ಟಿಕೆಟ್ ಬುಕ್ ಮಾಡಿದ್ದು Vande Bharat ಗೆ, ಪ್ರಯಾಣಿಸಿದ್ದು ಕಳಪೆ ರೈಲಿನಲ್ಲೆಂದ ಪ್ರಯಾಣಿಕ: ತಪ್ಪಾಗಿದ್ದೆಲ್ಲಿ?
ವಿಮಾನದಂತಹ ಸೌಕರ್ಯ, ಐಷಾರಾಮಿ ಒಳಾಂಗಣ ಈಗಿರುವ ಎಲ್ಲಾ ರೈಲುಗಳಿಂತ ಹೆಚ್ಚು ಆರಾಮದಾಯಕ ಅನುಭವ ಒದಗಿಸುವ ವಂದೇ ಭಾರತ್ ರೈಲುಗಳು ನಿಧಾನವಾಗಿ ದೇಶದ ಬಹುತೇಕ ರಾಜ್ಯಗಳಲ್ಲಿ ಸೇವೆಗೆ ಸಜ್ಜಾಗುತ್ತಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಆದ್ರೆ ಈ ರೈಲುಗಳ ಕುರಿತು ಈಗ ವೈರಲ್ ಆಗಿರುವ ಸುದ್ದಿ ನಿಮಗೆ ಆಶ್ಚರ್ಯವೆನಿಸಬಹುದು.
ಎಲ್ಲರಂತೆ ಕುತೂಹಲದಿಂದ Vande Bharat ರೈಲಿನಲ್ಲಿ ಪ್ರಯಾಣಿಸಲು ಹೊರಟಿದ್ದ ವ್ಯಕ್ತಿಯೊಬ್ಬರಿಗೆ ಕಂಡರಿಯದ ಅನುಭವವಾಗಿದೆ. ಬಹಳ ಆಸಕ್ತಿಯಿಂದ ವಂದೇ ಭಾರತ್ ರೈಲು ಟಿಕೆಟ್ ಬುಕ್ ಮಾಡಿದ್ದವರಿಗೆ ಕಳಪೆ ಗುಣಮಟ್ಟದ ರೈಲು ಪ್ರಯಾಣದ ಅನುಭವವಾಗಿದೆ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಫೋಟೋಗಳ ಸಮೇತ ಹಂಚಿಕೊಂಡಿದ್ದಾರೆ.

ವಂದೇ ಭಾರತ್‌ನಲ್ಲಿ 1 ಬಾರಿ ಪ್ರಯಾಣಿಸಲು ಉತ್ಸುಕನಾಗಿದ್ದೆ, ಆದ್ರೆ ವಂದೇ ಭಾರತ್ ಹೆಸರಿನಲ್ಲಿ ಮತ್ತೊಂದು ರೈಲನ್ನು ನೋಡಿ ಬೆಚ್ಚಿಬಿದ್ದಿದ್ದೇನೆ. ಬಾತ್ರೂಮ್‌ಗಳು ಕರುಣಾಜನಕ ಮತ್ತು ಸೇವೆಗಳು ಕೆಟ್ಟದಾಗಿವೆ. ಇದಕ್ಕೆ ನಿಜವಾದ ವಂದೇ ಭಾರತ್ ಪ್ರಕಾರ ಇನ್ನೂ ಶುಲ್ಕ ವಿಧಿಸಲಾಗುತ್ತಿದೆ. ರೈಲಿನ ಸಂಖ್ಯೆ- 22439 ಎಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್, ಪ್ರಧಾನಿ ಮೋದಿ ಹಾಗೂ ರೈಲ್ವೆ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.
ಈ ದುಸ್ಥಿತಿಗೆ ಬಿದ್ದ ವ್ಯಕ್ತಿ ಸಿದ್ಧಾರ್ಥ್ ಪಾಂಡೆ. ಈತ ತನ್ನ ಪ್ರಯಾಣವನ್ನು ಜೀವನದ ಅತ್ಯಂತ ಕೆಟ್ಟ ರೈಲು ಪ್ರಯಾಣ ಎಂದು ಉಲ್ಲೇಖಿಸಿದ್ದಾರೆ. ಐಷಾರಾಮಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ತಮ್ಮ ಕನಸು ಮತ್ತೊಂದು ರೈಲಿನಲ್ಲಿ ಕೆಳದರ್ಜೆಯ ಸೇವೆಗಳೊಂದಿಗೆ ಕೊನೆಗೊಂಡಿತು ಎಂದು ವಿಷಾದಿಸಿದ್ದಾರೆ. ಅತ್ಯಂತ ಕಳಪೆ ಶೌಚಾಲಯ, ರೈಲು ತೀರಾ ಕೆಟ್ಟ ಸೇವೆ ಒದಗಿಸಿರುವುದನ್ನು ಹೇಳಿಕೊಂಡಿದ್ದಾರೆ.

ಸಿದ್ಧಾರ್ಥ್ ಅವರ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಅನೇಕ ಜನರು ತಮ್ಮ ಅಭಿಪ್ರಾಯಗಳನ್ನು ಮತ್ತು ಭಾರತೀಯ ರೈಲ್ವೆಯಲ್ಲಿನ ಕೆಟ್ಟ ಅನುಭವಗಳನ್ನು ಅವರಿಗೆ ಬೆಂಬಲವಾಗಿ ಹಂಚಿಕೊಳ್ಳುತ್ತಿದ್ದಾರೆ. ರೈಲು ಸಂಖ್ಯೆಯನ್ನು ಆಧರಿಸಿ ಇದು ನವದೆಹಲಿ ಮತ್ತು ಶ್ರೀ ಮಾತಾ ವೈಷ್ಣೋ ದೇವಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಎಂದು ತಿಳಿದುಬಂದಿದೆ.
ನಿಜವಾದ ರೈಲಿನ ಬದಲಿಗೆ, ತೇಜಸ್ ಎಕ್ಸ್‌ಪ್ರೆಸ್ ಆಗಮಿಸಿದೆ ಎಂದು ಶ್ರೀ ಪಾಂಡೆ ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ "ಕೆಲವೊಮ್ಮೆ ತಾಂತ್ರಿಕ ದೋಷ ಅಥವಾ ಕೆಲವು ನಿರ್ವಹಣಾ ಸಮಸ್ಯೆಗಳಿಂದಾಗಿ, ವಂದೇ ಭಾರತ್ ಅನ್ನು ಆ ದಿನಕ್ಕೆ ಓಡಿಸಲು ಯೋಗ್ಯವೆಂದು ಪರಿಗಣಿಸುವುದಿಲ್ಲ. ಹಾಗಾಗಿ ತುರ್ತು ಪರಿಸ್ಥಿತಿಗಳಲ್ಲಿ ತೇಜಸ್ ಅನ್ನು NDLS ನಲ್ಲಿ ಇರಿಸಲಾಗುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಏನೇ ಆಗಲಿ ನಿರ್ವಹಣೆಯ ಕೊರತೆ ಮತ್ತು ಪ್ರಯಾಣಿಕರ ನಿರ್ಲಕ್ಷ್ಯದಿಂದಾಗಿ ಈ ರೈಲು ಭಾರತೀಯ ರೈಲ್ವೆಯ ಅತ್ಯಂತ ಕೆಟ್ಟ ರೈಲುಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇಂತಹ ರೈಲನ್ನು ವಂದೇ ಭಾರತ್ ರೈಲು ಎಂದು ಭಾವಿಸಿ ಸಿದ್ಧಾರ್ಥ್ ಟಿಕೆಟ್ ವಂಚಿತರಾಗಿದ್ದಾರೆ. ಇಂತಹ ರೈಲಿನಲ್ಲಿ ನೀವು ಪ್ರಯಾಣಿಸಿದರೆ, ಖಂಡಿತ ರೈಲು ಪ್ರಯಾಣವನ್ನು ದ್ವೇಷಿಸುತ್ತೀರಿ. ಇದು ಅನೈರ್ಮಲ್ಯ ರೈಲು ಎಂದು ಹಲವರು ಆರೋಪ ಮಾಡುತ್ತಿದ್ದಾರೆ.
ಇನ್ನೂ ಕೆಲವರು, ಇದು ರೈಲ್ವೇಯಲ್ಲಿ ಆಗಾಗ ನಡೆಯುತ್ತಿದೆ. ಅವರು ಹಮ್ಸಫರ್ ಜೊತೆಗೆ ಇದನ್ನು ಮಾಡುತ್ತಿದ್ದಾರೆ, ಹಮ್ಸಫರ್ (ಪ್ರೀಮಿಯಂ ರೈಲು) ಶುಲ್ಕಗಳಂತೆ ಸಾಮಾನ್ಯ 3AC ಗಿಂತ ಹೆಚ್ಚು ಶುಲ್ಕ ವಿಧಿಸುತ್ತಾರೆ. ನಂತರ ಸಾಮಾನ್ಯ LHB 3AC ಕೋಚ್‌ಗಳನ್ನು ನೀಡುತ್ತಾರೆ. ಇದು ದೊಡ್ಡ ಹಗರಣವಾಗಿದೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಕೊನೆಗೂ ರೈಲ್ವೆ ಪ್ರಯಾಣಿಕರಿಗೆ ಸಹಾಯವನ್ನು ಒದಗಿಸಲು ಮೀಸಲಾಗಿರುವ ಅಧಿಕೃತ ಟ್ವಿಟರ್ ಹ್ಯಾಂಡಲ್ ಆದ 'ರೈಲ್ವೇ ಸೇವಾ', ಸಿದ್ಧಾರ್ಥ್ ಪಾಂಡೆಗೆ ಆಗಿರುವ ದೋಷಕ್ಕೆ ಅವರಿಂದ ವಿವರಗಳನ್ನು ಕೇಳಿದೆ, ಅಗತ್ಯ ಕ್ರಮಕ್ಕಾಗಿ ಸಂಬಂಧಿತ ಅಧಿಕಾರಿಯ ಗಮನಕ್ಕೆ ಸಮಸ್ಯೆಯನ್ನು ತಲುಪಿಸುವುದಾಗಿ ಟ್ವೀಟ್‌ನಲ್ಲಿ ತಿಳಿಸಿದೆ. ಇಂತಹ ಅನುಭವ ನಿಮಗೂ ಆಗಿದ್ದರೇ ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








