ಆಟೋ ಬಿಡಿಭಾಗಗಳ ಮೇಲೆ ರಫ್ತು ನಿಷೇಧ: ಮತ್ತಷ್ಟು ಬಿಗಡಾಯಿಸಲಿದೆ ಆಟೋಮೊಬೈಲ್ ಉತ್ಪಾದನೆ!
ರಷ್ಯಾ-ಉಕ್ರೇನ್ ನಡುವಿನ ಯುದ್ದವು ಕೇವಲ ಆಯಾ ದೇಶಗಳಿಗೆ ಮಾತ್ರ ಇಡೀ ವಿಶ್ವವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದು, ಯುದ್ದದ ಪರಿಣಾಮ ಉದ್ಯಮ ವಲಯವನ್ನು ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ.

ಯುದ್ದದ ಪರಿಣಾಮ ರಷ್ಯಾದ ಮೇಲೆ ಮುಗಿಬಿದ್ದಿರುವ ನ್ಯಾಟೋ ಸದಸ್ಯತ್ವ ರಾಷ್ಟ್ರಗಳು ಆರ್ಥಿಕ ಹೊಡೆತ ನೀಡಲು ನಿರ್ಬಂಧ ಅಸ್ತ್ರ ಪ್ರಯೋಗಿಸುತ್ತಿದ್ದು, ಪ್ರತಿಯಾಗಿ ರಷ್ಯಾ ಕೂಡಾ ತನ್ನ ರಾಷ್ಟ್ರದಿಂದ ರಫ್ತುಗೊಳ್ಳುವ ಪ್ರಮುಖ ಸರಕುಗಳ ಮೇಲೆ ನಿಷೇಧ ಹೇರುವ ಮೂಲಕ ವಿಶ್ವ ಸಮುದಾಯವನ್ನೇ ಇಕ್ಕಟ್ಟಿಗೆ ಸಿಲುಕಿಸುತ್ತಿದೆ.

ಹೌದು, ಯುದ್ದದ ವಿಚಾರವಾಗಿ ಉಕ್ರೇನ್ ಪರ ನಿಂತಿರುವ ಪ್ರಮುಖ ದೇಶಗಳು ರಷ್ಯಾದ ಮೇಲೆ ವಿಧಿಸಲಾದ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಸರ್ಕಾರ ಕೂಡಾ ಕಾರುಗಳು ಮತ್ತು ಆಟೋ ಬಿಡಿಭಾಗಗಳು ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳ ರಫ್ತು ನಿಷೇಧಿಸಿದೆ.

ರಷ್ಯಾದ ಈ ಕಠಿಣ ಕ್ರಮವು ಮುಂಬರುವ ದಿನಗಳಲ್ಲಿ ಪ್ರಪಂಚದಾದ್ಯಂತ ಪ್ರಮುಖ ಆಟೋ ಉತ್ಪಾದನಾ ಘಟಕಗಳು ಬಿಡಿಭಾಗಗಳ ಕೊರತೆ ಎದುರಿಸಲಿದ್ದು, ಇದರಿಂದ ಆಟೋಮೊಬೈಲ್ ಉದ್ಯಮದಲ್ಲಿ ಅವಶ್ಯವಾಗಿರುವ ಸೆಮಿಕಂಡಕ್ಟರ್ ಕೊರತೆ ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗುತ್ತಿದೆ.

ನ್ಯಾಟೋ ರಾಷ್ಟ್ರಗಳ ಮೇಲಿನ ರಷ್ಯಾದ ಸೇಡು ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಇಡೀ ಆಟೋಮೊಬೈಲ್ ಉದ್ಯಮದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಕಾರುಗಳು ಮತ್ತು ಆಟೋ ಬಿಡಿಭಾಗಗಳ ರಫ್ತಿನ ಮೇಲೆ ರಷ್ಯಾ ಸರ್ಕಾರ ವಿಧಿಸಿರುವ ನಿಷೇಧವು ಈ ವರ್ಷಾಂತ್ಯದವರೆಗೂ ಇರಬಹುದು ಎನ್ನಲಾಗಿದೆ.

ವಾಹನಗಳು ಮತ್ತು ಬಿಡಿಭಾಗಗಳ ಜೊತೆಗೆ ರಷ್ಯಾ ಸರ್ಕಾರವು ದೂರಸಂಪರ್ಕ, ಆರೋಗ್ಯ, ಕೃಷಿ, ವಿದ್ಯುತ್ ಉಪಕರಣಗಳು ಸೇರಿದಂತೆ 200ಕ್ಕೂ ಹೆಚ್ಚು ಉತ್ಪನ್ನಗಳ ರಫ್ತು ಪ್ರಕ್ರಿಯೆ ಮೇಲೆ ನಿಷೇಧ ಹೇರಿದ್ದು, ನ್ಯಾಟೋ ಒಕ್ಕೂಟವನ್ನು ಬೆಂಬಲಿಸುವ ದೇಶಗಳಿಗೆ ರಫ್ತು ಮಾಡುವ ಉತ್ಪನ್ನಗಳ ಮೇಲೆ ಈ ನಿಷೇಧವನ್ನ ವಿಧಿಸಲಾಗಿದೆ.

ಯುದ್ದದಲ್ಲಿ ಉಕ್ರೇನ್ ಮೇಲೆ ಗದಾಪ್ರಹಾರ ನಡೆಸುತ್ತಿರುವ ರಷ್ಯಾ ಸರ್ಕಾರದ ಆರ್ಥಿಕತೆಗೆ ಹಾನಿ ಮಾಡಲು ಉದ್ದೇಶದಿಂದ ನ್ಯಾಟೋ ಪಡೆಯ ರಾಷ್ಟ್ರಗಳು ಹಲವಾರು ನಿರ್ಬಂಧಗಳನ್ನು ವಿಧಿಸಿದ್ದು, ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾ ಆರ್ಥಿಕ ಸಚಿವಾಲಯ ಕೂಡಾ ಇಂತದೊಂದು ಕಠಿಣ ಕ್ರಮಕೈಗೊಂಡಿದೆ.

ಇದರ ನಡುವೆ ರಷ್ಯಾ ಸರ್ಕಾರವು ತನ್ನ ದೇಶವನ್ನು ತೊರೆಯುವ ಯತ್ನದಲ್ಲಿರುವ ಕಂಪನಿಗಳ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವುದಾಗಿ ಬೆದರಿಕೆ ಹಾಕಿದ್ದು, ಅಂತರರಾಷ್ಟ್ರೀಯ ಒತ್ತಡದಲ್ಲಿರುವ ಹಲವು ವಿದೇಶಿ ವಾಹನ ಉತ್ಪಾದನಾ ಕಂಪನಿಗಳು ಈಗಾಗಲೇ ರಷ್ಯಾದಲ್ಲಿ ತಮ್ಮ ವಾಹನ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದಾರೆ.

ರಷ್ಯಾದಲ್ಲಿ ಬೃಹತ್ ಪ್ರಮಾಣದ ಕಾರು ಉತ್ಪಾದನಾ ಘಟಕಗಳನ್ನು ಹೊಂದಿರುವ ಹೋಂಡಾ, ಟೊಯೊಟಾ, ಫೋಕ್ಸ್‌ವ್ಯಾಗನ್, ಜನರಲ್ ಮೋಟಾರ್ಸ್, ಜಾಗ್ವಾರ್ ಲ್ಯಾಂಡ್ ರೋವರ್, ಮರ್ಸಿಡಿಸ್ ಬೆಂಝ್, ಫೋರ್ಡ್ ಮತ್ತು ಬಿಎಂಡಬ್ಲ್ಯು ಕಂಪನಿಗಳು ತಮ್ಮ ಕಾರ್ಖಾನೆಗಳನ್ನು ತಾತ್ಕಾಲಿಕ ಮುಚ್ಚಿದ್ದು, ರಷ್ಯಾಕ್ಕೆ ಯಾವುದೇ ಕಾರುಗಳನ್ನು ಸಹ ರಫ್ತು ಮಾಡುತ್ತಿಲ್ಲ.

ಯುದ್ದದ ಪರಿಸ್ಥಿತಿಯಲ್ಲಿ ಉತ್ಪಾದನೆಯನ್ನು ನಿಯಮಿತವಾಗಿ ನಡೆಸುವುದು ಕಷ್ಟವೆಂದು ಅರಿತಿರುವ ಪ್ರಮುಖ ಕಾರು ಕಂಪನಿಗಳು ತಮ್ಮ ವಾಹನ ಉತ್ಪಾದನಾ ಘಟಕಗಳನ್ನು ಬಂದ್ ಮಾಡಿದ್ದು, ಪರಿಸ್ಥಿತಿ ತಿಳಿಗೊಳ್ಳಲು ಇನ್ನು ಕೆಲವು ವರ್ಷಗಳೇ ಬೇಕಾಗಬಹುದು ಎನ್ನಲಾಗಿದೆ.

ಅದರಲ್ಲೂ ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಆಟೋಉದ್ಯಮವನ್ನು ಕಾಡುತ್ತಿರುವ ಸೆಮಿಕಂಡಕ್ಟರ್ ಕೊರತೆಯೂ ರಷ್ಯಾ-ಉಕ್ರೇನ್ ಯುದ್ದದಿಂದ ಮತ್ತಷ್ಟು ಹೆಚ್ಚಳವಾಗಲಿದ್ದು, ಸೆಮಿಕಂಡಕ್ಟರ್ ಉತ್ಪಾದನೆಗೆ ಬೇಕಿರುವ ಪ್ರಮುಖ ಕಚ್ಚಾವಸ್ತುಗಳು ರಷ್ಯಾದ ಪ್ರಮುಖ ಗಣಿಗಳು ಹೆಚ್ಚಿನ ಮಟ್ಟದ ಬೇಡಿಕೆ ಹೊಂದಿವೆ.

ಹೀಗಿರುವಾಗ ವಾಹನ ಉತ್ಪಾದನೆಯು ಸಾಕಷ್ಟು ನಷ್ಟ ಅನುಭವಿಸಲಿದ್ದು, ನಷ್ಟ ಅನುಭವಿಸಿದರೆ ಉದ್ಯೋಗ ಕಡಿತ, ಆರ್ಥಿಕ ಹಿಂಜರಿತ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಲಿವೆ ಎನ್ನಬಹುದು.


Click it and Unblock the Notifications