ಗೂಗಲ್ ನಲ್ಲಿ ಟಾಪ್ 10 ಟ್ರೆಂಡಿಂಗ್ ಕಾರು ಸಂಸ್ಥೆಗಳು
ಈಗಿನ ಕಾಲದಲ್ಲಿ 'ಸರ್ಚ್ ಇಂಜಿನ್' ದೈತ್ಯ ಗೂಗಲ್ ಸಹಾಯವಿಲ್ಲದೆ ಯಾವುದೇ ಕಾರ್ಯ ನಡೆಯದು. ನಮಗೆ ಯಾವುದೇ ರೀತಿಯ ಮಾಹಿತಿ ಬೇಕಾದರೂ ಕ್ಷಣಾರ್ಧದಲ್ಲಿ ಗೂಗಲ್ ಸರ್ಚ್ ಬಾಕ್ಸ್ ನಲ್ಲಿ ನಮೂದಿಸಿದರೆ ಉತ್ತರ ಕಣ್ಮುಂದೆ ತೆರೆದುಕೊಳ್ಳಲಿದೆ.
ಹಾಗೆ ಯೋಚನೆ ಮಾಡಿದಾಗ ವಾಹನೋದ್ಯಮ ಸಹ ಪೂರ್ಣವಾಗಿಯೂ ಗೂಗಲ್ ಅನ್ನು ನೆಚ್ಚಿಕೊಂಡಿದೆ ಅಂದರೆ ತಪ್ಪಾಗಲಾರದು. ಈಗ 2014ನೇ ಸಾಲಿನಲ್ಲಿ ಅತಿ ಹೆಚ್ಚು ಶೋಧಿತ ಟಾಪ್ 10 ಕಾರು ತಯಾರಿಕ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

10. ಟೆಸ್ಲಾ ಮೋಟಾರ್ಸ್
ಅಮೆರಿಕ ಮೂಲದ ಟೆಸ್ಲಾ ಮೋಟಾರ್ಸ್ ವಿದ್ಯುತ್ ಚಾಲಿತ ಕಾರುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. 2003ರಲ್ಲಿ ಮಾರ್ಟಿನ್ ಎಬೆರ್ ಹಾರ್ಡ್, ಎಲನ್ ಮಸ್ಕ್, ಮಾರ್ಕ್ ಟಾರ್ಪೆನಿಂಗ್, ಜೆಬಿ ಸ್ಟ್ರಾಬೆಲ್ ಮತ್ತು ಇಯಾನ್ ರೈಟ್ ಎಂಬವರಿಂದ ಸ್ಥಾಪಿತವಾಗಿರುವ ಪ್ರಸ್ತುತ ಸಂಸ್ಥೆಯು ಟೆಸ್ಲಾ ರೋಡ್ ಸ್ಟರ್ ಮಾದರಿಯ ಬಿಡುಗಡೆ ಬೆನ್ನಲ್ಲೇ ಜಾಗತಿಕವಾಗಿ ಗಮನ ಸೆಳೆದಿತ್ತು. ಇದು ಜಗತ್ತಿನ ಮೊದಲ ಎಲೆಕ್ಟ್ರಿಕ್ ಕ್ರೀಡಾ ಕಾರಾಗಿದೆ.

09. ಬಿಎಂಡಬ್ಲ್ಯು
ಜರ್ಮನಿಯ ಮೂಲದ ಪ್ರೀಮಿಯಂ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, 'ಬಿಗ್ ತ್ರಿ'ಗಳ ಪೈಕಿ ಒಂದಾಗಿದೆ (ಮರ್ಸಿಡಿಸ್ ಬೆಂಝ್ ಹಾಗೂ ಆಡಿ ಸಾಲಿನಲ್ಲಿ). ಜರ್ಮನಿಯ ಮ್ಯೂನಿಚ್ ನಲ್ಲಿ ಪ್ರದಾನ ಕಚೇರಿ ಹೊಂದಿರುವ ಬಿಎಂಡಬ್ಲ್ಯು ಇಂಡಿಯಾದ ಪ್ರಮುಖ ಪ್ರಚಾರ ರಾಯಭಾರಿ ಕ್ರಿಕೆಟ್ ನ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಾಗಿದ್ದಾರೆ. ಬಿಎಂಡಬ್ಲ್ಯು ಸಂಸ್ಥೆಯನ್ನು 1916ನೇ ಇಸವಿಯಲ್ಲಿ ಫ್ರಾನ್ಸ್ ಜೋಸ್ ಪಾಪ್, ಕಾರ್ಲ್ ರಾಪ್ ಮತ್ತು ಕೆಮಿಲ್ಲೊ ಕಾಸ್ಟಿಗ್ ಲಿಯೊನಿ ಎಂಬವರು ಸೇರಿ ಸ್ಥಾಪಿಸಿದ್ದರು.

08. ನಿಸ್ಸಾನ್
ಸದಾ ನಾವೀನ್ಯತೆಯ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ತೊಡಗುವ ಮೂಲಕ ವಾಹನ ಜಗತ್ತಿಗೆ ಏನೋ ಸಾಧನೆ ಮಾಡಿ ತೋರಿಸಬೇಕೆಂಬ ಹಂಬಲದಲ್ಲಿರುವ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ಗೂಗಲ್ ನಲ್ಲಿ ಅತಿ ಹೆಚ್ಚು ಸಂಶೋಧಿತ ವಾಹನ ತಯಾರಕರ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 1933ನೇ ಇಸವಿಯಲ್ಲಿ ಮಸುಜಿರೊ ಹಶಿಮೊಟೊ, ಕೆಂಜಿರೊ ಡೆನ್, ರೊಕುರೊ ಆಯೊಮಾ, ಮೆಟರೊ ಟಕೆಚಿ, ಯೋಶಿಕೆ ಐಕಾವಾ ಮತ್ತ ವಿಲಿಯಮ್ ಆರ್ ಎಂಬವರಿಂದ ಸ್ಥಾಪಿತವಾಗಿರುವ ನಿಸ್ಸಾನ್ ಸಂಸ್ಥೆಯ ಪ್ರಧಾನ ಕಚೇರಿ ಯೋಕಹಮಾದಲ್ಲಿದೆ.

07. ಹೋಂಡಾ
ಜಪಾನ್ ನ ಮಗದೊಂದು ವಾಹನ ತಯಾರಿಕ ಸಂಸ್ಥೆ ಹೋಂಡಾ ಪ್ರಧಾನ ಕಚೇರಿ ಮಿನಟೊದಲ್ಲಿದೆ. 1946ರಲ್ಲಿ ಸೊಯ್ ಚಿರೊ ಹೋಂಡಾ, ಟಕೆಯೊ ಫ್ಯೂಜಿಸಾವಾ ಎಂಬವರು ಸಂಸ್ಥೆಯನ್ನು ಸ್ಥಾಪಿಸಿದ್ದರು. ಆಂತರಿಕ ದಹನಕಾರಿ ಎಂಜಿನ್ ನಿರ್ಮಾಣದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಹೋಂಡಾ ಸಂಸ್ಥೆಯು ಬೈಕ್ ನಿರ್ಮಾಣದಲ್ಲೂ ಹೆಸರು ಮಾಡಿದೆ.

06. ಸುಬರು
ಜಪಾನ್ ನ ಸಾರಿಗೆ ಸಂಸ್ಥೆ ಫ್ಯೂಜಿ ಹೆವಿ ಇಂಡಸ್ಟ್ರೀಸ್ (ಎಫ್ ಎಚ್ ಐ) ಉಪ ವಿಭಾಗವಾಗಿರುವ ಸುಬರು ಕೇಂದ್ರ ಕಚೇರಿ ಟೊಕಿಯೊದಲ್ಲಿದೆ. ವಿನ್ಯಾಸ ನಾವೀನ್ಯತೆಗೆ ಕಾರಣವಾಗಿರುವ ಸುಬರು ಮೊದಲ ಬಾರಿಗೆ ಫುಲ್ ಟೈಮ್ ಆಲ್ ವೀಲ್ ಡ್ರೈವ್ ಸಿಸ್ಟಂ ಬಳಕೆ ಮಾಡಿದ ಸಂಸ್ಥೆಯಾಗಿದೆ. ಅಲ್ಲದೆ ತನ್ನ ಬಾಕ್ಸರ್ ಎಂಜಿನ್ ಗಾಗಿ ಸುಬರು ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಂಡಿದೆ.

05. ಜನರಲ್ ಮೋಟಾರ್ಸ್
ಅಮೆರಿಕ ಮೂಲದ ಜನರಲ್ ಮೋಟಾರ್ಸ್ 37 ರಾಷ್ಟ್ರಗಳಲ್ಲಾಗಿ 13 ವಿಭಿನ್ನ ಬ್ರಾಂಡ್ ಗಳನ್ನು ಮಾರಾಟ ಮಾಡುತ್ತಿದೆ. 1908ರಲ್ಲಿ ಡೆಟ್ರಾಯ್ಟ್, ಮಿಚಿಗನ್ ತಳಹದಿಯ ಈ ಸಂಸ್ಥೆಯನ್ನು ವಿಲಿಯಮ್ ಸಿ ಡುರಂಟ್, ಚಾರ್ಲ್ಸ್ ಸ್ಟುವರ್ಟ್ ಮಾಟ್ ಮತ್ತು ಫೆಡೆರಿಕ್ ಎಲ್ ಸ್ಮಿತ್ ಸ್ಥಾಪಿಸಿದ್ದರು. ಭಾರತದಲ್ಲಿ ಜನರಲ್ ಮೋಟಾರ್ಸ್ ಜನಪ್ರಿಯ ಮಾದರಿಯಾಗಿರುವ ಷೆವರ್ಲೆ ಕಾರುಗಳು ಮಾರಾಟದಲ್ಲಿದೆ.

04. ಟೊಯೊಟಾ
ಜಪಾನ್ ಮೂಲದ ಮಗದೊಂದು ದೈತ್ಯ ವಾಹನ ಸಂಸ್ಥೆಯಾಗಿರುವ ಟೊಯೊಟಾ ಮೊದಲ ಬಾರಿಗೆ ವರ್ಷವೊಂದರಲ್ಲಿ 10 ಲಕ್ಷ ವಾಹನಗಳನ್ನು ನಿರ್ಮಿಸಿದ ಜಗತ್ತಿನ ಪ್ರಪ್ರಥಮ ಸಂಸ್ಥೆಯೆನಿಸಿಕೊಂಡಿದೆ. ನಿರ್ಮಾಣದಲ್ಲಿ ಜಗತ್ತಿನ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಎನಿಸಿಕೊಂಡಿರುವ ಟೊಯೊಟಾ ಸಂಸ್ಥೆಯನ್ನು 1937ರಲ್ಲಿ ಕಿಚಿರೊ ಟೊಯೊಡಾ ಸ್ಥಾಪಿಸಿದ್ದರು. ಟೊಯೊಟಾದ ಪ್ರಯಸ್ ಬೆಸ್ಟ್ ಸೆಲ್ಲಿಂಗ್ ಹೈಬ್ರಿಡ್ ಕಾರಾಗಿದೆ.

03. ಡೊಡ್ಜ್
ಮಿಚಿಗನ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಸ್ತುತ ಸಂಸ್ಥೆಯನ್ನು 1900ರಲ್ಲಿ ಡೊಡ್ಜ್ ಬ್ರದರ್ಸ್ ಸ್ಥಾಪಿಸಿದ್ದರು. ಅವರೇ ಹೋರಾಸ್ ಎಲ್ಗಿನ್ ಮತ್ತು ಜಾನ್ ಫ್ರಾನ್ಸಿಸ್. ಪ್ರಸ್ತುತ ಡೊಡ್ಜ್ ಸಂಸ್ಥಯೀಗ ಫಿಯೆಟ್-ಕ್ರೈಸ್ಲರ್ ಉಪವಿಭಾಗವಾಗಿದೆ. ಆಧುನಿಕ ಮಸಲರ್ ಕಾರಿನ ನಿರ್ಮಾಣಕ್ಕೆ ಡೊಡ್ಜ್ ಪುನರುಜ್ಜೀವ ನೀಡಿತ್ತು.

02. ಜೀಪ್
ಅಮೆರಿಕದ ಐಕಾನಿಕ್ ಜೀಪ್ ಸಂಸ್ಥೆಯು 1941ನೇ ಇಸವಿಯಲ್ಲಿ ಪಾದಾರ್ಪಣೆಯಾಗಿತ್ತು. ಪ್ರಾರಂಭದಲ್ಲಿ ಇದರ ಸೂತ್ರಧಾರಿಯಾಗಿರುವ ವಿಲ್ಲಿ ಜೀಪ್ ಸ್ಟರ್, ಎರಡನೇ ಮಹಾಯುದ್ಧ IIದಲ್ಲಿ ಅಮೆರಿಕ ಸೈನ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ವಾಹನಗಳನ್ನು ನಿರ್ಮಿಸುತ್ತಿದ್ದರು. ಬಳಿಕ 1945ರಲ್ಲಿ ಮೊದಲ ನಾಗರಿಕ ಜೀಪ್ ಮಾದರಿಯು ಪರಿಚಯಿಸಲಾಗಿತ್ತು. ಅಮೆರಿಕದ ಮೋಟಾರ್ ಕಾರ್ಪೋರೇಷನ್ ಅಧೀನತೆಯಲ್ಲಿರುವ ಜೀಪ್ ಸಂಸ್ಥೆಯನ್ನು 1987ರಲ್ಲಿ ಕ್ಲೈಸ್ಲರ್ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ತದಾ ಬಳಿಕ ಫ್ಲ್ಯಾಗ್ ಶಿಪ್ ಮಾದರಿ ಜೀಪ್ ವ್ರ್ಯಾಂಗ್ಲರ್ ಉಗಮವಾಗಿತ್ತು.

01. ಫೋರ್ಡ್
ಅಮೆರಿಕದ ಮಗದೊಂದು ಜನಪ್ರಿಯ ಸಂಸ್ಥೆಯಾಗಿರುವ ಫೋರ್ಡ್, ಅಂತರ್ಜಾಲ ದೈತ್ಯ ಗೂಗಲ್ ನಲ್ಲಿ ಅತಿ ಹೆಚ್ಚು ಶೋಧಿತ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 1903ನೇ ಇಸವಿಯಲ್ಲಿ ಹೆನ್ರಿ ಫೋರ್ಡ್ ಎಂಬವರಿಂದ ಸ್ಥಾಪಿತವಾಗಿರುವ ಸಂಸ್ಥೆಯು ಮಸ್ತಾಂಗ್ ಗಳಂತಹ ಐಕಾನಿಕ್ ಮಾದರಿಗಳನ್ನು ನಿರ್ಮಿಸಿದೆ.


Click it and Unblock the Notifications








