NH-24ನಲ್ಲಿ ಚಲಿಸುತ್ತಿರುವ ಕಾರಿನ ಮೇಲೆ ನಿಂತು ಪಾರ್ಟಿ: ಖ್ಯಾತ ಯೂಟ್ಯೂಬರ್ ಪ್ರಿನ್ಸ್ ಅರೆಸ್ಟ್
ದೇಶದಲ್ಲಿ ಸಿನಿಮಾ ನಟ, ನಟಿಯರು ಹಾಗೂ ಕ್ರಿಕೆಟಿಗರಿಗಿಂತ ಯೂಟ್ಯೂಬರ್ ಗಳೇ ಸೆಲೆಬ್ರಿಟಿ ಗಳಾಗುತ್ತಿದ್ದು, ತಮ್ಮದೇ ಅಭಿಮಾನಿ ಬಳಗವನ್ನು ಹೊಂದುತ್ತಿದ್ದಾರೆ. ಅವರು ಮಾಡುವ ವಿಡಿಯೋಗಳನ್ನು ಎಷ್ಟೋ ಮಂದಿ ಇಷ್ಟಪಟುತ್ತಾರೆ. ಅಂತವರೂ ಕುಚೇಷ್ಟೆ ಮಾಡಿ, ಪೋಲೀಸರ ಅತಿಥಿಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ, ಖ್ಯಾತ ಯೂಟ್ಯೂಬರ್ ಕಥೆಯು ಅದೇ ಆಗಿದೆ.
ಇತ್ತೀಚೆಗೆ, ಖ್ಯಾತ ಯೂಟ್ಯೂಬರ್‌ನ ವೀಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅದರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಕಾರಿನ ಮೇಲೆ ಪಾರ್ಟಿ ನಡೆಸುತ್ತಿರುವುದು ಕಂಡುಬಂದಿದೆ. ತಕ್ಷಣ ಎಚ್ಛೆತ್ತುಕೊಂಡ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಆರೋಪಿಸಿದ ಮೇಲೆ ಶುಕ್ರವಾರ ಆ ಯೂಟ್ಯೂಬರ್‌ನನ್ನು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಘಟನೆ ನಮ್ಮ ರಾಷ್ಟ್ರ ರಾಜಧಾನಿ ದೆಹಲಿಯ ಹೆದ್ದಾರಿಯಲ್ಲಿ ನಡೆದಿದೆ.

ಪ್ರಿನ್ಸ್ ದೀಕ್ಷಿತ್ ಬಂಧಿತ ಯೂಟ್ಯೂಬರ್ ಆಗಿದ್ದು, ದೆಹಲಿ ಪೊಲೀಸರಿಗೆ ವಿಚಾರಣೆ ವೇಳೆ, ಕಳೆದ ವರ್ಷದ ನವೆಂಬರ್ 16ರಂದು ಬರ್ತ್‌ಡೇ ಪಾರ್ಟಿ ಸಂದರ್ಭದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾನೆ. ತನ್ನ ಸ್ನೇಹಿತರೊಂದಿಗೆ ರಾಷ್ಟ್ರಿಯ ಹೆದ್ದಾರಿ (NH-24)ನಲ್ಲಿ ಚಲಿಸುವ ಕಾರಿನ ಮೇಲೆ ನಿಂತು, ಸಂಚಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ಮತ್ತು ಗೂಂಡಾಗಿರಿ ವರ್ತನೆ ತೋರಿಸಿದ ಕಾರಣಕ್ಕಾಗಿ ಪೊಲೀಸರು ಕೇಸ್ ದಾಖಲಿಸಿದ್ದರು.
ಇಷ್ಟೇ ಅಲ್ಲದೆ, ಹುಟ್ಟುಹಬ್ಬದ ಆಚರಣೆ ವೇಳೆ, ರಸ್ತೆಯಲ್ಲಿ ಗಲಾಟೆ ಮಾಡಿದ್ದ ಯೂಟ್ಯೂಬರ್ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ರೀತಿಯ ಕೆಲಸಗಳನ್ನು ಮಾಡಬೇಡಿ ಎಂದು ಪ್ರಿನ್ಸ್ ದೀಕ್ಷಿತ್ ನಡೆಸುವ ಯೂಟ್ಯೂಬ್ ವಾಹಿನಿಯ ಫಾಲೋವರ್ಸ್‌ಗೆ ತಿಳಿ ಹೇಳಿದ್ದಾರೆ. ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ. ಇಂತಹ ಸಂಚಾರಿ ನಿಯಮ ಉಲ್ಲಂಘನೆ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಅದಕ್ಕೆ ಕಡಿವಾಣ ಅಗತ್ಯವಾಗಿದೆ.
ಇದನ್ನು ಹೋಲಿಕೆಯಾಗುವ ಮತ್ತೊಂದು ಘಟನೆ ದೆಹಲಿ ಪಕ್ಕದ ಹರಿಯಾಣ ರಾಜ್ಯದಲ್ಲಿ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಗುರುಗ್ರಾಮದಲ್ಲಿ ಚಲಿಸುವ ಕಾರಿನಿಂದ ನೋಟುಗಳನ್ನು ಎಸೆದ ಪ್ರಕರಣದಲ್ಲಿ ಜೋರಾವರ್ ಸಿಂಗ್ ಕಲ್ಸಿ ಹಾಗೂ ಗುರುಪ್ರೀತ್ ಸಿಂಗ್ ಎಂಬುವವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಬಳಸಿದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ವಾಹನ ಚಲಾಯಿಸುವಾಗ ಗಮನಿಸಬೇಕಾದ ಪ್ರಮುಖಾಂಶಗಳು ಯಾವುದೆಂದು ನೋಡುವುದಾದರೆ, ವಾಹನ ಕಡ್ಡಾಯವಾಗಿ ನೊಂದಣಿಯಾಗಿರಬೇಕು. ನೋಂದಣಿ ಸಂಖ್ಯೆ ಸರಿಯಾಗಿ ಕಾಣಬೇಕು.ವಾಹನ ಒಳ್ಳೆಯ ಕಂಡೀಷನ್ ನಲ್ಲಿ ಇರಬೇಕು. ಜೊತೆಗೆ ವಿಮೆ ಹೊಂದಿರಬೇಕು. ಮದ್ಯಪಾನ ಮಾಡಿ, ವಾಹನ ಓಡಿಸಬಾರದು. ಇದು ಚಾಲಕ ಅಥವಾ ಇತರರ ಪ್ರಾಣಕ್ಕೆ ಹಾನಿಯಾಗಬಹುದು. ಅಲ್ಲದೆ, ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಪರವಾನಿಗೆ ಪತ್ರದಲ್ಲಿ ನಮೂದಿಸಿದ ವಾಹನವನ್ನು ಮಾತ್ರ ಚಲಾಯಿಸಲು ಅರ್ಹರಿರುತ್ತೀರಿ ಎಂಬುದನ್ನು ಮನದಲ್ಲಿಟ್ಟುಕೊಳ್ಳಬೇಕು.
ನೀವು ಚಲಾಯಿಸುವ ಕಾರು ಯಾವೆಲ್ಲ ಅಂಶಗಳನ್ನು ಹೊಂದಿರಬೇಕೆಂದರೆ, ಅದನ್ನು ಕಡ್ಡಾಯವಾಗಿ ನೋಂದಣಿ ಮಾಡಿರಬೇಕು. ನಂಬರ್ ಪ್ಲೇಟ್ ಹಾಗೂ ಹೆಡ್‍ಲೈಟ್ ಗಳನ್ನು ಸರಿಯಾಗಿ ಹೊಂದಿರಬೇಕು. ಸೂರ್ಯಾಸ್ತ ಒಂದು ಗಂಟೆ ಬಳಿಕ ಹಾಗೂ ಸೂರ್ಯೋದಯದ 1 ಗಂಟೆ ಮುಂಚಿತವಾಗಿ ಕಾರಿನ ಲೈಟ್‍ಗಳನ್ನು ಹಾಕಿಕೊಂಡು ಓಡಿಸಬೇಕು. ಬ್ರೇಕ್‍ಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು.ಜೊತೆಗೆ ಟೈರ್ ಗಳು ಉತ್ತಮ ಸ್ಥಿತಿಯಲ್ಲಿರಬೇಕು. ಹಾರ್ನ್ ಸರಿಯಾಗಿ ಇರಬೇಕು ಹಾಗೂ ಸ್ಟಿಯರಿಂಗ್ ಸುಸ್ಥಿತಿಯನ್ನು ಹೊಂದಬೇಕು.
ಇನ್ನು, ಪ್ರತಿಯೊಬ್ಬರ ಪ್ರಾಣವು ಮುಖ್ಯವಾಗಿದ್ದು, ವಾಹನಗಳನ್ನು ಚಲಾಯಿಸುವಾಗ ಎಚ್ಚರ ತುಂಬಾ ಅಗತ್ಯವಾಗಿದೆ. ಸರಿಯಾದ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ವಾಹನಗಳನ್ನು ಓಡಿಸಿದರೆ, ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಬಹುದು. ಈ ಖ್ಯಾತ ಯೂಟ್ಯೂಬರ್ ಪ್ರಿನ್ಸ್ ಮಾಡಿದ ರೀತಿಯಲ್ಲಿ ಯಾರು ಕೂಡ ಹೆದ್ದಾರಿಯಲ್ಲಿ ಹೆದ್ದಾರಿಯಲ್ಲಿ ದುರ್ವರ್ತನೆ ತೋರುವ ಮೂಲಕ ಅಕ್ಕಪಕ್ಕದ ವಾಹನ ಚಾಲಕರಿಗೆ ತೊಂದರೆ ನೀಡದಿರಿ.


Click it and Unblock the Notifications