Tesla: ಯಾರು ಊಹಿಸಿರಲಿಲ್ಲ.. ಇದೇ ಭಾರತದ ಟೆಸ್ಲಾ ಕಾರಿನ ಬೆಲೆ? ಇವಿ ಉದ್ಯಮದಲ್ಲಿ ಅಲ್ಲೋಲ - ಕಲ್ಲೋಲ!
ಭಾರತದ ಮಾರುಕಟ್ಟೆಯಲ್ಲಿ ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳು (ಇವಿ) ಅಬ್ಬರಿಸುವುದನ್ನು ಶುರು ಮಾಡಿವೆ. ಇದನ್ನೇ ಉತ್ತಮ ಅವಕಾಶವಾಗಿ ಬಳಕೆ ಮಾಡುತ್ತಿರುವ ಪ್ರಮುಖ ದೇಶ - ವಿದೇಶ ಕಂಪನಿಗಳು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ, ಅಮೆರಿಕದ ಟೆಸ್ಲಾ (Tesla) ಈ ಸಾಲಿಗೆ ಸೇರ್ಪಡೆಯಾಗುತ್ತಿದೆ.
ದೇಶದಲ್ಲಿ ವಾರ್ಷಿಕ 500,000 ಯುನಿಟ್ ಎಲೆಕ್ಟ್ರಿಕ್ ಕಾರು ಉತ್ಪಾದಿಸಲು ಸಾಮರ್ಥ್ಯವಿರುವ ಅತಿ ದೊಡ್ಡ ಕಾರ್ಖಾನೆ ಸ್ಥಾಪಿಸಲು ಬಂಡವಾಳ ಹೂಡಿಕೆಗೆ ಟೆಸ್ಲಾ ಮುಂದಾಗಿದೆ. ಈ ಸಂಬಂಧ ಕಂಪನಿಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರದೊಂದಿಗೆ ಚರ್ಚೆಯನ್ನು ಶುರು ಮಾಡಿದ್ದಾರೆ ಎಂದು ಗುರುವಾರ ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲಿ ಟೆಸ್ಲಾ ರೂ.20 ಲಕ್ಷ ಬೆಲೆಗೆ ಎಲೆಕ್ಟ್ರಿಕ್ ಕಾರು, ಲಾಂಚ್ ಮಾಡಲು ತಯಾರಿ ನಡೆಸಿದೆ ಎಂದು ವರದಿಯಾಗಿದೆ. ಆದರೆ, ಕಂಪನಿಯು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದ ಆಗರ್ಭ ಶ್ರೀಮಂತ ಉದ್ಯಮಿ ಎಲಾನ್ ಮಾಸ್ಕ್ ಒಡೆತನದ ಟೆಸ್ಲಾ, ಭಾರತದಲ್ಲಿ ಕಾರುಗಳನ್ನು ತಯಾರಿಸಿ, ಇಂಡೋ-ಪೆಸಿಫಿಕ್ ದೇಶಗಳಾದ ಜಪಾನ್ ಹಾಗೂ ಆಸ್ಟ್ರೇಲಿಯಾಗೆ ರಫ್ತು ಮಾಡಲು ಯೋಜನೆ ರೂಪಿಸಿದೆ ಎಂದು ಮೂಲಗಳು ಹೇಳಿವೆ.
ಕಳೆದ ತಿಂಗಳು, ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಅವರೊಂದಿಗೆ ಭಾರತದಲ್ಲಿ ಬಂಡವಾಳ ಹೊಡಿಕೆ ಮಾಡುವ ಸಂಬಂಧ ಚರ್ಚೆ ಮಾಡಿದ್ದರು. ಈ ಕುರಿತು ಮಾತನಾಡಿದ್ದ ಎಲಾನ್ ಮಸ್ಕ್, 'ಮುಂದಿನ ವರ್ಷ ಭಾರತಕ್ಕೆ ತೆರಳುತ್ತೇನೆ. ಶೀಘ್ರವೇ ಅಲ್ಲಿ ಟೆಸ್ಲಾ ತನ್ನ ಕಾರ್ಯಚರಣಿಯನ್ನು ಆರಂಭಿಸಲಿದೆ' ಎಂದು ಹೇಳಿದ್ದರು.

ಟೆಸ್ಲಾ, ಭಾರತಕ್ಕೆ ಬರಲಿದೆ ಎಂದು ವರದಿಯಾದ ಕೊಡಲೇ, ವಿವಿಧ ರಾಜ್ಯಗಳು ತಮ್ಮಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಆಹ್ವಾನಿಸುವುದನ್ನು ಶುರು ಮಾಡಿದವು. ಅದಕ್ಕೆ ಕರ್ನಾಟಕವು ಹೊರತಾಗಿರಲಿಲ್ಲ. ಈ ಬಗ್ಗೆ ಟ್ವೀಟ್ ಮಾಡಿದ್ದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, 'ಭಾರತದಲ್ಲಿ ಟೆಸ್ಲಾ ಕಂಪನಿ ಹೊಡಿಕೆ ಮಾಡಲು ಕರ್ನಾಟಕವು ಅತ್ಯುತ್ತಮ ಸ್ಥಳವಾಗಿದೆ. ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ' ಎಂದು ಹೇಳಿದ್ದರು.
ಕೆಲವು ವರ್ಷಗಳ ಹಿಂದೆಯೇ (2021ರ ಜನವರಿ) ಟೆಸ್ಲಾದ ಅಂಗಸಂಸ್ಥೆಯಾದ 'ಟೆಸ್ಲಾ ಇಂಡಿಯಾ ಮೋಟಾರ್ಸ್ & ಎನರ್ಜಿ ಪ್ರೈವೇಟ್ ಲಿಮಿಟೆಡ್' ಬೆಂಗಳೂರಿನಲ್ಲಿ ನೋಂದಾಯಿಸಿಕೊಂಡಿತ್ತು. ಇದನ್ನು ಗಮನಿದಾಗ, ಭಾರತದಲ್ಲಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿರುವ ಟೆಸ್ಲಾಗೆ, ಬೆಂಗಳೂರು ಅತ್ಯುತ್ತಮ ಉದ್ಯಮ ತಾಣವಾಗುವುದರಲ್ಲಿ ಎರಡು ಮಾತಿಲ್ಲ.
ಈಗಾಗಲೇ, ಬೆಂಗಳೂರು ಇವಿ ಹಬ್ ಆಗಿ ಪರಿವರ್ತನೆಗೊಳ್ಳುತ್ತಿದ್ದು, ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳಾದ ಓಲಾ, ಎಥರ್ ಹಾಗೂ ಸಿಂಪಲ್ ಎನರ್ಜಿ ಇಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿವೆ. ಅಧ್ಯಯನವೊಂದರ ವರದಿ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಸಂಶೋಧನೆಗಳು ಬೆಂಗಳೂರು ಕೇಂದ್ರೀಕೃತವಾಗಿ ನಡೆಯುತ್ತಿವೆ. ಈ ಕಾರಣಗಳಿಗೆ ಟೆಸ್ಲಾ ಬೆಂಗಳೂರನ್ನು ಪ್ರಮುಖ ಹೂಡಿಕೆ ಸ್ಥಳವಾಗಿ ಪರಿಗಣಿಸಬಹುದು.
ಸದ್ಯ, ಬೃಹತ್ ಕಾರ್ಖಾನೆ ಸ್ಥಾಪಿಸಲು ಹೂಡಿಕೆ ಮಾಡುವ ಸಂಬಂಧ ಟೆಸ್ಲಾ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ. ಟೆಸ್ಲಾ ಬಂಡವಾಳ ಹಾಕುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪ್ರತಿಯೊಂದು ರಾಜ್ಯವು ಕಂಪನಿಯನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಕೆಲವೇ ದಿನಗಳಲ್ಲಿ ಇದಕ್ಕೆ ಅಂತಿಮ ತೆರೆ ಬೀಳಲಿದೆ.


Click it and Unblock the Notifications