ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ: ನಾಳೆಯಿಂದ ಶ್ರೀನಿವಾಸ ಸೇತು ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಾಯೋಗಿಕ ಸಂಚಾರ, 10 ನಿಮಿಷ ಸಾಕು!
ದಕ್ಷಿಣ ಭಾರತದ ಪ್ರಮುಖ ಪುಣ್ಯ ಕ್ಷೇತ್ರವಾದ ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಒಳ್ಳೆಸುದ್ದಿ. ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (Srinivasa Sethu elevated expressway)ಯಲ್ಲಿ ನಾಳೆಯಿಂದ (ಸೆ.12) ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ, ಶ್ರೀನಿವಾಸ ಸೇತು ಎಕ್ಸ್‌ಪ್ರೆಸ್‌ವೇಯ ಕೊನೆಯ ಹಂತದ ಕಾಮಗಾರಿಯನ್ನು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ (ಇಒ) ಎ.ವಿ.ಧರ್ಮಾ ರೆಡ್ಡಿ ಅವರು ವೀಕ್ಷಿಸಿದ್ದರು. ಈ ವೇಳೆ, ಕೊಂಚ ಮಟ್ಟಿಗೆ ಬಾಕಿ ಉಳಿದಿರುವ ತಡೆಗೋಡೆ, ರಸ್ತೆಯ ಆಧುನೀಕರಣ, ಡಿವೈಡರ್, ಫುಟ್‌ಪಾತ್, ಪೇಂಟಿಂಗ್ ಹಾಗೂ ಬಿಟಿ ಟಾಪಿಂಗ್ ಕಾಮಗಾರಿಯನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು, ಯಾತ್ರಿಕರು ಹಾಗೂ ಸ್ಥಳೀಯರಿಗೆ ಸುಗಮ ಸಂಚಾರ ಒದಗಿಸಲು ಶ್ರೀನಿವಾಸ ಸೇತು ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯನ್ನು ಸೆಪ್ಟೆಂಬರ್ 18ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ರಸ್ತೆ ನಿರ್ಮಾಣಕ್ಕೆ ರೂ.684 ಕೋಟಿ ವ್ಯಯಿಸಲಾಗಿದೆ ಎಂದು ವರದಿಯಾಗಿದೆ. ಇದರಿಂದ ತಿರುಪತಿ ನಗರದಲ್ಲಿ ಟ್ರಾಫಿಕ್ ಕಿರಿ - ಕಿರಿ ಸಮಸ್ಯೆ ತಪ್ಪುತ್ತದೆ.
ಈ ಮೊತ್ತದಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿ ಶೇಕಡ 67% ಹಾಗೂ ತಿರುಪತಿ ಸ್ಮಾರ್ಟ್ ಸಿಟಿ ಕಾರ್ಪೊರೇಷನ್ ಲಿಮಿಟೆಡ್ ಶೇಕಡ 33% ಹಣವನ್ನು ಖರ್ಚು ಮಾಡಿದೆ. ಪ್ರತಿದಿನ ಒಂದೂವರೆ ಲಕ್ಷ ಭಕ್ತರು ಭೇಟಿ ನೀಡುವ ತಿರುಪತಿಯಲ್ಲಿ ಸಂಚಾರ ದಟ್ಟಣೆ (Traffic jam) ಎಂಬುದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತ್ತು.
ತನಪಲ್ಲಿ ಕ್ರಾಸ್ ಹಾಗೂ ನಂದಿ ಸರ್ಕಲ್ ನಡುವೆ ತಿರುಮಲ ಬೆಟ್ಟಕ್ಕೆ ಹೋಗುವ 7 ಕಿಲೋಮೀಟರ್ ದಾರಿಯನ್ನು ಕ್ರಮಿಸಲು ಸ್ಥಳೀಯರು ಹಾಗೂ ಆಂಧ್ರ ಸೇರಿದಂತೆ ಇತರೆ ರಾಜ್ಯಗಳಿಂದ ತಿಮಪ್ಪನ ದರ್ಶನಕ್ಕೆ ಬರುತ್ತಿದ್ದ ಭಕ್ತರು ಹರಸಾಹನ ಪಡುತ್ತಿದ್ದರು. ಈ ರಸ್ತೆಯಲ್ಲಿ ಹೋಗಲು ಏನಿಲ್ಲ ಅಂದರೂ 40 ನಿಮಿಷ ಬೇಕಾಗುತ್ತಿತ್ತು. ಶ್ರೀನಿವಾಸ ಸೇತು ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಮೇಲ್ಸೇತುವೆ) ನಿರ್ಮಾಣದಿಂದ 10 ನಿಮಿಷದಲ್ಲಿ ಈ ಅಂತರವನ್ನು ಮುಟ್ಟಬಹುದು.
ಬೇಸಿಗೆಯಲ್ಲಿ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ತಿರುಪತಿಗೆ ಭೇಟಿ ನೀಡುತ್ತಾರೆ. ಈ ಕಾರಣಕ್ಕೆ ಮೇ.15ರೊಳಗೆ ಫ್ಲೈ ಓವರ್ (ಶ್ರೀನಿವಾಸ ಸೇತು) ಕಾಮಗಾರಿ ಮುಗಿಸಬೇಕೆಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಧರ್ಮಾ ರೆಡ್ಡಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಹಲವು ಕಾರಣಗಳಿಗೆ ವಿಳಂಬವಾಗಿತ್ತು.
ಅಂತಿಮವಾಗಿ, ಈ ಶ್ರೀನಿವಾಸ ಸೇತು ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೆ ಸಿದ್ದವಾಗಿರುವುದು ಸ್ಥಳೀಯರು ಹಾಗೂ ತಿಮ್ಮಪ್ಪನ ಭಕ್ತರಿಗೆ ಖುಷಿ ತಂದಿದೆ. ಇಷ್ಟುದಿನ ಕೆಲವೇ ಕಿಲೋಮೀಟರ್ ಕ್ರಮಸಲು ಆಗುತ್ತಿದ್ದ ಸಮಯ 10 ನಿಮಿಷಕ್ಕೆ ಕಡಿಮೆಯಾಗುವುದರಿಂದ ಭಕ್ತರು ಬೇಗನೇ ದೇಗುಲಕ್ಕೆ ಹೋಗಬಹುದು. ಇನ್ನು, ಸೆ.22 ರಂದು ತಿರುಮಲದಲ್ಲಿ ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ಜರುಗುವುದರಿಂದ ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications