Vande Bharat: ವಂದೇ ಭಾರತ್ ಸ್ಲೀಪರ್ ರೈಲುಗಳು ಶೀಘ್ರ ಹಳಿಗೆ.. ರಾಜಧಾನಿ ಎಕ್ಸ್‌ಪ್ರೆಸ್‌ಗಳು ಓಡಾಡುತ್ತವೆಯೇ?
ಭಾರತೀಯ ರೈಲ್ವೆಯು ಅತಿ ಶೀಘ್ರದಲ್ಲಿ ವಂದೇ ಭಾರತ್ ಸ್ಲೀಪರ್ (Vande Bharat sleeper) ರೈಲುಗಳನ್ನು ಪರಿಚಯಿಸಲಿದೆ. ಇವುಗಳನ್ನು ಗಂಟೆಗೆ 200 ಕಿ.ಮೀ ವೇಗದಲ್ಲಿ ದೂರದ ಊರುಗಳಿಗೆ ಸಂಚರಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಈ ರೈಲುಗಳು ರಾಜಧಾನಿ ಎಕ್ಸ್‌ಪ್ರೆಸ್‌ಗಳಿಗೆ ಪರ್ಯಾಯವಾಗಲಿವೆ ಎನ್ನುವ ಚರ್ಚೆಗಳು ಕೂಡ ಶುರುವಾಗಿದೆ.
ಮುಂಬರುವ ವರ್ಷಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಶತಾಬ್ದಿ ಎಕ್ಸ್‌ಪ್ರೆಸ್‌ಗಳ ಜಾಗಕ್ಕೆ ಹಂತ ಹಂತವಾಗಿ ಬರಲಿದ್ದು, ಸ್ಲೀಪರ್ ಆವೃತ್ತಿಗಳು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗೆ ಪರ್ಯಾಯವಾಲಿವೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಹಲವು ಮಾಧ್ಯಮಗಳು ಸಹ ವರದಿ ಮಾಡಿವೆ. ಸದ್ಯ, ನವದೆಹಲಿಯನ್ನು ವಿವಿಧ ರಾಜ್ಯಗಳ ರಾಜಧಾನಿಗಳೊಂದಿಗೆ ಸಂಪರ್ಕಿಸುವುದಕ್ಕೆ ಈ ರಾಜಧಾನಿ ಎಕ್ಸ್‌ಪ್ರೆಸ್‌ಗಳು ಹೆಸರುವಾಸಿಯಾಗಿದ್ದು, ಪ್ರಯಾಣಿಕರಿಗೆ ಅತ್ಯಾಧುನಿಕ ಸೌಕರ್ಯವನ್ನು ಒದಗಿಸುತ್ತಿವೆ.

ದೇಶದ ಹಲವು ಭಾಗಗಳಲ್ಲಿ ಓಡಾಟವನ್ನು ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯು ಶತಾಬ್ದಿ ಎಕ್ಸ್‌ಪ್ರೆಸ್‌ನ ಆಸುಪಾಸಿನಲ್ಲಿದೆ. ಉದಾಹರಣೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುವ ವಂದೇ ಭಾರತ್ ಪ್ರತಿದಿನ 5.45ಕ್ಕೆ ಹೊರಟರೆ, ಶತಾಬ್ದಿ ಎಕ್ಸ್‌ಪ್ರೆಸ್ 6 ಗಂಟೆಗೆ ಸಂಚಾರವನ್ನು ಪ್ರಾರಂಭಿಸುತ್ತದೆ. ಆದಾಗ್ಯೂ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ಸಾಕಷ್ಟು ವಂದೇ ಭಾರತ್ ರೈಲುಗಳನ್ನು ತಯಾರಿಸಬೇಕಾಗಿದೆ.
ಪ್ರಮುಖ ನಗರಗಳ ನಡುವೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಓಡಾಟ ಸಂಪೂರ್ಣವಾಗಿ ಆರಂಭಗೊಂಡ ನಂತರ, ಶತಾಬ್ದಿ ರೈಲುಗಳನ್ನು ಇತರೆ ಮಾರ್ಗಗಳಲ್ಲಿ ಮರು ನಿಯೋಜಿಸಲು ರೈಲ್ವೆ ಇಲಾಖೆಯು ಯೋಜಿಸಿದೆ ಎಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು, ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಯನ್ನು ಶುರು ಮಾಡಿದ ಮೇಲೆ ರಾಜಧಾನಿ ಎಕ್ಸ್‌ಪ್ರೆಸ್‌ಗಳನ್ನು ಬೇರೆ ಮಾರ್ಗಗಳಲ್ಲಿ ಬಿಡಬಹುದು ಎನ್ನಲಾಗಿದೆ.

ಮುಂಬೈನಲ್ಲಿ ವಂದೇ ಭಾರತ್ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಇದು ನಗರ ಸಾರಿಗೆಯನ್ನು ಉತ್ತೇಜಿಸಲು ನೆರವಾಗುತ್ತದೆ. ಪ್ರಸ್ತುತ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೇಶಾದ್ಯಂತ ಯಶಸ್ವಿಯಾಗಿ ಸಂಚಾರವನ್ನು ನಡೆಸುತ್ತಿದ್ದು, ಇವುಗಳ ಸಂಪರ್ಕ ಜಾಲವನ್ನು ಮತ್ತಷ್ಟು ವಿಸ್ತರಿಸಲು ಸಹ ಚಿಂತನೆಯನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ಗರಿಷ್ಠ ವೇಗದಲ್ಲಿ ಓಡಾಟವನ್ನು ಮಾಡುತ್ತಿವೆ. ಆದರೆ, ಸುರಕ್ಷತೆಯ ಸಲುವಾಗಿ ಗಂಟೆಗೆ 130 ಕಿ.ಮೀ ವೇಗವನ್ನು ಸೀಮಿತಗೊಳಿಲಾಗಿದೆ. ರೈಲಿನ ಸೀಟುಗಳು ಹೆಚ್ಚು ಆರಾಮದಾಯಕವಾಗಿವೆ. ಸಂಪೂರ್ಣ ಹವಾ ನಿಯಂತ್ರಿತ ಕೋಚ್‌ಗಳಿದ್ದು ವೈಫೈ ವ್ಯವಸ್ಥೆ, ಸ್ವಯಂಚಾಲಿತ ಬಾಗಿಲು, ಅಗ್ನಿ ನಿರೋಧಕ ಸಾಧನ, ಜೈವಿಕ ಶೌಚಾಲಯವನ್ನು ಒಳಗೊಂಡಿವೆ.
ಕೆಲವೇ ತಿಂಗಳಲ್ಲಿ ಹಳಿಗೆ ಬರಲಿರುವ ಹೊಸ ವಂದೇ ಭಾರತ್ ಸ್ಲೀಪರ್ ರೈಲು, ಒಟ್ಟು 16 ಎಸಿ (ಹವಾನಿಯಂತ್ರಿತ) ಕೋಚ್‌ಗಳನ್ನು ಒಳಗೊಂಡಿರಲಿದೆ. ಅದರಲ್ಲಿ 823 ಬರ್ತ್‌ಗಳನ್ನು ಪಡೆದಿರಲಿದೆ. ವಾಸನೆ ಮುಕ್ತ ಶೌಚಾಲಯ (Odor - Free Toilet Facilities), ಹೊರಭಾಗದಲ್ಲಿ ಸ್ವಯಂ ಚಾಲಿತ ಬಾಗಿಲು (Automatic Exterior Passenger Doors), ಮೊದಲ ದರ್ಜೆಯ ಎಸಿ ಕೋಚ್‌ನಲ್ಲಿ ಬಿಸಿನೀರಿನ (Hot Water) ಶವರ್ ಇರಲಿದೆ ಎಂದು ಹೇಳಲಾಗಿದೆ.

ಹತ್ತಿರದ ಸ್ಥಳಗಳಿಗೆ ಸಂಪರ್ಕವನ್ನು ಕಲ್ಪಿಸಲು ರೈಲ್ವೆ ಇಲಾಖೆಯು ಬಿಡಲಿರುವ ವಂದೇ ಭಾರತ್ ಮೆಟ್ರೋ ಕೂಡ ಹಲವು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇದು 12 ಕೋಚ್‌ಗಳನ್ನು ಹೊಂದಿರಲಿದ್ದು, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ 16 ಕೋಚ್‌ಗಳವೆರೆಗೂ ಹೆಚ್ಚಿಸಬಹುದು. ಶೀಘ್ರದಲ್ಲಿಯೇ ದೇಶಾದ್ಯಂತ 124 ಪ್ರಮುಖ ನಗರಗಳನ್ನು ವಂದೇ ಮೆಟ್ರೋ ಸಂಪರ್ಕಿಸಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications