ಗಂಟೆಗೆ 200 ಕೀ.ಮೀ. ವೇಗದಲ್ಲಿ ಓಡುವ ಸ್ಪೇನ್ ರೈಲು ಭಾರತಕ್ಕೆ
ದೇಶದ ಅತಿ ವೇಗದ ಸೆಮಿ ಬುಲೆಟ್ ರೈಲು 'ಗತಿಮಾನ್' ಯಶಸ್ವಿ ಪಯಣದ ಬಳಿಕ ಮಗದೊಂದು ಮೈಲುಗಲ್ಲನ್ನಿಡಲು ಸಜ್ಜಾಗುತ್ತಿರುವ ಭಾರತೀಯ ರೈಲ್ವೆ, ಗಂಟೆಗೆ 200 ಕೀ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ಓಡುವ ರೈಲು ಯೋಜನೆ ಜಾರಿಗೊಳಿಸಲು ಮುಂದಾಗುತ್ತಿದೆ.
Also Read: ಚಾಲಕರಹಿತ ಕಾರಿನ ಬಳಿಕ ಬರುತ್ತಿದೆ ಹೈಟೆಕ್ ಡ್ರೈವರ್ ಲೆಸ್ ರೈಲು
ಸ್ಪೇನ್ ತಳಹದಿಯ ಟಾಲ್ಗೊ ಸಂಸ್ಥೆಯು ಈ ಅತಿ ವೇಗದ ರೈಲನ್ನು ನಿರ್ಮಿಸಲಿದ್ದು, 2016 ಜೂನ್ ವೇಳೆಯಾಗುವಾಗ ಪ್ರಯೋಗಿಕ ಸಂಚಾರ ಪರೀಕ್ಷೆಯು ನೇರವೇರಲಿದೆ.

ಇದರಂಗವಾಗಿ ಮಾರ್ಚ್ 27ರಂದು ಬೃಹತ್ ಹಡಗಿನ ಮುಖಾಂತರ ಒಂಬತ್ತರಷ್ಟು ಟಾಲ್ಗೊ ರೈಲುಗಳನ್ನು ಭಾರತಕ್ಕೆ ರವಾನಿಸಲಾಗಿದೆ. ಇದು ಎಪ್ರಿಲ್ 21ರ ವೇಳೆಯಾಗುವಾಗ ಮುಂಬೈ ಬಂದರನ್ನು ತಲುಪಲಿದೆ.

ಇಲ್ಲಿ ಗಮನಾರ್ಹ ಅಂಶವೆಂದರೆ ಭಾರತೀಯ ರೈಲು ಜಾಲವನ್ನು ಆಧುನಿಕರಿಸುವುದರಲ್ಲಿ ವಿಶೇಷ ಆಸಕ್ತಿ ವ್ಯಕ್ತಪಡಿಸಿರುವ ಸ್ಪೇನ್ ಸಂಸ್ಥೆಯು ಈ ಹಗುರ ಭಾರದ ಹಾಗೂ ವೇಗದ ರೈಲುಗಳ ಟೆಸ್ಟಿಂಗ್ ಕಾರ್ಯವನ್ನು ಸಂಪೂರ್ಣ ಉಚಿತವಾಗಿ ಹಮ್ಮಿಕೊಳ್ಳುವುದಾಗಿ ಭರವಸೆಯನ್ನಿತ್ತಿದೆ.

ಮುಂಬೈ ತಲುಪಲಿರುವ ಟಾಲ್ಗೊ ರೈಲುಗಳು ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಇಜ್ಜತ್ ನಗರದ ಡಿಪೊಗೆ ಸ್ಥಳಾಂತರಿಸಲಾಗುವುದು. ಇದರ ವೆಚ್ಚವನ್ನು ಸ್ಪೇನ್ ನ ಟಾಲ್ಗೊ ಸಂಸ್ಥೆಯು ಭರಿಸಲಿದೆ. ಬಳಿಕ ಜೂನ್ ವೇಳೆಯಾಗುವಾಗ ಪ್ರಯೋಗಿಕ ಸಂಚಾರ ಪರೀಕ್ಷೆ ನಡೆಯಲಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು, "ಮೊದಲ ಹಂತವಾಗಿ ಬರೈಲ್ಲಿ ಮತ್ತು ಮೊರದಾಬಾದ್ ನಡುವೆ 115 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗುವುದು. ಬಳಿಕ ಪಲ್ವಾಲ್ ಮತ್ತು ಮಥುರಾ ಹಾದಿಯಲ್ಲಿ ಗಂಟೆಗೆ 180 ಕೀ.ಮೀ. ವೇಗದಲ್ಲಿ ಪ್ರಯೋಗಿಕ ಸಂಚಾರ ನಡೆಯಲಿದೆ" ಎಂದಿದ್ದಾರೆ.

ಇದಾದ ಬಳಿಕ ದೇಶದ ಎರಡು ಪ್ರಮುಖ ನಗರಗಳಾದ ನವದೆಹಲಿ ಮತ್ತು ಮುಂಬೈ ನಡುವೆ 200 ಕೀ.ಮೀ. ವೇಗದಲ್ಲಿ ಸಂಚಾರ ಪರೀಕ್ಷೆ ನಡೆಯಲಿದೆ.

ರೈಲ್ವೆ ಮೂಲಗಳ ಪ್ರಕಾರ, ಈಗಿರುವ ಮೂಲ ಸೌಕರ್ಯದಲ್ಲಿ ಹೆಚ್ಚಿನ ಬದಲಾವಣೆಯಿಲ್ಲದೆಯೇ ಟಾಲ್ಗೊ ರೈಲುಗಳು ಗಂಟೆಗೆ 160ರಿಂದ 200 ಕೀ.ಮೀ. ವೇಗದಲ್ಲಿ ಓಡಾಡುವ ಸಾಮರ್ಥ್ಯ ಹೊಂದಿರುತ್ತದೆ.

ಇದರಿಂದಾಗಿ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆಯಾಗಲಿದೆ. ಇನ್ನೊಂದೆಡೆ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಗತಿಮಾನ್ ಎಕ್ಸ್ ಪ್ರೆಸ್ ಗಾಗಿ ಟ್ರ್ಯಾಕ್ ಗಳನ್ನು ಆಧುನಿಕರಣಗೊಳಿಸಿತ್ತಲ್ಲದೆ ಸಿಗ್ನಲ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿತ್ತು.

ಇವೆಲ್ಲದರ ಹೊರತಾಗಿ ಟಾಲ್ಗೊ ಹಗುರ ಭಾರದ ರೈಲುಗಳಿಗೆ ಶೇಕಡಾ 30ರಷ್ಟು ಕಡಿಮೆ ವಿದ್ಯುತ್ ವ್ಯಯವಾಗಲಿದೆ. ಇದು ಕಡಿಮೆ ವಿದ್ಯುತ್ ಬಳಕೆ ಮಾಡಲು ಭಾರತೀಯ ರೈಲ್ವೆಗೆ ನೆರವಾಗಲಿದೆ.

ಗತಿಮಾನ್ ಎಕ್ಸ್‌ಪ್ರೆಸ್ ಸೆಮಿ ಬುಲೆಟ್ ರೈಲಿನ ವಿಶಿಷ್ಟತೆಗಳೇನು ?


Click it and Unblock the Notifications








