ಸುಜುಕಿ ಹಯಾಟೆಗೆ ಸಲ್ಮಾನ್ ಖಾನ್ ರಾಯಭಾರಿ
ಇದೀಗ ದಬಾಂಗ್ 2 ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಭರಾಟೆಯ ನಡುವೆ ಸಲ್ಮಾನ್ ಹಯಾಟೆ ಮೂಡಿಬರಲಿದೆ. ಇದ್ಯಾವುದು ಹಯಾಟೆ? ಕನ್ನಡ ಪದಕೋಶದಲ್ಲಿಲ್ಲದ ಪದವೆಂದು ಕೋಪಿಸಕೊಳ್ಳಬೇಡಿ. ಬಾಲಿವುಡ್ ನಟ ಇನ್ಮುಂದೆ ಸುಜುಕಿ ಹಯಾಟೆ ಬೈಕ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಲಿವುಡ್‌ನ ಜನಪ್ರಿಯ ನಟ ಸಲ್ಮಾನ್ ಖಾನ್‌ರನ್ನು ಸುಜುಕಿ ಮೋಟರ್‌ಸೈಕಲ್ ಇಂಡಿಯಾ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಕಂಪನಿಯ ಭಾರತದ ವಹಿವಾಟಿಗೆ ದಬಾಂಗ್ ಮತ್ತು ಬಾಡಿಗಾರ್ಡ್ ಮುಂತಾದ ಚಲನಚಿತ್ರದ ಜನಪ್ರಿಯ ನಟನನ್ನು ಬ್ರಾಂಡ್ ಅಂಬಾಸಡರ್ ಆಗಿ ನೇಮಕಮಾಡಿದೆ.
ಡಿಟರ್ಜೆಂಟ್ ಬ್ರಾಂಡ್, ತಂಪುಪಾನೀಯದಿಂದ ಹಿಡಿದು ವಾಹನ ಕಂಪನಿವರೆಗೂ ಸಲ್ಮಾನ್ ಖಾನ್ ಬೇಡಿಕೆಯಲ್ಲಿರುವ ನಟ. "ನಮ್ಮ ಉತ್ಪನ್ನಗಳ ಪ್ರಚಾರಕ್ಕೆ ಸಲ್ಮಾನ್ ಖಾನ್ ಅತ್ಯಂತ ಸೂಕ್ತ ಮಾನವೀಯ ವ್ಯಕ್ತಿ" ಎಂದು ಸುಜುಕಿ ಮೋಟರ್‌ಸೈಕಲ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಅನು ಅನಾಮಿಕಾ ಹೇಳಿದ್ದಾರೆ.
ಶೀಘ್ರದಲ್ಲಿ ದೇಶದ ರಸ್ತೆಗಿಳಿಯಲಿರುವ ಸುಜುಕಿ ಹಯಾಟೆ ಜಾಹೀರಾತುಗಳಲ್ಲಿ ದೇಶದ ಜನರನ್ನು ಸಲ್ಮಾನ್ ಖಾನ್ ಮೋಡಿ ಮಾಡುವ ನಿರೀಕ್ಷೆಯಿದೆ.
ಸುಜುಕಿ ಮೋಟರ್‌ಸೈಕಲ್ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಕೂಡ ಹೆಚ್ಚಿಸಲು ನಿರ್ಧರಿಸಿದೆ. ಕಂಪನಿಯು ಈಗ ವರ್ಷಕ್ಕೆ ಸುಮಾರು 3.6 ಲಕ್ಷ ವಾಹನ ಉತ್ಪಾದಿಸುತ್ತಿದ್ದು, 2013ಕ್ಕೆ ಇದನ್ನು 5.4 ಲಕ್ಷಕ್ಕೆ ತಲುಪಿಸಲು ನಿರ್ಧರಿಸಿದೆ.
ಇದರೊಂದಿಗೆ ಕಂಪನಿಯು ಹರ್ಯಾಣದಲ್ಲಿ 2 ಸಾವಿರ ಕೋಟಿ ಡಾಲರ್ ವೆಚ್ಚದ ಎರಡನೇ ಘಟಕವನ್ನೂ ನಿರ್ಮಿಸಲಿದೆ. ಈ ಘಟಕ 2014ರಲ್ಲಿ ವಹಿವಾಟು ಆರಂಭಿಸಲಿದೆ.
ಇದೀಗ ಬಂದ ಸುದ್ದಿ: ಸುಜುಕಿ ಹಯಾಟೆ ಬೈಕನ್ನು ಏಪ್ರಿಲ್ 23ರಂದು ಅನಾವರಣಗೊಳಿಸುವುದಾಗಿ ಕಂಪನಿ ಕಡೆಯಿಂದ ಅಧಿಕೃತ ಸುದ್ದಿ ಬಂದಿದೆ.


Click it and Unblock the Notifications









