Expressway: ದೇಶದಲ್ಲಿ ಸಿದ್ಧಗೊಳ್ಳುತ್ತಿದೆ ಎರಡನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ.. ಎಲ್ಲಿ, ವಿಶೇಷತೆಗಳೇನು?
ದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ರಸ್ತೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಹೊಸ ಹೆದ್ದಾರಿಗಳ ನಿರ್ಮಾಣದಿಂದ ಸಾರಿಗೆ ಸಂಪರ್ಕ ವೃದ್ಧಿಗೊಂಡು ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ದೊಡ್ಡಮಟ್ಟದಲ್ಲಿ ಅಭಿವೃದ್ಧಿಗೊಳ್ಳಲಿವೆ. ಸದ್ಯ ದೆಹಲಿ ಮತ್ತು ಮುಂಬೈ ನಡುವೆ ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣಗೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿದೆ. ಎರಡನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದ ಅಂತ್ಯದೊಳಗೆ ರಸ್ತೆ ನಿರ್ಮಾಣ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇಲ್ಲಿ ನೂತನ ಎಕ್ಸ್‌ಪ್ರೆಸ್‌ವೇ ಎಲ್ಲಿ ಹಾದುಹೋಗುತ್ತದೆ.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾಗಿ ತಿಳಿಯೋಣ.
ಪಂಜಾಬ್‌ನ ಅಮೃತಸರದಿಂದ ಗುಜರಾತ್‌ನ ಜಾಮ್‌ನಗರದವರೆಗೆ ನಿರ್ಮಿಸುತ್ತಿರುವ ಹೆದ್ದಾರಿಯು ದೇಶದ ಎರಡನೇ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ (Second Longest Expressway) ಎಂಬ ಹಿರಿಮೆಗೆ ಪಾತ್ರವಾಗಲಿದೆ. ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ (Delhi - Mumbai Expressway) 1,350 ಕಿ.ಮೀ ಉದ್ದವಿದ್ದರೆ, ಈ ಎಕ್ಸ್‌ಪ್ರೆಸ್‌ವೇ 1,316 ಕಿ.ಮೀ ವ್ಯಾಪಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 2025ರ ಡಿಸೆಂಬರ್‌ನೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲಿದೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ರಸ್ತೆ ನಿರ್ಮಾಣದ ಕೆಲಸಗಳು ಮುಕ್ತಾಯಗೊಂಡಿವೆ.

ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡಮಟ್ಟದಲ್ಲಿ ಕೊಡುಗೆ ನೀಡಬಲ್ಲ ಈ ಅಮೃತಸರ - ಜಾಮ್‌ನಗರ ಎಕ್ಸ್‌ಪ್ರೆಸ್‌ವೇ (Amritsar - Jamnagar Expressway), ರಾಜಸ್ಥಾನ (Rajasthan) ಮತ್ತು ಹರಿಯಾಣ (Haryana)ದ ನೂರಾರು ಕಿಲೋಮೀಟರ್‌ಗಳಷ್ಟು ಮರುಭೂಮಿಯಲ್ಲಿ ಹಾದು ಹೋಗುತ್ತದೆ. ಸರಿ ಸುಮಾರು 500 ಕಿ.ಮೀ ಹೆದ್ದಾರಿ ರಾಜಸ್ಥಾನದಲ್ಲಿಯೇ ಇರಲಿದೆ.
ಪ್ರಸ್ತುತ ಅಮೃತಸರದಿಂದ ಜಾಮ್‌ನಗರಕ್ಕೆ 1,516 ಕಿ.ಮೀ ದೂರವಿದ್ದು, ವಾಹನಗಳು ಈ ಅಂತರವನ್ನು ಕ್ರಮಿಸಲು 26 ಗಂಟೆಗಳು ಬೇಕಾಗುತ್ತದೆ. ಹೊಸ ಎಕ್ಸ್‌ಪ್ರೆಸ್‌ವೇ ಸಂಪೂರ್ಣವಾಗಿ ನಿರ್ಮಾಣಗೊಂಡ ಮೇಲೆ 216 ಕಿಲೋಮೀಟರ್‌ನಷ್ಟು ದೂರ ಕಡಿಮೆಯಾಗಲಿದೆ. ಪ್ರಯಾಣದ ಅವಧಿ ಅರ್ಧದಷ್ಟು ಇಳಿಮುಖವಾಗಲಿದ್ದು, ಕೇವಲ 13 ಗಂಟೆಗಳಲ್ಲಿ ತೆರಳಬಹುದು. ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನಗಳು ಗಂಟೆಗೆ 100 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲು ಅನುಮತಿಸಬಹುದು ಎನ್ನಲಾಗಿದೆ.

ಅಮೃತಸರ - ಜಾಮ್‌ನಗರ ಎಕ್ಸ್‌ಪ್ರೆಸ್‌ವೇಯಿಂದ ದೆಹಲಿ ಜನರಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಹತ್ತಿರದ ರಾಜ್ಯಗಳಾದ ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಗುಜರಾತ್‌ಗೆ ತೆರಳಲು ನೆರವಾಗುತ್ತದೆ. ಈ ಎಕ್ಸ್‌ಪ್ರೆಸ್‌ವೇ ದೆಹಲಿ - ಕತ್ರಾ ಎಕ್ಸ್‌ಪ್ರೆಸ್‌ವೇ (Delhi - Katra Expressway)ಗೂ ಕೊಂಡಿಯಾಗಿದೆ. ಅಲ್ಲದೆ, ಗುಜರಾತ್‌ನಿಂದ ಕಾಶ್ಮೀರಕ್ಕೂ ಸುಲಭವಾಗಿ ತಲುಪಬಹುದು.
ಬೆಂಗಳೂರು - ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru - Chennai Expressway) ಈ ವರ್ಷಾಂತ್ಯದೊಳಗೆ ಲೋಕಾರ್ಪಣೆಗೊಳ್ಳಬಹುದು. 262 ಕಿಮೀ ಉದ್ದದ ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರೂ.17,000 ಕೋಟಿ ವ್ಯಯಿಸಿ ಅಭಿವೃದ್ಧಿಪಡಿಸುತ್ತಿದೆ ಪ್ರಸ್ತುತ 4 ಪಥದ ರಸ್ತೆಯನ್ನು ನಿರ್ಮಿಸುತ್ತಿದ್ದು, ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ಆಂಧ್ರ ಪ್ರದೇಶದ ಚಿತ್ತೂರು, ತಮಿಳುನಾಡಿನ ರಾಣಿಪೇಟೆ ಮತ್ತು ಶ್ರೀಪೆರಂಬದೂರಿನ ಮೂಲಕ ಹಾದುಹೊಗಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು ಹಾಗೂ ಪುಣೆ ಮಧ್ಯೆ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೂ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಸುಮಾರು 700 ಕಿಲೋಮೀಟರ್ ಉದ್ದವಿರುವ ಈ ಹೆದ್ದಾರಿಯು ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಈ ಹೆದ್ದಾರಿಯನ್ನು ಮಾಡಲು ರೂ.50,000 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದ್ದು, 2028ರಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications