91 ವರ್ಷಗಳ ಬಳಿಕ ತವರು ಜಿಲ್ಲೆಗೆ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಿದ ರಾಷ್ಟ್ರಪತಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಒಡಿಶಾದ ಬುಡಕಟ್ಟು ಪ್ರದೇಶ ಹಾಗೂ ಅವರ ತವರು ಜಿಲ್ಲೆಯ ಬದಂಪಹಾರ್ ಮತ್ತು ರೈರಂಗಪುರದಲ್ಲಿ ಎರಡು ಎಕ್ಸ್‌ಪ್ರೆಸ್ ರೈಲುಗಳು ಸೇರಿದಂತೆ ಮೂರು ರೈಲುಗಳಿಗೆ ಚಾಲನೆ ನೀಡಿದ್ದಾರೆ. ಇವು 91 ವರ್ಷಗಳ ಇತಿಹಾಸದಲ್ಲಿ ಈ ವಿಭಾಗದಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ದೂರದ ಪ್ರಯಾಣಿಕ ರೈಲುಗಳಾಗಿವೆ.
ಮುರ್ಮು ಅವರು ಬದಂಪಹಾರ್ - ಶಾಲಿಮಾರ್ ಎಕ್ಸ್‌ಪ್ರೆಸ್, ಬದಂಪಹಾರ್ - ರೂರ್ಕೆಲಾ ಎಕ್ಸ್‌ಪ್ರೆಸ್ ಮತ್ತು ಬದಂಪಹಾರ್ - ಟಾಟಾನಗರ ಮೆಮು ನಡುವೆ ಸಂಚರಿಸಲಿರುವ ರೈಲುಗಳಿಗೆ ಚಾಲನೆ ನೀಡಿದರು. ಆಗ್ನೇಯ ರೈಲ್ವೆಯ ಅಡಿಯಲ್ಲಿ ಬರುವ ರೈಲು ನಿಲ್ದಾಣದ ಮೂಲಕ ಈ ಹಿಂದೆ ಕೇವಲ ಒಂದು ಪ್ಯಾಸೆಂಜರ್ ರೈಲು ಮಾತ್ರ ಓಡುತ್ತಿತ್ತು ಎಂಬುದು ಗಮನಾರ್ಹ.

ರೈಲುಗಳಿಗೆ ಚಾಲನೆ ಮಾತ್ರವಲ್ಲದೆ, ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿಲ್ದಾಣದ ಪುನರಾಭಿವೃದ್ಧಿಗೆ ರಾಷ್ಟ್ರಪತಿ ಮುರ್ಮು ಶಂಕುಸ್ಥಾಪನೆ ಮಾಡಿದರು. ನಿಲ್ದಾಣದ ಪುನರಾಭಿವೃದ್ಧಿಯು ರೈಲು ಸಾರಿಗೆ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ. ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಅಲ್ಲದೇ ಇಲ್ಲಿನ ಜನರ ಜೀವನ ಮಟ್ಟವನ್ನು ಸುಧಾರಿಸುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಒಡಿಶಾದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದರು. "ಹಿಂದೆ, ಒಡಿಶಾ ಕೇವಲ 800 ಕೋಟಿ ರೂಪಾಯಿಗಳನ್ನು ಪಡೆಯುತ್ತಿತ್ತು. ಆದರೆ ಈಗ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 10,000 ಕೋಟಿ ರೂಪಾಯಿಗಳನ್ನು ಪಡೆಯುತ್ತಿದೆ. ಒಡಿಶಾದ 57 ನಿಲ್ದಾಣಗಳನ್ನು ವಿಶ್ವದರ್ಜೆಯ ನಿಲ್ದಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಿ, ಯಾವುದೇ ಪ್ರದೇಶದ ಅಭಿವೃದ್ಧಿಯು ಆ ಪ್ರದೇಶದ ಸಾರಿಗೆ ವ್ಯವಸ್ಥೆಯನ್ನು ಅವಲಂಭಿಸಿರುತ್ತದೆ. ರೈಲು, ರಸ್ತೆಗಳು ಅಥವಾ ಅಂಚೆ ಸೇವೆಗಳು ಜನರ ಜೀವನವನ್ನು ಸುಲಭಗೊಳಿಸುತ್ತವೆ. ಈ ಮೂರು ರೈಲುಗಳು ಸ್ಥಳೀಯರಿಗೆ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ನೆರೆಯ ರಾಜ್ಯಗಳಿಗೆ ಪ್ರಯಾಣಿಸಲು ಸಹಾಯ ಮಾಡುತ್ತವೆ. ಒಡಿಶಾದ ಕೈಗಾರಿಕಾ ಪಟ್ಟಣ ರೂರ್ಕೆಲಾಗೆ ಭೇಟಿ ನೀಡುವಲ್ಲಿ ಇನ್ಮುಂದೆ ಜನರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದರು.
ಬುಡಕಟ್ಟು ಜನರ ಅಭಿವೃದ್ಧಿ ಇಲ್ಲದೆ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಅಪೂರ್ಣ ಎಂದು ಹೇಳಿದ ಮುರ್ಮು, ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಬುಡಕಟ್ಟು ಯುವಕರು ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ಒತ್ತಾಯಿಸಿ, ಸ್ವ - ಅಭಿವೃದ್ಧಿಗೆ ಪ್ರತಿಯೊಬ್ಬರ ಪ್ರಯತ್ನವೂ ಅಗತ್ಯ ಎಂದು ಮುರ್ಮು ಒತ್ತಿ ಹೇಳಿದರು.

ತಮ್ಮ ಜೀವನದ ಬಹುಭಾಗವನ್ನು ರಾಯರಂಗ್ ಪುರದಲ್ಲಿ ಕಳೆದಿರುವ ಮುರ್ಮು ಅವರು ಕೌನ್ಸಿಲರ್ ಆಗಿ ಆಯ್ಕೆಯಾದಾಗ ಮತ್ತು ರಾಯರಂಗ್ ಪುರ ನಾಗರಿಕ ಸಂಸ್ಥೆಯ ಉಪಾಧ್ಯಕ್ಷರಾದಾಗ ಸಣ್ಣ ಪಟ್ಟಣದಿಂದ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು. ನಂತರ, ಅವರು 2000 ಮತ್ತು 2009 ರ ನಡುವೆ ಎರಡು ಬಾರಿ ರಾಯರಂಗಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications