ಅಪಘಾತಗಳಿಗೆ ಸಂಬಂಧಿಸಿ ಆಘಾತಕಾರಿ ಅಂಕಿಅಂಶಗಳನ್ನು ಬಹಿರಂಗಪಡಿಸಿದ ಸಚಿವ ನಿತಿನ್ ಗಡ್ಕರಿ
ಪ್ರಪಂಚದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವೂ ಸಹ ಸೇರಿದೆ. ಅಪಘಾತ ನಿಯಂತ್ರಣಕ್ಕೆ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಪ್ರಾಣ ನಷ್ಟ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಅಪಘಾತ ಪ್ರಕರಣಗಳು ಮಾತ್ರ ಕಡಿಮೆಯಾಗಿಲ್ಲ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಸ್ತೆ ಅಪಘಾತಗಳಿಗೆ ಸಂಬಂಧಿಸಿದ ಆಘಾತಕಾರಿ ಅಂಕಿಅಂಶಗಳನ್ನು ಹಂಚಿಕೊಂಡಿದ್ದಾರೆ. 2020ರಲ್ಲಿ ದೇಶದಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಗೆ ಸಂಬಂಧಿಸಿದಂತೆ 1,58,964 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಒಟ್ಟು 56,873 ಜನರು ಸಾವನ್ನಪ್ಪಿದ್ದಾರೆ ಎಂದು ಗಡ್ಕರಿ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

2019 ರಲ್ಲಿ ಒಟ್ಟು ಅಪಘಾತಗಳ ಸಂಖ್ಯೆ 1,67,184 ದಾಖಲಾಗಿದ್ದು, ಇದರಲ್ಲಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಒಟ್ಟು 56,136 ಜನರು ಜೀವ ಕಳೆದುಕೊಂಡಿದ್ದಾರೆ ಎಂದ ಅವರು, ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣಗಳನ್ನು ತಿಳಿಸಿದರು. ಈ ಅಪಘಾತಗಳಿಗೆ ಸಂಚಾರಿ ನಿಯಮಗಳ ಉಲ್ಲಂಘನೆ ಮುಖ್ಯ ಕಾರಣವಾಗಿದೆ. ಜೊತೆಗೆ ರಾಂಗ್ ಸೈಡ್ ಡ್ರೈವಿಂಗ್, ಅತಿವೇಗ, ಸಿಗ್ನಲ್ ಜಂಪ್, ಅಪ್ರಾಪ್ತ ವಯಸ್ಸಿನವರ ಚಾಲನೆಯು ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿರುವುದಾಗಿ ಸಾರಿಗೆ ಸಚಿವಾಲಯದ ಅಂಕಿಅಂಶಗಳು ತಿಳಿಸಿರುವುದಾಗಿ ಗಡ್ಕರಿ ಹೇಳಿದರು.

ಸಾರಿಗೆ ಸಚಿವಾಲಯದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 4.50 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಲ್ಲಿ 1.50 ಲಕ್ಷ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇತರ ಯಾವುದೇ ದೇಶಕ್ಕೆ ಹೋಲಿಸಿದರೆ ಈ ಸಂಖ್ಯೆ ವಿಶ್ವದಲ್ಲೇ ಅತ್ಯಧಿಕವಾಗಿದೆ. ಭಾರತದಲ್ಲಿ ಅಂಗವೈಕಲ್ಯಕ್ಕೆ ರಸ್ತೆ ಅಪಘಾತಗಳು ಮುಖ್ಯ ಕಾರಣ ಎಂದು ಉಲ್ಲೇಖಿಸಲಾಗಿದೆ.

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಪ್ರತಿ ಗಂಟೆಗೆ 53 ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಮತ್ತು ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾನೆ. ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿವೆ. ಅಂಕಿಅಂಶಗಳ ಪ್ರಕಾರ ದ್ವಿಚಕ್ರ ವಾಹನ ಚಾಲಕರೇ ರಸ್ತೆ ಅಪಘಾತಗಳಲ್ಲಿ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ.

ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲಕರ ಸುರಕ್ಷತೆಯನ್ನು ಹೆಚ್ಚಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈಗ 150 ಸಿಸಿ ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಸ್ಟ್ಯಾಂಡರ್ಡ್ ಫಿಟ್ಮೆಂಟ್ ಆಗಿ ಎಬಿಎಸ್ ಬ್ರೇಕಿಂಗ್ ಕಡ್ಡಾಯ ಮಾಡಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು. ಇನ್ನು 125 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕಾಂಬಿ ಬ್ರೇಕ್ ಸಿಸ್ಟಮ್ (ಸಿಬಿಎಸ್) ಅನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ದಂಡವನ್ನು ಹೆಚ್ಚಿಸಿದೆ.

ರಸ್ತೆ ಮತ್ತು ವಾಹನ ಶಿಕ್ಷಣ, ಎಂಜಿನಿಯರಿಂಗ್, ಕಾನೂನು ಮತ್ತು ತುರ್ತು ಆರೈಕೆಯ ಆಧಾರದ ಮೇಲೆ ರಸ್ತೆ ಸುರಕ್ಷತೆಯ ಸಮಸ್ಯೆಯನ್ನು ಪರಿಹರಿಸಲು ಸಾರಿಗೆ ಸಚಿವಾಲಯವು ಬಹು ಆಯಾಮದ ಕಾರ್ಯತಂತ್ರವನ್ನು ರೂಪಿಸಿದೆ ಎಂದ ಗಡ್ಕರಿ, ಇದರ ಅಡಿಯಲ್ಲಿ ಸಚಿವಾಲಯವು ಭಾರತದ ಪ್ರತಿ ಜಿಲ್ಲೆಯಲ್ಲೂ 'ಸಂಸತ್ ರಸ್ತೆ ಸುರಕ್ಷತಾ ಸಮಿತಿ ಸದಸ್ಯರನ್ನು' ನೇಮಿಸಿ ಅಧಿಸೂಚನೆ ಹೊರಡಿಸಿದೆ.

ಇದು ಜಿಲ್ಲೆಯ ಸಂಸತ್ ಸದಸ್ಯರ (ಲೋಕಸಭಾ) ಅಧ್ಯಕ್ಷತೆಯಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಸುಧಾರಿಸಲು ಆಗಸ್ಟ್ 9, 2019 ರಂದು ದೇಶದಲ್ಲಿ ಮೋಟಾರು ವಾಹನ ಕಾಯ್ದೆ (2019) ಅನ್ನು ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್ ಕಡ್ಡಾಯ
ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ತಪ್ಪಿಸಲು ಹಾಗೂ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಎಲ್ಲಾ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳಲ್ಲಿ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಒಳಗೊಂಡಿರುವಂತೆ ಆದೇಶ ನೀಡಿದ್ದಾರೆ.

ಎಂಟು ಪ್ರಯಾಣಿಕರನ್ನು ಹೊತ್ತೊಯ್ಯುವ ವಾಹನಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ಅಧಿಸೂಚನೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜನವರಿಯಲ್ಲಿ ಅನುಮೋದಿಸಿತ್ತು. ಇದೀಗ ಸಂಸತ್ತಿನಲ್ಲಿ ಇತ್ತೀಚಿನ ಪ್ರಕಟಣೆಯು ಟೈಮ್‌ಲೈನ್ ಅನ್ನು ನೀಡದಿದ್ದರೂ, ಹೊಸ ಕಾರುಗಳನ್ನು (ಅಕ್ಟೋಬರ್ 1, 2022 ರಿಂದ ತಯಾರಿಸಿದರೆ) ಹೊಸ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕರಡು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಬಿಡುಗಡೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆ ಅಪಘಾತಗಳಲ್ಲಿನ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಬಿಡುಗಡೆಗೆ ಹೊಸ ಕ್ರಮ ಅಳವಡಿಸಿಕೊಳ್ಳುವಂತೆ ವಿಮಾ ಕಂಪನಿಗಳಿಗೆ ಅಧಿಸೂಚನೆ ಹೊರಡಿಸಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ನಂತರದ ತನಿಖೆಯ ಪ್ರಕ್ರಿಯೆಗೆ ಕಾಲಮಿತಿ ನಿಗದಿಪಡಿಸಿದೆ.

ಈ ಹಿಂದೆ ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಳ ಕಾಲವೇ ಕಾಯಬೇಕಿದ್ದ ಪರಿಸ್ಥಿತಿಯು ಇನ್ಮುಂದೆ ಸುಧಾರಿಸಲಿದ್ದು, ವಿಲೇವಾರಿಯಾಗದೆ ಉಳಿದಿರುವ ಲಕ್ಷಾಂತರ ಅಪಘಾತ ಪ್ರಕರಣಗಳ ಪರಿಹಾರವನ್ನು ವಿತರಣೆಯನ್ನು ತುರ್ತಾಗಿ ಕೈಗೊಳ್ಳಲು ಈ ಹೊಸ ಮಾರ್ಗಸೂಚಿ ಅನುಕೂಲಕರವಾಗಲಿದೆ. ಹೊಸ ಪರಿಹಾರ ಘೋಷಣೆಯಲ್ಲಿ ಕೇಂದ್ರ ಸರ್ಕಾರವು ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇನ್ಮುಂದೆ 8 ಪಟ್ಟು ಹೆಚ್ಚು ಪರಿಹಾರ ಸಿಗಲಿದ್ದು, ಈ ಹಿಂದೆ ಇದ್ದ ಪರಿಹಾರ ಮೊತ್ತವನ್ನು ಇದೀಗ ರೂ. 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.


Click it and Unblock the Notifications








