ಭಾರತಕ್ಕೆ ಕಾಲಿಡಲಿದೆ ಮತ್ತೊಂದು ಎಲೆಕ್ಟ್ರಿಕ್ ದೈತ್ಯ: ಟೆಸ್ಲಾ ಬರುವ ಮುಂಚೆಯೇ ಪೈಪೋಟಿ ರೆಡಿ
ಇತ್ತೀಚೆಗ ಭಾರತದಲ್ಲಿ ಕಾರು ಮಾರುಕಟ್ಟೆಯು ವಿಪರೀತವಾಗಿ ಬೆಳೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಎಸ್‌ಯುವಿ ಮಾರುಕಟ್ಟೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೇ ಕಾರಣದಿಂದಲೇ ಹಲವಾರು ಕಾರು ಕಂಪನಿಗಳು ವಿಧ ವಿಧವಾದ ಕಾರುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿದ್ದು, ಒಂದಕ್ಕಿಂತ ಒಂದು ಮುಂಪಕ್ತಿಯಲ್ಲಿದೆ.
ಇದೀಗ ಭಾರತೀಯ ಕಾರು ಮಾರುಕಟ್ಟೆಗೆ ಮತ್ತೊಂದು ವಿದೇಶಿ ಕಂಪೆನಿ ಲಗ್ಗೆ ಇಡುತ್ತಿದ್ದು, ಸದ್ಯಕ್ಕೆ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರು ಕಂಪನಿಗಳಿಗೆ ನಡುಕ ಶುರುವಾಗಿದೆ. ಹೌದು, ವಿಯೆಟ್ನಾಂ ಮೂಲದ ಕಾರು ತಯಾರಿಕಾ ಕಂಪನಿಯಾದ ವಿನ್‌ಫಾಸ್ಟ್ ಎಂಬ ಕಂಪನಿ ಭಾರತದ ಮಾರುಕಟ್ಟೆಗೆ ಸದ್ಯದಲ್ಲೇ ಪ್ರವೇಶ ಮಾಡಲಿದ್ದು, ಬಹುತೇಕರ ಮೆಚ್ಚಿನ ಕಾರು ಇದಾಗಿರಲಿದೆ ಎಂದು ಕಾರು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ವಿನ್‌ಫಾಸ್ಟ್ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿಯಾಗಿದ್ದು ವಿದೇಶಗಳಲ್ಲಿ ಟೆಸ್ಲಾ ಕಾರುಗಳ ಪೈಪೋಟಿಯಾಗಿದೆ. ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ವಿಯೆಟ್ನಾಂ ಕಂಪನಿ ವಿನ್‌ಫಾಸ್ಟ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬ ಸುದ್ದಿ ಹೊರಬಿದ್ದಿರುವುದು ಟೆಸ್ಲಾ ಎದೆಯಲ್ಲೂ ನಡುಕ ಹುಟ್ಟಿಸಿರುವುದರ ಜೊತೆಗೆ ಭಾರತೀಯ ಕಾರು ಪ್ರೇಮಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ವಿನ್‌ಫಾಸ್ಟ್ ಕಂಪನಿಯು 2017 ರಿಂದ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಆರಂಭಿಸಿದ್ದು ಜಾಗತಿಕವಾಗಿ ಹರಡಿಕೊಂಡಿರುವ ವಿಯೆಟ್ನಾಂ ದೇಶದ ಒಂದೇ ಒಂದು ಕಾರು ನಿರ್ಮಾಣ ಕಂಪನಿಯಾಗಿದೆ. ವಿನ್‌ಫಾಸ್ಟ್ ಕಂಪನಿಯು ಆರಂಭದಲ್ಲಿ ಬಿಎಂಡಬ್ಲ್ಯೂ ಕಂಪನಿಯ ಬೇಸ್ ಮಾಡೆಲ್ ಕಾರುಗಳು ಹಾಗೂ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ವಿಯೆಟ್ನಾಂ ನಲ್ಲಿ ಮಾರಾಟ ಮಾಡುತ್ತಿತ್ತು. ಆದರೆ ಕೆಲವೇ ಸಮಯಗಳಲ್ಲಿ ತಮ್ಮದೇ ಸ್ವಂತ ಎಲೆಕ್ಟ್ರಿಕ್ ಕಾರುಗಳನ್ನು ಸಹ ತಯಾರಿಸಲು ಆರಂಭ ಮಾಡಿತು.

2021ರಲ್ಲಿ ವಿನ್‌ಫಾಸ್ಟ್ ತನ್ನ ಮೊದಲ ಮೂರು ಎಲೆಕ್ಟ್ರಿಕ್ ಮಾಡೆಲ್ ಕಾರುಗಳು, ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಒಂದು ಎಲೆಕ್ಟ್ರಿಕ್ ಬಸ್ ತಯಾರಿಸಿ ಅವುಗಳನ್ನು ಮೊದಲ ಬಾರಿಗೆ ಮಾರಾಟ ಮಾಡಲು ಆರಂಭಿಸಿತು. ಮೊದಲು ಮಾರಾಟ ಮಾಡಿದ ಮೂರು ಕಾರುಗಳಲ್ಲಿ ಎರಡು ಕಾರುಗಳನ್ನು ಕಂಪನಿಯು ಒಂದು ವರ್ಷದ ನಂತರ ಅಂದರೆ 2022 ರಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಿದೆ.
ಕಂಪನಿಯು ಈಗಾಗಲೇ ತನ್ನ ಶೋ ರೂಮ್‌ಗಳನ್ನು ಯುಎಸ್, ಕೆನಡಾ ಮತ್ತು ಯೂರೋಪ್ ದೇಶಗಳಲ್ಲಿ ಸ್ಥಾಪಿಸಿದೆ. ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ವಿಪರೀತವಾಗಿ ಬೆಳವಣಿಗೆ ಆಗುತ್ತಿರುವುದರಿಂದ ಭಾರತದಲ್ಲೂ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ವಿನ್‌ಫಾಸ್ಟ್ ಕಾರು ತಯಾರಿಕಾ ಕಂಪನಿಯು ಸಿದ್ಧವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಭಾರತದಲ್ಲಿ ವಿನ್‌ಫಾಸ್ಟ್ ಕಂಪನಿಯು ತನ್ನ ಮೂರು ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಎಂದು ತಿಳಿದು ಬಂದಿದೆ. ಈ ಎಲ್ಲಾ ಮಾದರಿಗಳನ್ನು ಸಹ ಸಿಬಿಯು ಯೂನಿಟ್ ಆಗಿ ಆರಂಭದ ಘಟ್ಟದಲ್ಲಿ ತರಲಿದ್ದು ಇದರ ಬೆಳವಣಿಗೆಯನ್ನು ಅವಲೋಕಿಸಿದ ನಂತರ ಇತರ ಯೋಜನೆಗಳನ್ನು ಭಾರತದಲ್ಲಿ ಕಂಪನಿಯು ಕೈಗೊಳ್ಳಲಿದೆ. ಭಾರತದಲ್ಲಿ ವಿನ್‌ಪಾಸ್ಟ್ ಕಂಪನಿ ಕಡೆಯಿಂದ ನಿರೀಕ್ಷಿಸಲಾತ್ತಿರುವ ಪ್ರಮುಖ ಮೂರು ಕಾರುಗಳೆಂದರೆ ಅದು ವಿನ್‌ಫಾಸ್ಟ್ ವಿಎಫ್7, ವಿನ್‌ಫಾಸ್ಟ್ ವಿಎಫ್8 ಮತ್ತು ವಿನ್‌ಫಾಸ್ಟ್ ವಿಎಫ್ಇ34.
ವಿನ್‌ಫಾಸ್ಟ್ ವಿಎಫ್7 ಒಂದು ಎಲೆಕ್ಟ್ರಿಕ್ ಎಸ್‌ಯುವಿ ಆಗಿದ್ದು ಇದರ ಬೆಲೆ ಎಕ್ಸ್ ಶೋ ರೂಮ್ ಸುಮಾರು 50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಇದರ ಮತ್ತೊಂದು ಕಾರಾದ, ವಿನ್‌ಫಾಸ್ಟ್ ವಿಎಫ್8 ಕೂಪೆ ಶೈಲಿಯ ಎಸ್‌ಯುವಿ ಆಗಿರಲಿದ್ದು ಇದು ವಿನ್‌ಫಾಸ್ಟ್ ವಿಎಫ್7 ಗಿಂತಲೂ ಗಾತ್ರದಲ್ಲಿ ದೊಡ್ಡದಾಗಿರಲಿದೆ. ಇದರ ಅಂದಾಜು ಬೆಲೆ ಎಕ್ಸ್ ಶೋ ರೂಮ್ 60 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications