ಅತ್ಯಾಧುನಿಕ ತಂತ್ರಜ್ಞಾನ ಕೈಕೊಟ್ಟರೆ ಹೀಗಿರುತ್ತೆ ನೋಡಿ! ಯಮನಿಗೆ ಎದುರೋದ ಕಾರು!
ಟೆಸ್ಲಾ ಆಟೋಪೈಲಟ್ ಪ್ರಸ್ತುತ ಲಭ್ಯವಿರುವ ಅತ್ಯಂತ ಸುಧಾರಿತ ಸ್ವಾಯತ್ತ ಚಾಲನಾ ತಂತ್ರಜ್ಞಾನ (Advanced autonomous driving technology)ಗಳಲ್ಲಿ ಒಂದಾಗಿದೆ. ಕಾಲ ಕಳೆದಂತೆ ತಂತ್ರಜ್ಞಾನ ಎಷ್ಟೇ ಬೆಳೆದರೂ ಸಂಪೂರ್ಣವಾಗಿ ಅದನ್ನು ನಂಬಲು ಅಸಾಧ್ಯ ಎಂಬುದನ್ನು ಆಗಾಗ್ಗೆ ಕೆಲವೊಂದು ಘಟನೆಗಳು ನೆನಪಿಸುತ್ತವೆ. ಈಗಲು ಅಂಥಹದ್ದೇ ಘಟನೆ ಬೆಳಕಿಗೆ ಬಂದಿದ್ದು, ಟೆಸ್ಲಾ ಆಟೋಪೈಲಟ್ ವಿಫಲವಾಗಿ ಕಾರು ರೈಲು ಹಳಿಗಳ ಮೇಲೆ ಚಲಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಘಟನೆ ನಡೆದಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಏನಿದು ಆಟೋ ಪೈಲೆಟ್: ಟೆಸ್ಲಾ ಆಟೋಪೈಲಟ್ ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಆಗಿದ್ದು, ಇದನ್ನು ಟೆಸ್ಲಾ ಕಂಪನಿ ತನ್ನ ಕಾರುಗಳಿಗಾಗಿ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವು ಕಾರಿನ ಸ್ಟೀರಿಂಗ್, ಬ್ರೇಕ್ ಮತ್ತು ಆಕ್ಸಿಲರೇಟರ್ ಭಾಗಗಳನ್ನು ಚಾಲಕರ ಪ್ರಮೇಯವಿಲ್ಲದೇ ನಿಯಂತ್ರಿಸಬಲ್ಲದು. ಸಂಭವನೀಯ ಅಪಘಾತಗಳನ್ನು ತಪ್ಪಿಸಲು ತಾನಾಗಿಯೇ ಬ್ರೇಕಿಂಗ್ ವ್ಯವಸ್ಥೆಯನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.

ಟೆಸ್ಲಾ ಕಂಪನಿಯು ತನ್ನ ತಂತ್ರಜ್ಞಾನ ಹೆಚ್ಚು ಅಭಿವೃದ್ಧಿ ಹೊಂದಿದ್ದರೂ ಸಹ, ಚಾಲಕ 100% ರಸ್ತೆಯ ಮೇಲೆ ಕೇಂದ್ರೀಕರಿಸಬೇಕು ಎಂದು ಹೇಳಿದೆ. ಟೆಸ್ಲಾ ಆಟೋಪೈಲಟ್ ಸೇರಿದಂತೆ AI ವ್ಯವಸ್ಥೆಗಳು ನಿರಂತರವಾಗಿ ಅಭಿವೃದ್ಧಿ ಹಂತದಲ್ಲಿರುವ ಕಾರಣ ಅವು ತಪ್ಪುಗಳನ್ನು ಮಾಡುವ ಸಾಧ್ಯೆತೆ ಇದೆ. ಆದ್ದರಿಂದ ಆಟೋಪೈಲಟ್ ಬಳಸುವಾಗ ಚಾಲಕ ತಮ್ಮ ಕೈಗಳನ್ನು ಸ್ಟೀರಿಂಗ್ ಮೇಲೆ ಮತ್ತು ಕಣ್ಣುಗಳನ್ನು ರಸ್ತೆಯ ಮೇಲೆ ಇಡಬೇಕು ಎಂದು ಹೇಳಿದೆ.
ಆಗಿದ್ದೇನು?: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಟೆಸ್ಲಾ ಕಾರೊಂದರಲ್ಲಿ ಆಟೋಪೈಲಟ್ ಸಕ್ರಿಯವಾಗಿದ್ದಾಗ ಚಾಲಕ ನಿರ್ಲಕ್ಷ್ಯ ವಹಿಸಿದ್ದು, ಕಾರು ರೈಲು ಹಳಿಗಳನ್ನು ರಸ್ತೆ ಎಂದು ತಪ್ಪಾಗಿ ಭಾವಿಸಿ ಅದರ ಮೇಲೆ ಓಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯ ಅಧಿಕಾರಿಗಳು ಆ ಟ್ರ್ಯಾಕ್‌ನ ಎಲ್ಲಾ ರೈಲುಗಳನ್ನು ಸ್ಥಗಿತಗೊಳಿಸಿದ್ದಾರೆ. ಅಮೆರಿಕಾದಲ್ಲಿ ಇಂತಹ ಘಟನೆಗಳಲ್ಲಿ ಚಾಲಕನನ್ನು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ.

ಚಾಲಕರು ತಮ್ಮ ಕಾರುಗಳನ್ನು ಆಟೋಪೈಲಟ್‌ನಲ್ಲಿ ಇರಿಸಿ ಮಲಗುವುದು ಅಥವಾ ತಮ್ಮ ಫೋನ್‌ಗಳನ್ನು ಬಳಸುವುದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು, ಟೆಸ್ಲಾ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಜಾರಿಗೆ ತಂದಿದೆ. ಚಾಲಕನ ಕೈಗಳು ಸ್ಟೀರಿಂಗ್ ಮೇಲೆ ಇಲ್ಲ ಎಂದು ಸಿಸ್ಟಮ್ ಪತ್ತೆಹಚ್ಚಿದಾಗ ಎಚ್ಚರಿಕೆ ನೀಡುತ್ತದೆ. ಚಾಲಕ ಇದಕ್ಕೆ ಪ್ರತಿಕ್ರಿಯಿಸದಿದ್ದರೆ ಕಾರು ನಿಲ್ಲುತ್ತದೆ.
ತಂತ್ರಜ್ಞಾನವು ಎಷ್ಟೇ ಮುಂದುವರಿದಿದ್ದರೂ, ಬೇಜವಾಬ್ದಾರಿಯುತ ಚಾಲಕನನ್ನು ಬದಲಾಯಿಸಲು ಸಾಧ್ಯವಿಲ್ಲ. ಸ್ವಾಯತ್ತ ಚಾಲನಾ ತಂತ್ರಜ್ಞಾನದ ಪ್ರಗತಿಯ ಜೊತೆಗೆ ಅದನ್ನು ನಿಯಂತ್ರಿಸುವ ನಿಯಮಗಳು ಮತ್ತು ಮಾರ್ಗಸೂಚಿಗಳು ಸಹ ಮುಂದುವರಿಯಬೇಕು. ಜೊತೆಗೆ ಈ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುವ ಮಿತಿಗಳು ಮತ್ತು ಜವಾಬ್ದಾರಿಗಳನ್ನು ಬಳಕೆದಾರರು ಕೂಡ ಅರ್ಥಮಾಡಿಕೊಳ್ಳುವುದು ಅಷ್ಟೇ ಮುಖ್ಯ.
ಸದ್ಯ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ನಡೆದ ಟೆಸ್ಲಾ ಆಟೋಪೈಲಟ್ ಘಟನೆಯು ಸ್ವಾಯತ್ತ ಚಾಲನಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸವಾಲುಗಳನ್ನು ಎತ್ತಿ ತೋರಿಸುತ್ತಿದೆ. ಟೆಸ್ಲಾ ಆಟೋಪೈಲಟ್ ವ್ಯವಸ್ಥೆಯು ಲಭ್ಯವಿರುವ ಅತ್ಯಂತ ಸುಧಾರಿತ ವ್ಯವಸ್ಥೆಗಳಲ್ಲಿ ಒಂದಾಗಿದ್ದರೂ, ಇಂದು ಟೀಕೆಗೆ ಗುರಿಯಾಗಿದೆ. ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








