋಡಿಸಿಕೊಂಡು ಈ ವಿದ್ಯುತ್ ಚಾಲಿತ ಬಸ್ಸುಗಳನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಭಿವೃದ್ಧಿಪಡಿಸಿದೆ.

ಮಾಲಿನ್ಯ ರಹಿತ ಪರಿಸರ ಹಾಗೂ ಸ್ವಚ್ಛ ಭಾರತ ಯೋಜನೆಯ ಪ್ರಮುಖ ಗುರಿಯಾಗಿದ್ದು, ಹೆಚ್ಚುತ್ತಿರುವ ಮಾಲಿನ್ಯ ತಡೆಗಟ್ಟುವುದು ದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಪರಿಸರ ಸಂರಕ್ಷಣೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಇದೀಗ ಪರಿಸರ ಮಾಲಿನ್ಯದ ದುಷ್ಫರಿಣಾಮ ಸಾಮಾನ್ಯ ಜನರು ಅನುಭವಿಸುವಂತಾಗಿದೆ ಎಂದಿದ್ದಾರೆ.

ಅಂತರಾಷ್ಟ್ರ್ಯೀಯ ಮಟ್ಟದಲ್ಲಿ ಸೌರಶಕ್ತಿ ಒಕ್ಕೂಟವನ್ನು ರಚಿಸಿರುವ ಭಾರತವು ಹಸಿರು ತಂತ್ರಗಾರಿಕೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಎಲ್ಲ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದಿದ್ದಾರೆ.

ಎಲೆಕ್ಟ್ರಿಕ್ ಬಸ್ಸುಗಳಿಗೆ ಇಸ್ರೋ ಬ್ಯಾಟರಿಗಳನ್ನು ಒದಗಿಸಲಿದೆ. ಇದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ರಾಜ್ಯಗಳನ್ನು ವ್ಯಾಪಿಸಲಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯವು ತಿಳಿಸಿದೆ.


Click it and Unblock the Notifications








