ಲಕ್ಷುರಿ ಫೀಚರ್ಸ್.. ಹೊಸ ಟೆಸ್ಲಾ ಕಾರು ಖರೀದಿಸಿದ ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ, ಬೆಲೆ ಎಷ್ಟು.. ಹೇಗಿದೆ?
ಟೀಂ ಇಂಡಿಯಾ ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ರೋಹಿತ್ ಶರ್ಮಾ (Rohit Sharma) ಅವರಿಗೆ ಕಾರುಗಳ ಮೇಲೆ ವಿಶೇಷ ಪ್ರೀತಿಯಿದೆ. ಬಿಎಂಡಬ್ಲ್ಯೂ ಎಂ5, ರೇಂಜ್ ರೋವರ್, ಮರ್ಸಿಡಿಸ್ ಎಸ್ ಕ್ಲಾಸ್, ಮರ್ಸಿಡಿಸ್ ಜಿಎಲ್ಎಸ್ ಹಾಗೂ ಲ್ಯಾಂಬೋರ್ಘಿನಿ ಉರಸ್ ಎಸ್ಇ ಸೇರಿದಂತೆ ಹಲವು ಐಷಾರಾಮಿ ಕಾರುಗಳ ಮಾಲೀಕರು ಆಗಿದ್ದಾರೆ. ಸದ್ಯ, ರೋಹಿತ್ ಶರ್ಮಾ ಅವರು ಹೊಚ್ಚ ಹೊಸ ಟೆಸ್ಲಾ ಮಾಡೆಲ್ ವೈ (Tesla Model Y) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಟೆಸ್ಲಾ ಮಾಡೆಲ್ ವೈ ವಿಶೇಷತೆಗಳೇನು:
ಈ ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯು ಕನಿಷ್ಠ ರೂ.59.89 ಲಕ್ಷ ಹಾಗೂ ಗರಿಷ್ಠ ರೂ.67.89 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸ್ಟ್ಯಾಂಡರ್ಡ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಮತ್ತು ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ಎಂಬ ಎರಡು ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಲಭ್ಯವಿದೆ.

ಇದು ನೋಡುಗರ ಕಣ್ಣು ಕುಕ್ಕುವಂತಹ ವಿನ್ಯಾಸವನ್ನು ಒಳಗೊಂಡಿದೆ. ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್‌ಲ್ಯಾಂಪ್‌ಗಳು, ಫ್ಲಶ್-ಡೋರ್ ಹ್ಯಾಂಡಲ್‌ಗಳು ಹಾಗೂ 19 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಸ್ಟೆಲ್ತ್ ಗ್ರೇ, ಪರ್ಲ್ ವೈಟ್, ಡೈಮಂಡ್ ಬ್ಲ್ಯಾಕ್, ಗ್ಲೇಸಿಯರ್ ಬ್ಲೂ, ಕ್ವಿಕ್ ಸಿಲ್ವರ್ ಮತ್ತು ಅಲ್ಟ್ರಾ ರೆಡ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ 'ಟೆಸ್ಲಾ ಮಾಡೆಲ್ ವೈ' ಸ್ವಲ್ಪ ಮಟ್ಟಿಗೆ ದೊಡ್ಡ ಗಾತ್ರದಲ್ಲಿದೆ. 4,797 ಮಿ.ಮೀ ಉದ್ದ, 1,982 ಮಿ.ಮೀ ಅಗಲ ಮತ್ತು 1,624 ಮಿ.ಮೀ ಎತ್ತರವಿದೆ. ಜೊತೆಗಿದು 167 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,890 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 2,003 ಕೆಜಿ ತೂಕವಿದೆ.
ಈ ಕಾರು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 60 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) & 75 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 500 ರಿಂದ 622 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಹೀಗಾಗಿ ದೂರದ ಊರುಗಳಿಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ.
ಇದು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಕ್ಕೆ ಹೋಗುವ ಸಂದರ್ಭದಲ್ಲಿ ಜಾಸ್ತಿ ಲಗೇಜ್ ಸಾಗಿಸಲು 854 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 200 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಹೊಸ 'ಟೆಸ್ಲಾ ಮಾಡೆಲ್ ವೈ' ಕ್ಯಾಬಿನ್ ವಿನ್ಯಾಸವು ಉತ್ತಮವಾಗಿದೆ. ಬೃಹತ್ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಪೈಲಟ್, ವೆಂಟಿಲೇಟೆಡ್ & ಹೀಟೆಡ್ ಫ್ರಂಟ್ ಸೀಟ್‌ಗಳು, 9 ಸ್ಪೀಕರ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಫೋನ್ ಚಾರ್ಜರ್, ಆಂಬಿಯೆಂಟ್ ಲೈಟಿಂಗ್ ಮತ್ತು ಕನೆಕ್ಟ್ಡ್ ಕಾರ್ ಟೆಕ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯೊಂದ 6 & 7 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಡ್ಯಾಶ್‌ಕ್ಯಾಮ್, ಎಇಬಿ (ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಮುಂಭಾಗ (ಫ್ರಂಟ್) - ಹಿಂಭಾಗ (ರೇರ್) ಪಾರ್ಕಿಂಗ್ ಸೆನ್ಸರ್ಸ್ ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಕ್ಕೆ ಹ್ಯುಂಡೈ ಐಯೋನಿಕ್ 5, ಬಿವೈಡಿ ಸೀಲ್ ಹಾಗೂ ಕಿಯಾ ಇವಿ6 ಮಾಡೆಲ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.


Click it and Unblock the Notifications








