ಸಂಭಾವ್ಯ ಬೆಂಕಿ ಅವಘಡ ತಪ್ಪಿಸಲು ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಬಹಳ ಪರಿಣಾಮಕಾರಿ!
ಗಗನಕ್ಕೇರುತ್ತಿರುವ ಇಂಧನ ಬೆಲೆಗಳಿಂದ ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇವಿ ಕಂಪನಿಗಳು ಸಹ ಗ್ರಾಹಕರಿಗೆ ಅನುಗುಣವಾಗಿ ದಿನಕಳೆದಂತೆ ತಮ್ಮ ಮಾದರಿಗಳ ಅಭಿವೃದ್ಧಿ ಹಾಗೂ ಹೊಸ ತಂತ್ರಜ್ಞಾನ ಆಧಾರಿತ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಆದರೆ ಕೆಲವೊಮ್ಮೆ ತಾಂತ್ರಿಕ ದೋಷಗಳಿಂದ ವಾಹನಗಳು ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವ ವರದಿಗಳು ಹೆಚ್ಚಾಗಿವೆ. ಇತ್ತೀಚೆಗೆ ವಿತರಣೆಗೊಂಡ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯೊಂದು ಬೆಂಕಿ ಅವಘಡದಲ್ಲಿ ಸುಟ್ಟು ಕರಲಾಗಿದ್ದು, ನೋಡನೋಡುತ್ತಿದ್ದಂತೆ ಸ್ಕೂಟರಿನ ಬ್ಯಾಟರಿ ವಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿಯು ಸಂಪೂರ್ಣವಾಗಿ ಸ್ಕೂಟರ್ ಆವರಿಸಿಕೊಂಡು ಆತಂಕ ಸೃಷ್ಠಿಸಿದೆ.

ಅದೃಷ್ಟವಶಾತ್ ಸ್ಕೂಟರಿನಲ್ಲಿದ್ದ ರೈಡರ್ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಕೂಟರ್ ಅನ್ನು ರಸ್ತೆ ಬದಿ ನಿಲ್ಲಿಸಿ ಪ್ರಾಣಾಪಾಯದಿಂದ ಪಾರಾಗಿದ್ದು, ಪುಣೆ ನಗರದಲ್ಲಿ ನಡೆದ ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಒಂದೇ ಘಟನೆಯಲ್ಲ, ಶಿವಮೊಗ್ಗದಲ್ಲೂ ಮಾರ್ಚ್ 16ರಂದು ಚಾರ್ಜ್ ಹಾಕಿದ್ದ ಇವಿ ಸ್ಕೂಟರ್ ಬೆಂಕಿಹೊತ್ತಿಕೊಂಡು ಮನೆಯ ವಸ್ತುಗಳೆಲ್ಲಾ ಸುಟ್ಟುಕರಕಲಾಗಿದ್ದವು.

ಕಳೆದ ವರ್ಷವು ಹೈದರಾಬಾದಿನಲ್ಲಿ ಚಾಲನೆಯಲ್ಲಿದ್ದ ಇವಿ ಸ್ಕೂಟರ್‌ವೊಂದು ಹೀಟ್ ಹೆಚ್ಚಾಗಿ ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾಗಿತ್ತು. ಸೀಟ್ ಬಿಸಿಯಾಗುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೆ ಬೈಕ್ ಇಳಿದು ಪ್ರಾಣ ಉಳಿಸಿಕೊಂಡಿದ್ದ. ಇಂತಹ ಘಟನೆಗಳ ನಡುವೆ ಇವಿ ತಯಾರಕ ಕಂಪನಿಗಳು ಬ್ಯಾಟರಿ ಸಂಬಂಧಿತ ಸುಧಾರಣೆಗಳನ್ನು ಮಾಡುತ್ತಿದ್ದಾರಾದರೂ ಸಮಸ್ಯೆಗಳು ಮಾತ್ರ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ.

ಪೆಟ್ರೋಲ್-ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಕಡಿಮೆ, ಆದರೆ ಎಲೆಕ್ಟ್ರಿಕ್ ವಾಹನಕ್ಕೆ ಬೆಂಕಿ ಬಿದ್ದರೆ ಅದು ಬಹಳ ವೇಗವಾಗಿ ಹರಡುತ್ತದೆ. ಏಕೆಂದರೆ ಅವುಗಳಲ್ಲಿನ ಬ್ಯಾಟರಿಗಳಲ್ಲಿ ಹಲವು ಬಗೆಯ ದಹಿಸುವ ರಾಸಾಯನಿಕ ಪದಾರ್ಥಗಳನ್ನು ಬಳಸುವುದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಎಲೆಕ್ಟ್ರಿಕ್ ವಾಹನಗಳಿಗೆ ಹೊತ್ತಿಕೊಂಡ ಬೆಂಕಿಯನ್ನು ನಿಯಂತ್ರಿಸುವುದು ಅಸಾಧ್ಯ. ಒಮ್ಮೆ ಹೊತ್ತಿಕೊಂಡು ಉರಿದರೆ ಸ್ಟೋಟವಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಇಂತಹ ಘಟನೆಗಳನ್ನು ತಪ್ಪಿಸಲು ಬ್ಯಾಟರಿ ವಿನಿಮಯದಂತಹ ಕೆಲವು ಹೊಸ ತಂತ್ರಗಳನ್ನು ಬಳಸುವುದರಿಂದ, ಇವಿ ವಾಹನಗಳಲ್ಲಿ ಆಗಬಹುದಾದ ಬೆಂಕಿಯ ಅವಘಡವನ್ನು ಕಡಿಮೆ ತಪ್ಪಿಸಬಹುದು.

ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ
ಯಾವುದೇ ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು ಬ್ಯಾಟರಿ ವಿನಿಮಯವು ಅತ್ಯಂತ ವೇಗವಾದ ಮಾರ್ಗವಾಗಿದೆ. ವಾಸ್ತವವಾಗಿ, ಇದು ಅನೇಕ ಬ್ಯಾಟರಿಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಲು ಇರಿಸಲಾಗಿರುವ ಗ್ರಿಡ್ ಆಗಿದೆ. ಬ್ಯಾಟರಿ ವಿನಿಮಯ ಕೇಂದ್ರದಲ್ಲಿ, ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಅಥವಾ ತ್ರಿಚಕ್ರ ವಾಹನದ ಡಿಸ್ಚಾರ್ಜ್ ಆಗಿರುವ ಬ್ಯಾಟರಿಯನ್ನು ನೀವು ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯೊಂದಿಗೆ ಬದಲಾಯಿಸಬಹುದು. ಪ್ರಸ್ತುತ, ಭಾರತದಲ್ಲಿ ಕೆಲವೇ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ವಿನಿಮಯದ ಸೌಲಭ್ಯವನ್ನು ಒದಗಿಸುತ್ತಿವೆ.

ಬ್ಯಾಟರಿ ವಿನಿಮಯದಿಂದ ಅವಘಡ ಕಡಿಮೆ
ಎಲೆಕ್ಟ್ರಿಕ್ ವಾಹನದ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ, ಅದರ ಉಷ್ಣತೆಯು ಹೆಚ್ಚಾಗುತ್ತದೆ. ಬ್ಯಾಟರಿಯನ್ನು ಚಾರ್ಜ್ ಮಾಡಿದ ನಂತರ ವಾಹನವನ್ನು ಚಾಲನೆ ಮಾಡುವುದರಿಂದ ಬ್ಯಾಟರಿಯು ತಣ್ಣಗಾಗಲು ಸಮಯವನ್ನು ನೀಡುವುದಿಲ್ಲ, ಇದರಿಂದಾಗಿ ಬ್ಯಾಟರಿಯು ಹೆಚ್ಚು ಬಿಸಿಯಾಗುತ್ತದೆ ಮತ್ತು ಬೆಂಕಿಯ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತೊಂದೆಡೆ, ಸ್ವಾಪ್ ಗ್ರಿಡ್ ನಿಮಗೆ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿಯನ್ನು ನೀಡುತ್ತದೆ, ಅದು ಸಂಪೂರ್ಣವಾಗಿ ಚಾರ್ಜ್ ಆದ ನಂತರ ಸ್ವಲ್ಪ ಸಮಯದವರೆಗೆ ಗ್ರಿಡ್‌ನಲ್ಲಿದ್ದ ನಂತರ ತಂಪಾಗುತ್ತದೆ.

ಆಗಾಗ್ಗೆ ಬಳಸುವುದರಿಂದ ಎಲೆಕ್ಟ್ರಿಕ್ ವಾಹನದ ಡಿಸ್ಚಾರ್ಜ್ಡ್ ಬ್ಯಾಟರಿ ಕೂಡ ಬಿಸಿಯಾಗುತ್ತದೆ. ಅದನ್ನು ರೀಚಾರ್ಜ್ ಮಾಡಲು ಬ್ಯಾಟರಿ ಸ್ವಾಪಿಂಗ್ ಸ್ಟೇಷನ್‌ಗೆ ಹಿಂತಿರುಗಿಸಿದಾಗ, ಸ್ವಲ್ಪ ಸಮಯದ ನಂತರ ಅದರ ಉಷ್ಣತೆಯು ಕಡಿಮೆಯಾಗುತ್ತದೆ. ಇದು ಬ್ಯಾಟರಿಯಲ್ಲಿ ಬೆಂಕಿಯ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಈ ಕಂಪನಿಗಳು ಬ್ಯಾಟರಿ ವಿನಿಮಯ ಸೌಲಭ್ಯ ಒದಗಿಸುತ್ತಿವೆ
ಎಲೆಕ್ಟ್ರಿಕ್ ವಾಹನಗಳ ಪ್ರಮುಖ ತಯಾರಕ ಕಂಪನಿ ಬ್ಯಾಟರಿ (BattRE) ತನ್ನ ವಾಹನಗಳಿಗೆ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಬೌನ್ಸ್ ಜೊತೆಗೆ ಬ್ಯಾಟರಿ ಪಾಲುದಾರಿಕೆ ಹೊಂದಿದ್ದು, ಬ್ಯಾಟರಿ ಗ್ರಾಹಕರು ಬೌನ್ಸ್‌ನ ಬ್ಯಾಟರಿ ವಿನಿಮಯ ಕೇಂದ್ರಗಳ ವ್ಯಾಪಕ ನೆಟ್‌ವರ್ಕ್ ಅನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಂತಾಗಿದೆ. ಮೊದಲ ಹಂತದ ಕಾರ್ಯಾಚರಣೆಯಲ್ಲಿ, ಬೌನ್ಸ್ ಪ್ರತಿ ನಗರದಲ್ಲಿ ಕನಿಷ್ಠ 300 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿಯೋಜಿಸುತ್ತದೆ. 12 ನಗರಗಳಲ್ಲಿ ಇಂತಹ ಜಾಲವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ.


Click it and Unblock the Notifications








