Bullet Train: ಭಾರತದ ಮೊದಲ ಬುಲೆಟ್ ರೈಲು ಯಾವಾಗ? ಬಿಗ್ ಅಪ್‌ಡೇಟ್ ಕೊಟ್ಟ ರೈಲ್ವೆ ಸಚಿವರು!
ಭಾರತದ ಮೊದಲ ಬುಲೆಟ್ ರೈಲು ವಿಭಾಗವಾದ ಗುಜರಾತ್‌ನ ಬಿಲಿಮೋರಾ ಮತ್ತು ಸೂರತ್ ನಡುವಿನ 50 ಕಿ.ಮೀ ವ್ಯಾಪ್ತಿಯು ಆಗಸ್ಟ್ 2026 ರಲ್ಲಿ ಪೂರ್ಣಗೊಳ್ಳಲಿದೆ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಅಲ್ಲದೇ ಶರವೇಗದಲ್ಲಿ ಸಾಗುತ್ತಿರುವ ಬುಲ್ಲೆಟ್ ರೈಲು ಕಾಮಗಾರಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯದ ವಲ್ಸಾದ್, ನವಸಾರಿ, ಸೂರತ್, ವಡೋದರಾ ಮತ್ತು ಆನಂದ್ ಜಿಲ್ಲೆಗಳಾದ್ಯಂತ ಪೂರ್ಣಗೊಂಡ ವಯಡಕ್ಟ್‌ಗಳನ್ನು ತೋರಿಸುವ ವೀಡಿಯೊವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬುಲ್ಲೆಟ್ ರೈಲು ಕಾಮಗಾರಿಯ 100 ಕಿ.ಮೀ ವಯಡಕ್ಟ್‌ಗಳು ಮತ್ತು 230 ಕಿ.ಮೀ ಪಿಯರ್ ಕೆಲಸವನ್ನು ಪೂರ್ಣಗೊಳಿಸಲಾಗಿದೆ.

ಬೃಹತ್ ಮುಂಬೈ - ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ಗಾಗಿ ಈ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ, ಅದರಲ್ಲಿ ಬಿಲಿಮೊರಾ - ಸೂರತ್ ವಿಭಾಗವು ಒಂದು ಭಾಗವಾಗಿದೆ. ನವೆಂಬರ್ 2021 ರಲ್ಲಿ ಕೆಲಸ ಪ್ರಾರಂಭವಾದಾಗಿನಿಂದ ಮುಂಬೈ - ಅಹಮದಾಬಾದ್ ಕಾರಿಡಾರ್ ಸ್ಥಿರ ಪ್ರಗತಿಯನ್ನು ಸಾಧಿಸುತ್ತಿದೆ. ಮೊದಲ 1 ಕಿ.ಮೀ ವಯಡಕ್ಟ್ ಅನ್ನು ಆರು ತಿಂಗಳಲ್ಲಿ ಮತ್ತು 50 ನೇ ಕಿ.ಮೀ ಅನ್ನು ಈ ವರ್ಷದ ಏಪ್ರಿಲ್‌ನಲ್ಲಿ ನಿರ್ಮಿಸಲಾಗಿದೆ.
ಇದರ ಜೊತೆಗೆ, ಮುಂಬೈ - ಅಹಮದಾಬಾದ್ ಕಾರಿಡಾರ್‌ನ ಭಾಗವಾಗಿ ಆರು ನದಿಗಳ ಮೇಲೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ವಲ್ಸಾದ್ ಜಿಲ್ಲೆಯ ಪರ್ ಮತ್ತು ಔರಂಗ ಸೇರಿದಂತೆ ನವಸಾರಿಯಲ್ಲಿ ಬರುವ ಪೂರ್ಣ, ಮಿಂಧೋಲಾ, ಅಂಬಿಕಾ ಮತ್ತು ವೆಂಗನಿಯಾ ನದಿಗಳ ಮೇಲೆ ಈ ಮುಂಬೈ ಅಹಮದಾಬಾದ್ ಕಾರಿಡಾರ್‌ನಲ್ಲಿ ಬುಲ್ಲೆಟ್ ರೈಲು ಹಾದು ಹೋಗಲಿದೆ.

NHSRCL (ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್) ಈ ಸೇತುವೆಗಳ ಡ್ರೋನ್ ವೀಡಿಯೊಗಳನ್ನು ಈಗ ಹಂಚಿಕೊಂಡಿದೆ, ಅವುಗಳಲ್ಲಿ ಕೆಲವು ಈಗಾಗಲೇ ನಿರ್ಮಿಸಲಾಗಿದ್ದು, ಈ ವಿಡಿಯೋವನ್ನು.. ''ಬುಲೆಟ್ ಸ್ಪೀಡ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬೃಹತ್ ಕಾಮಗಾರಿಯು ವಿಶ್ವಮಟ್ಟದ ಟ್ರಾಕ್ ಜೋಡಣೆಯನ್ನು ತೋರಿಸುತ್ತಿದ್ದು, ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಕಾಮಗಾರಿಗೆ ಅಂದಾಜು ರೂ. 1.08 ಲಕ್ಷ ಕೋಟಿ ವೆಚ್ಚವಾಗಿದ್ದು, ಇದರಲ್ಲಿ ರೂ. 10,000 ಕೋಟಿ ನೀಡಲು ಕೇಂದ್ರ ಬದ್ಧವಾಗಿದ್ದು, ಗುಜರಾತ್ ಮತ್ತು ಮಹಾರಾಷ್ಟ್ರ ತಲಾ ರೂ. 5,000 ಕೋಟಿ ನೀಡಲಿವೆ. ಉಳಿದ ಹಣವನ್ನು ಜಪಾನ್‌ನಿಂದ ಕನಿಷ್ಠ 0.1 ಶೇಕಡಾ ಬಡ್ಡಿ ದರದಲ್ಲಿ ಸಾಲದ ಮೂಲಕ ಸುರಕ್ಷಿತಗೊಳಿಸಲಾಗುತ್ತದೆ.

ಗಜರಾಜ್ ವ್ಯವಸ್ಥೆ (Gajraj system) ಬಗ್ಗೆ ವಿವರಿಸದ ಸಚಿವ ಅಶ್ವಿನಿ ವೈಷ್ಣವ್: ಗಜರಾಜ್ ವ್ಯವಸ್ಥೆಯನ್ನು ತರಲಾಗುತ್ತಿದ್ದು, ಇದು ಕಾಡಾನೆಗಳು ಹಾಗೂ ರೈಲುಗಳ ನಡುವಿನ ಡಿಕ್ಕಿಯನ್ನು ತಪ್ಪಿಸುತ್ತದೆ. ಜೊತೆಗೆ ದೇಶದ ವಿವಿಧ ಭಾಗಗಳನ್ನು ಉತ್ತಮವಾಗಿ ಸಂಪರ್ಕಿಸಲು ಹೆಚ್ಚಿನ ಟ್ರ್ಯಾಕ್‌ಗಳನ್ನು ನಿರ್ಮಿಸುವ ತಂತ್ರಜ್ಞಾನವಾಗಿದೆ ಎಂದರು.
ಭಾರತದ ರೈಲು ಜಾಲ ಮತ್ತು ಸೇವೆಗಳಿಗಾಗಿ ಅನೇಕ ಯೋಜನೆಗಳನ್ನು ಘೋಷಿಸಿದ ಸಚಿವ ಅಶ್ವಿನಿ ವೈಷ್ಣವ್, ರೈಲಿನ ಡಿಕ್ಕಿಯನ್ನು ತಪ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಕವಚ್ ವ್ಯವಸ್ಥೆಯ ಬಗ್ಗೆ ವಿವರಿಸಿದರು. ಜೂನ್‌ನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ಅಪಘಾತವು ಸುಮಾರು 300 ಜನರನ್ನು ಬಲಿಪಡೆದಿತ್ತು. ಇಂತಹ ಅನಾಹುತಗಳಿಂದ ರಕ್ಷಿಸಲು ಆನ್-ಟ್ರ್ಯಾಕ್ ಡಿಕ್ಕಿಗಳನ್ನು ಮೊದಲೇ ಪತ್ತೆಹಚ್ಚಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಎಚ್ಚರಿಕೆ ವ್ಯವಸ್ಥೆಯೇ ಕವಚ್ ಎಂದರು.
ಭಾರತದಲ್ಲಿ ಹೊಸ ರೈಲುಗಳ ಸಂಖ್ಯೆಯು ಕೊರೊನಾ ಬರುವ ಮುಂಚೆಯೇ 1,768 ಮೇಲ್/ಎಕ್ಸ್‌ಪ್ರೆಸ್ ಸೇವೆಗಳಿದ್ದವು, ಆದರೆ ಈಗ ಈ ಸಂಖ್ಯೆ 2,124 ಕ್ಕೆ ಏರಿದೆ. ಹಾಗೆಯೇ 5,626 ಉಪನಗರ ಸೇವೆಗಳಿಂದ ಈಗ 5,774 ಕ್ಕೆ ಏರಿದೆ. ಪ್ಯಾಸೆಂಜರ್ ರೈಲುಗಳು 2,792 ರಿಂದ 2,856 ಕ್ಕೆ ಏರಿಕೆಯಾಗಿದೆ. ಒಟ್ಟಾರೆಯಾಗಿ, ರೈಲ್ವೆಯು 2022/23 ರಲ್ಲಿ 640 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ ಮತ್ತು 23/24 ರ ಗುರಿ 750 ಕೋಟಿಯಾಗಿದೆ ಎಂದರು.


Click it and Unblock the Notifications








