ಚಾಲಕರೇ, ದೇಶದ ರಸ್ತೆಯಲ್ಲಿ ಡ್ರೈವಿಂಗ್ ಮಾಡುವಾಗ ಹುಷಾರ್..!
ಭಾರತೀಯ ರಸ್ತೆಗಳಲ್ಲಿ ಗಾಡಿ ಓಡಿಸುವುದೆಂದರೆ ದೊಡ್ಡ ಸಾಹಸ ಮಾಡಿದ್ದಕ್ಕೆ ಸಮಾನ. ಒಂದೆಡೆ ಗುಂಡಿಗಳಿಂದ ತುಂಬಿದ ರಸ್ತೆ ಇನ್ನೊಂದೆಡೆ ಅತಿ ಆತುರದ ಚಾಲಕರ ಭಯ ಹೀಗೆ ಹಲವಾರು ವಿಚಾರಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ರಸ್ತೆ ನಿಯಮಗಳನ್ನು ಗಾಳಿಗೆ ತೂರುವಲ್ಲಿ ನಮ್ಮ ಭಾರತೀಯ ಚಾಲಕರು ಎತ್ತಿದ ಕೈ. ಹೀಗಾಗಿ ಅಪಘಾತ ಪ್ರಮಾಣದಲ್ಲೂ ನಿರಂತರ ಏರಿಕೆಯಾಗುತ್ತಲೇ ಇದೆ. ಕಾನೂನು ಪಾಲಕರು ನಿಯಮವನ್ನು ಎಷ್ಟೇ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶ್ರಮಿಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

01. ದ್ವಿಚಕ್ರ ವಾಹನ
ಟ್ರಾಫಿಕ್ ನಲ್ಲಿ ನಿಧಾನವಾಗಿ ಹೋಗುತ್ತಿರಬೇಕಾದರೆ ಲೇನ್ ತಪ್ಪಿಸಿಕೊಂಡು ಸರ್ರನೆ ಬರುವ ದ್ವಿಚಕ್ರ ವಾಹನಗಳು ಅತ್ಯಂತ ಅಪಾಯಕಾರೆನಿಯೆನಿಸಿಕೊಂಡಿದೆ. ಇನ್ನು ತೆರೆದ ರಸ್ತೆಗಳಲ್ಲಿ ಸಾಹಸ ನಡೆಸುವ ಅಮಿತವಾದ ಬೈಕ್ ಉತ್ಸಾಹಿಗಳಿಂದ ಯಾವುದೇ ಕ್ಷಣ ಬೇಕಾದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

02. ಒಂದೇ ಬದಿಯಲ್ಲಿ ಸಂಚಾರ
ಒಂದೇ ಬದಿಯಲ್ಲೂ ಸಂಚರಿಸುವಾಗಲೂ ಅತಿ ಹೆಚ್ಚು ಅಪಘಾತಗಳು ಘಟಿಸುತ್ತಿದೆ. ಇಲ್ಲೂ ನಿಯಮ ಗಾಳಿಗೆ ತೂರಿ ಲೇನ್ ತಪ್ಪಿಸಿ ತೆರಳುವ ವಾಹನಗಳಿಂದಾಗಿ ಅಪಘಾತಗಳು ಹೆಚ್ಚಾಗಿ ನಡೆಯುತ್ತದೆ.

03. ಹೆಡ್ ಲೈಟ್ ಇಲ್ಲದ ಸಂಚಾರ
ಬಹುಶ: ಹೆಡ್ ಲೈಟ್ ಇಲ್ಲದ ಸಂಚಾರ ಅತಿ ಹೆಚ್ಚು ಅನಾಹುತಗಳನ್ನುಂಟು ಮಾಡಲಿದೆ. ಕಗ್ಗತ್ತಿನಲ್ಲಿ ಹೆಡ್ ಲೈಟ್ ಇಲ್ಲದೇ ಸಂಚರಿಸುವ ಮೂರ್ಖ ವಾಹನ ಸವಾರರ ದಂಡೇ ನಮ್ಮ ಸಮಾಜದಲ್ಲಿದೆ. ಇದರಿಂದಾಗಿ ರಾತ್ರಿ ವೇಳೆಯಲ್ಲೂ ಅತ್ಯಂತ ಜಾಗರೂಕತೆಯಿಂದ ಸಂಚರಿಸಬೇಕಾಗುತ್ತದೆ.

04. ಮಕ್ಕಳಾಟ
ಮಕ್ಕಳಿಗೆ ನಿಯಮದ ಬಗ್ಗೆ ಅರಿವು ಇರುವುದಿಲ್ಲ. ಬುದ್ದಿವಂತರಾದ ಹೆತ್ತವರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪರಿಣಾಮ ರಸ್ತೆಯಲ್ಲಿ ಅನಿರೀಕ್ಷಿತವಾಗಿ ರಸ್ತೆ ದಾಟಲು ಬರುವ ಮಕ್ಕಳು ಅಪಾಯಕ್ಕೆ ಸಿಲುಕುತ್ತಾರೆ. ಇದು ಸಹ ಅಪಘಾತ ಪ್ರಮಾಣವನ್ನು ಹೆಚ್ಚಿಸುತ್ತದೆ.

05. ಪ್ರಾಣಿಗಳು
ಜಾನುವಾರುಗಳು, ನಾಯಿ, ಬೆಕ್ಕು, ಮಂಗ ಹೀಗೆ ಒಂದಲ್ಲ ಎರಡಲ್ಲ ಪ್ರಾಣಿಗಳ ಸಂಘವೇ ಪದೇ ಪದೇ ರಸ್ತೆಗಳನ್ನು ಆಕ್ರಮಿಸುತ್ತದೆ. ಇನ್ನು ಕೆಲವು ಬಾರಿ ರಸ್ತೆಯಲ್ಲೇ ಬೀಡು ಬಿಟ್ಟಿರುವ ದನ ಕರುಗಳನ್ನು ಕಾಣಬಹುದಾಗಿದೆ. ದ್ವಿಚಕ್ರ ವಾಹನ ಸಂಚಾರದ ವೇಳೆ ಇವುಗಳು ಅತಿ ಹೆಚ್ಚು ಅಪಾಯವನ್ನು ಆಹ್ವಾನಿಸುತ್ತದೆ.

06. ಪಾದಚಾರಿಗಳು
ಯಾವುದೇ ಅಗತ್ಯಗಳಿಗಾಗಿ ತರಾತುರಿಯಲ್ಲಿ ತೆರಳುವ ಪಾದಚಾರಿಗಳು ಸಿಗ್ನಲ್ ಅಥವಾ ವಾಹನಗಳು ಮುಖಾಮುಖಿಯಾಗಿ ಬರುವುದನ್ನು ಲೆಕ್ಕಿಸದೇ ರಸ್ತೆ ದಾಟಲು ಶ್ರಮಿಸುತ್ತಾರೆ.

07. ಟ್ರ್ಯಾಕ್ಟರ್, ಎತ್ತಿನ ಗಾಡಿ
ಅಮಿತ ಭಾರವನ್ನು ಹೊತ್ತುಕೊಂಡು ಬರುವ ಟ್ರ್ಯಾಕ್ಟರ್ ಅಥವಾ ಎತ್ತಿನ ಗಾಡಿಯಿಂದಲೂ ಅಪಘಾತವನ್ನು ಆಹ್ವಾನಿಸುತ್ತದೆ. ರಾತ್ರಿ ವೇಳೆಯಲ್ಲಿ ಬೆಳಕಿನ ಅಭಾವದಿಂದಾಗಿ ಮಹಾ ದುರಂತವನ್ನೇ ಆಹ್ವಾನಿಸುತ್ತದೆ.

08. 'ಯೂ' ಟರ್ನ್
ಹೆದ್ದಾರಿಗಳಲ್ಲಿ ಯೂ ಟರ್ನ್ ತೆಗೆಯಬಾರದೆಂದು ರಸ್ತೆ ಸಂಚಾರ ಚಿಹ್ನೆ ಹಾಕಿದರೂ ಇದನ್ನು ಲೆಕ್ಕಿಸದ ದ್ವಿಚಕ್ರ ವಾಹನ ಸವಾರರು ಸುಗಮ ಸಂಚಾರಕ್ಕೆ ಗೆ ತೊಂದರೆಯನ್ನುಂಟು ಮಾಡುವುದಾದ್ದಲ್ಲದೆ ಭಾರಿ ಅಪಾಯವನ್ನು ಆಹ್ವಾನಿಸುತ್ತಾರೆ.

09. ಜಂಪಿಂಗ್ ಸಿಗ್ನಲ್
ಸಿಗ್ನಲ್ ಜಂಪ್ ನಗರ ಪ್ರದೇಶಗಳಲ್ಲಿ ಅತಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಟ್ರಾಫಿಕ್ ಪೊಲೀಸರನ್ನು ಲೆಕ್ಕಿಸದ ವಾಹನ ಸಂಚಾರರು ಸಿಗ್ನಲ್ ಜಂಪ್ ಮಾಡುವ ಸಾಹಸಕ್ಕೆ ಮುಂದಾಗಿ ತಮ್ಮ ಜೀವವನ್ನೇ ಕಳೆದುಕೊಂಡಿರುವ ಅನೇಕ ಪ್ರಸಂಗಗಳು ಎದುರಾಗಿವೆ.

10. ಮದ್ಯಪಾನ
ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದಲೂ ಅಪಘಾತಗಳು ಹೆಚ್ಚಾಗುವ ಭೀತಿಯಿದೆ. ರಾತ್ರಿ ವೇಳೆಯಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿ ಗಾಡಿ ಚಾಲನೆ ಮಾಡುವ ಇಂತವರಿಂದಾಗಿ ಇತರರಿಗೂ ತೊಂದರೆ ಎದುರಾಗುತ್ತದೆ.


Click it and Unblock the Notifications








