ಮೈಕ್ರೋಸಾಫ್ಟ್‌ನಿಂದ ಫುಟ್ಬಾಲ್ ಮೈದಾನದಷ್ಟು ಬೃಹತ್ತಾದ ವಿಮಾನ ನಿರ್ಮಾಣ!
ಅಮೆರಿಕ ಕೇಂದ್ರೀಕೃತವಾಗಿ ಕಾರ್ಯಾಚರಿಸುತ್ತಿರುವ ವಿಶ್ವದ ಅತಿ ದೊಡ್ಡ ಬಹುರಾಷ್ಟ್ರೀಯ ಗಣಕಯಂತ್ರ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ಉಪ ಸಂಸ್ಥಾಪಕ ಪಾಲ್ ಅಲೆನ್ ಅವರು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಫುಟ್ಬಾಲ್ ಮೈದಾನದಷ್ಟು ಬೃಹತ್ತಾದ ವಿಮಾನ ನಿರ್ಮಾಣದ ಸಾಹಸಕ್ಕೆ ಮುಂದಾಗಿದ್ದಾರೆ.
ವಿಶ್ವದ ಅತಿ ದೊಡ್ಡ ವಿಮಾನ ಎಂದೆನಿಸಿಕೊಳ್ಳಲಿರುವ ನೂತನ 'ಸ್ಟ್ರಾಟೊಲಾಂಚ್' (Stratolaunch) ಈಗಾಗಲೇ ಮಾಧ್ಯಮಗಳ ಗಮನಕ್ಕೆ ಪಾತ್ರವಾಗಿದ್ದು, ಶೇಕಡಾ 75ರಷ್ಟು ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆ.

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್, ಜಗತ್ತಿನಲ್ಲಿ ನಿರ್ಮಾಣವಾಗುತ್ತಿರುವ ಅತಿ ದೊಡ್ಡ ವಿಮಾನ ಸ್ಟ್ರಾಟೊಲಾಂಚ್ ನ ಮುಖ್ಯ ಸೂತ್ರಧಾರಿ ಎನಿಸಿಕೊಂಡಿದ್ದಾರೆ.

ಫುಟ್ಬಾಲ್ ಮೈದಾನದಷ್ಟು ಅಂದರೆ 385 ಅಡಿ ಉದ್ದವಾದ (117 ಮೀಟರ್) ರೆಕ್ಕೆಯನ್ನು ಹೊಂದಿರುವ ಈ ವಿಮಾನದಲ್ಲಿ 28 ಚಕ್ರಗಳನ್ನು ಜೋಡಣೆ ಮಾಡಲಾಗಿದೆ.

ಆರು 737 ಎಂಜಿನ್ ಗಳಿಂದ ನಿಯಂತ್ರಿಸಲ್ಪಡುವ ಸ್ಟ್ರಾಟೊಲಾಂಚ್ ಆರಂಭದಲ್ಲಿ 6124 ಕೆ.ಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುತ್ತದೆ.

ಗಂಟೆಗೆ ಸರಿ ಸುಮಾರು 850 ಕೀ.ಮೀ. ವೇಗದಲ್ಲಿ ಸಂಚರಿಸಲಿರುವ ಸ್ಟ್ರಾಟೊಲಾಂಚ್ ಒಟ್ಟಾರೆಯಾಗಿ 5,44,311 ಕೆ.ಜಿ ತೂಕವನ್ನು ಹೊಂದಿರುತ್ತದೆ.

2011ನೇ ಇಸವಿಲಯಲ್ಲಿ 'ಭೂಮಿಯ ಮಹತ್ವಾಕಾಂಕ್ಷೆ ಮೀರಿ' ಎಂಬ ಗುರಿಯನ್ನಿಟ್ಟುಕೊಂಡು ವಿಮಾನದ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡಲಾಗಿತ್ತು.

35,000 ಅಡಿ ಎತ್ತರದ ವರೆಗೆ ರಾಕೆಟ್ ಗಳನ್ನು ಹೊತ್ತೊಯ್ದು ಅಲ್ಲಿಂದ ಬಳಿಕ ಕಕ್ಷೆಗೆ ಬಿಡುವ ಯೋಜನೆಯನ್ನು ಈ ವಿಮಾನ ಹೊಂದಿದೆ. ತನ್ಮೂಲಕ ಕಡಿಮೆ ಇಂಧನ ಬಳಕೆ ಮಾಡುವ ಮೂಲಕ ಭಾರಿ ವೆಚ್ಚ ಕಡಿತವಾಗಲಿದೆ.

ಅಂತಹ ರಾಕೆಟ್ ಉಡಾವಣೆಗಳು ದಿನಚರಿಯಾಗುತ್ತಿರುವ ಈ ವೇಳೆಯಲ್ಲಿ ನಾವೀನ್ಯತೆಯ ಆವೇಗವನ್ನು ಊಹನೆಗಿಂತಲೂ ಮಿಗಿಲಾಗಿರಲಿದೆ ಎಂದು ಅಲೆನ್ ಅಭಿಪ್ರಾಯಪಡುತ್ತಾರೆ.

ಅವುಗಳು ಸುಲಭವಾಗಿ ಲಭ್ಯವಾಗುವಾಗ, ಹೆಚ್ಚು ಅನುಕೂಲಕರ ಹಾಗೂ ಕೈಗೆಟುಗುವುದರಿಂದ ದೂರದೃಷ್ಟಿಯನ್ನು ಸಕ್ರಿಯಗೊಳಿಸಲು ಸಾಧ್ಯ ಎಂದು ವಿವರಿಸಿದ್ದಾರೆ.

ಹಾಗಿದ್ದರೂ ವಿಮಾನ ಬಿಡುಗಡೆಗೆ ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಇದಕ್ಕೂ ಮೊದಲು ಪ್ರಾಯೋಗಿಕ ಸಂಚಾರ ಪರೀಕ್ಷೆಗೊಳಪಡಲಿದೆ.


Click it and Unblock the Notifications








