ಭೀಕರ ರಸ್ತೆ ಅಪಘಾತಕ್ಕೆ ರಷ್ಯಾ ಅಧ್ಯಕ್ಷರ ಮೆಚ್ಚಿನ ಚಾಲಕ ಬಲಿ
ರಷ್ಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಮೆಚ್ಚಿನ ಚಾಲಕ ಬಲಿಯಾಗಿದ್ದಾರೆ. ಈ ವೇಳೆಯಲ್ಲಿ ರಷ್ಯಾ ಅಧ್ಯಕ್ಷರು ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಪ್ರವಾಸ ತೆರಳಿರುವುದರಿಂದ ಸಂಭವನೀಯ ಅಪಘಾತದಿಂದ ಪಾರಾಗಿದ್ದಾರೆ.
ಮೊಸ್ಕೊದಲ್ಲಿ ರಷ್ಯಾ ಅಧ್ಯಕ್ಷರ ಅಧಿಕೃತ ಕಪ್ಪು ವರ್ಣದ ಕಾರಿಗೆ ವಿರುದ್ಧ ದಿಕ್ಕಿನಿಂದ ಅಮಿತ ವೇಗದಲ್ಲಿ ಬಂದ ಕಾರು ಢಿಕ್ಕಿ ಹೊಡೆದಿತ್ತು. ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.

ಪುತಿನ್ ಅಧಿಕೃತ ಕಾರಿಗೆ ಲೇನ್ ತಪ್ಪಿಸಿ ವಿರುದ್ಧ ದಿಕ್ಕಿನಿಂದ ಬಂದ ಮರ್ಸಿಡಿಸ್ ಬೆಂಝ್ ಕಾರು ಬಲವಾಗಿ ಢಿಕ್ಕಿ ಹೊಡೆದಿತ್ತು.

ರಷ್ಯಾ ಅಧ್ಯಕ್ಷೀಯ ಬಿಎಂಡಬ್ಲ್ಯು ಕಾರಿಗೆ ಮರ್ಸಿಡಿಸ್ ಬೆಂಝ್ ಕಾರು ಮುಖಾಮುಖಿಯಾಗಿ ಢಿಕ್ಕಿ ಹೊಡೆದಿತ್ತು ಎಂಬುದು ತಿಳಿದು ಬಂದಿದೆ.

ರಷ್ಯಾ ರಾಜಧಾನಿಯಲ್ಲಿರುವ ಕುಟುಝೋವಿಸ್ಕಿ ಅವೆನ್ಯೂ ಮಾರ್ಗದಲ್ಲಿ ಅಪಘಾತದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಷ್ಯಾ ಮಾಧ್ಯಮಗಳು ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಪುತಿನ್ ಮೆಚ್ಚಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದೆಡೆ ತೀವ್ರತರ ಗಾಯಗೊಂಡಿರುವ ಮರ್ಸಿಡಿಸ್ ಚಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.

ರಷ್ಯಾ ಅಧ್ಯಕ್ಷನ ಅಧಿಕೃತ ಚಾಲಕ ಡ್ರೈವಿಂಗ್ ನಲ್ಲಿ 40 ವರ್ಷಕ್ಕೂ ಹೆಚ್ಚು ಅನುಭವ ಸಂಪತ್ತನ್ನು ಹೊಂದಿದ್ದಾರೆ. ಇದರಿಂದಾಗಿ ಘಟನೆಯು ರಷ್ಯಾ ಅಧ್ಯಕ್ಷರನ್ನು ದುಃಖತಪ್ತಗೊಳಿಸಿದೆ.

ಅಪಘಾತದಿಂದಾಗಿ ಗಂಟೆಗಟ್ಟಲೆ ಕಾಲ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು ಎಂಬುದನ್ನು ಮಾಧ್ಯಮಗಳು ವಿವರಿಸಿದೆ.

ಫೆಡರೇಷನ್ ಕೌನ್ಸಿಲ್ ಗೆ ಸೇರಿದ ರಷ್ಯಾ ಅಧ್ಯಕ್ಷರ ಕಾರು ಹೌಸ್ ಆಫ್ ಲಾರ್ಡ್ಸ್ ಗೆ ಸಮಾನವಾಗಿದೆ. ಈಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಂದ ಹಾಗೆ ರಷ್ಯಾ ಅಧ್ಯಕ್ಷರು ಮುಂದಿನ ವರ್ಷದಲ್ಲಿ ಹೊಸ ಲಿಮೊಸಿನ್ ಕಾರನ್ನು ಗಿಟ್ಟಿಸಿಕೊಳ್ಳಲಿದ್ದಾರೆ.
ಭೀಕರ ರಸ್ತೆ ಅಪಘಾತದ ವಿಡಿಯೋ ವೀಕ್ಷಿಸಿ


Click it and Unblock the Notifications