ಇಂಡಿಯಾ (IND) ಹೋಗಿ 'ಭಾರತ್' ಆಗಿ ಬದಲಾದ್ರೆ ವಾಹನ ನೋಂದಣಿಯಲ್ಲಿ BH ಕಡ್ಡಾಯವೇ?
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ದೀರ್ಘಕಾಲದ ಚಿಹ್ನೆಗಳನ್ನು ತೆಗೆದುಹಾಕಲು ಸಜ್ಜಾಗಿದೆ ಎನ್ನಲಾಗಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಭಾರತದ ರಾಷ್ಟ್ರಪತಿಗಳು ಭಾಗವಹಿಸಿದ ಕಾರ್ಯಕ್ರಮಕ್ಕೆ ಇತ್ತೀಚೆಗೆ ಬಿಡುಗಡೆಯಾದ ಆಹ್ವಾನದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಾಗಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಉಲ್ಲೇಖಿಸಲಾಗಿದೆ.
ಸದ್ಯ ಇದು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಲವರು ಟೀಕಿಸುತ್ತಿದ್ದಾರೆ. ಒಂದೆಡೆ ಇದನ್ನು ಬೆಂಬಲಿಸಿದರೆ ಮತ್ತೊಂದೆಡೆ ವಿರೋಧಿಸುತ್ತಿದ್ದಾರೆ. ಆದರೆ, ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸಿದರೆ ವಿವಿಧ ವಲಯಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಪ್ರಮುಖವಾಗಿ ವಾಹನಗಳಲ್ಲಿ ನಂಬರ್ ಪ್ಲೇಟ್ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ದೇಶದಲ್ಲಿ ನೋಂದಣಿಯಾದ ವಾಹನಗಳ ನೋಂದಣಿ ಸಂಖ್ಯೆಯಲ್ಲೂ ಬದಲಾವಣೆಯಾಗುತ್ತದೆಯೇ? ಸದ್ಯ ನಾವು IND ನಂಬರ್ ಪ್ಲೇಟ್ ಬಳಸುತ್ತಿದ್ದೇವೆ. ಆದ್ರೆ ಇದು ಕಡ್ಡಾಯವಲ್ಲ, ಕೆಲ ವಾಹನಗಳು IND ಅಕ್ಷರಗಳು ಇಲ್ಲದೇ ಚಲಿಸುವುದನ್ನು ನಾವು ರಸ್ತೆಗಳಲ್ಲಿ ಕಾಣಬಹುದು. ಉಳಿದಂತೆ ನಮ್ಮ ರಾಜ್ಯದ KA ಅಕ್ಷರಗಳು ಕಡ್ಡಾಯವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಇದೀಗ ಹೊಸ ಬದಲಾವಣೆಗಳು ಆಗಲಿವೆಯೇ?
ಈ ಹಿಂದೆಯೇ ಭಾರತ್ (BH) ಸರಣಿಯಲ್ಲಿ ನಂಬರ್ ಪ್ಲೇಟ್‌ಗಳನ್ನು ನೀಡಲಾಗಿತ್ತು. BH ಅಥವಾ ಭಾರತ್ ಸರಣಿಯ ನಂಬರ್ ಪ್ಲೇಟ್‌ಗಳನ್ನು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಕಳೆದ ವರ್ಷ ಆಗಸ್ಟ್‌ನಲ್ಲಿಯೇ ಪರಿಚಯಿಸಿದೆ. BH ಸಂಖ್ಯೆ ಸರಣಿಯ ನೋಂದಣಿ ಸೆಪ್ಟೆಂಬರ್ 2021 ರಲ್ಲಿ ಪ್ರಾರಂಭವಾಯಿತು. ಆದರೆ ಇದರ ಉದ್ದೇಶವೇ ಬೇರೆ ಆಗಿತ್ತು.

ವಾಹನಗಳ ನೋಂದಣಿಯನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವ ಹೊರೆಯನ್ನು ಸರಿದೂಗಿಸಲು BH ಸಂಖ್ಯೆ ಸರಣಿಯನ್ನು ಪರಿಚಯಿಸಲಾಯಿತು. ಉದಾಹರಣೆಗೆ, DL ನಂಬರ್ ಪ್ಲೇಟ್‌ನೊಂದಿಗೆ ದೆಹಲಿಯಲ್ಲಿ ನೋಂದಾಯಿಸಲಾದ ಕಾರು ಬೇರೆ ಯಾವುದೇ ರಾಜ್ಯದಲ್ಲಿ 12 ತಿಂಗಳವರೆಗೆ ಮಾತ್ರ ಚಲಿಸಬಹುದು. ಮಾಲೀಕರು ಹೊಸ ರಾಜ್ಯಕ್ಕೆ ತೆರಳಲು ನಿರ್ಧರಿಸಿದರೆ, ಅವರು ವಾಹನವನ್ನು ನಿರ್ದಿಷ್ಟ ರಾಜ್ಯದಲ್ಲಿ ನೋಂದಾಯಿಸಿಕೊಳ್ಳಬೇಕು.
ಇದೆಲ್ಲವೂ ಮೋಟಾರು ವಾಹನ ಕಾಯ್ದೆ, 1988, ಸೆಕ್ಷನ್ 47 ರ ಅಡಿಯಲ್ಲಿ ಬರುತ್ತದೆ. ಆದರೆ BH ಸರಣಿಯ ಅಡಿಯಲ್ಲಿ, ಮಾಲೀಕರು ಈ ತೊಡಕಿನ ಪ್ರಕ್ರಿಯೆಯಿಂದ ಪರಿಹಾರವನ್ನು ಪಡೆಯಬಹುದು. ಸುಲಭವಾಗಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಚಲಿಸಬಹುದು. ಆದರೆ, BH ಸಂಖ್ಯೆ ಸರಣಿಯು ಎಲ್ಲರಿಗೂ ಅಲ್ಲ. ನಿಯಮಿತ ವರ್ಗಾವಣೆಯ ತೊಂದರೆ ಇರುವ ಸರ್ಕಾರಿ ಅಧಿಕಾರಿಗಳು ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ.

ಇದರಿಂದ ಎರಡು ರಾಜ್ಯಗಳ ನಡುವೆ ಸಂಚರಿಸುವ ವಾಹನಗಳಿಗೆ ಭಾರತ್ ನಂಬರ್ ಪ್ಲೇಟ್ ಇದ್ದರೇ ಯಾವುದೇ ತೊಂದರೆಯಿಲ್ಲದೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸಬಹುದು. ಇದೀಗ ಇಂಡಿಯಾ ಹೆಸರನ್ನು ತೆಗೆದುಹಾಕಿ ಭಾರತ್ ಎಂದು ಬದಲಾಯಿಸಿದರೆ BH ಸಂಖ್ಯೆ ಸರಣಿಯು ಎಲ್ಲಾ ವಾಹನಗಳಲ್ಲಿ ಅಳವಡಿಸಲಾಗುವುದೇ? ಇಲ್ಲ ಇದು ಅಸಾಧ್ಯ.
ಏಕೆಂದರೆ ಈಗಾಗಲೇ BH ಸಂಖ್ಯೆ ಸರಣಿಯನ್ನು ಒಂದು ಉದ್ದೇಶಕ್ಕಾಗಿ ಪರಿಚಯಿಸಲಾಗಿರುವುದರಿಂದ ಈಗ ಅದನ್ನು ಬದಲಾಯಿಸುವ ಸಾಧ್ಯತೆಗಳು ತುಂಬಾ ಕಡಿಮೆ. ಪ್ರಸ್ತುತ ನೀಡಲಾದ ನಂಬರ್ ಪ್ಲೇಟ್‌ಗಳು ಮೊದಲು ರಾಜ್ಯದ ಅಕ್ಷರಗಳನ್ನು ಹೊಂದಿದ್ದು ನಂತರ RTO ಕಛೇರಿ ಸಂಖ್ಯೆ ನಂತರ ಯಾವುದೇ ಸರಣಿ ಕೋಡ್ ಆನಂತರ ವಾಹನ ನೋಂದಣಿ ಸಂಖ್ಯೆ ಇರುತ್ತದೆ.

ಇದರಲ್ಲಿ ಎಲ್ಲಿಯೂ ಭಾರತದ ಕುರುಹು ಸಿಗುವುದಿಲ್ಲ. ರಾಜ್ಯ ಸರ್ಕಾರದ ಗುರುತು ಮತ್ತು RTO ನ ಗುರುತು ಮಾತ್ರ ಇಲ್ಲಿ ಮುಖ್ಯವಾಗಿರುತ್ತದೆ. ಹಾಗಾಗಿ ಇಂಡಿಯಾ ಹೆಸರನ್ನು ಭಾರತ್ ಎಂದು ಬದಲಾಯಿಸಿದರೂ ವಾಹನ ನೋಂದಣಿ ಸಂಖ್ಯೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ನಂಬಲಾಗಿದೆ. ಒಂದು ವೇಳೆ ಭವಿಷ್ಯದಲ್ಲಿ ಭಾರತದಾದ್ಯಂತ ವಾಹನಗಳಿಗೆ BH ನಂಬರ್ ಪ್ಲೇಟ್ ಅನ್ನು ತರಬಹುದೇ ಎಂಬುದನ್ನು ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications