ಬರುತ್ತಿದೆ ಮಗದೊಂದು ವೆಸ್ಪಾ ಸ್ಕೂಟರ್ - ಫ್ಲೈ 125
ಇಟಲಿಯ ಐಕಾನಿಕ್ ಹಾಗೂ ಇತಿಹಾಸ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಪಿಯಾಜಿಯೊ, ಜಾಗತಿಕ ಮಟ್ಟದಲ್ಲಿ ಅನೇಕ ಪ್ರಖ್ಯಾತ ಮಾದರಿಗಳನ್ನು ಮಾರಾಟ ಮಾಡುತ್ತಿದೆ.
ಈ ಪೈಕಿ ಕೆಲವು ವರ್ಷಗಳ ಹಿಂದೆಯಷ್ಟೇ ಜನಪ್ರಿಯ ವೆಸ್ಪಾ ಮಾದರಿಯನ್ನು ದೇಶಕ್ಕೆ ಪರಿಚಯಿಸಿತ್ತು. ವೆಸ್ಪಾ ಅಲ್ಲದೆ ಜಾಗತಿಕ ಮಟ್ಟದಲ್ಲಿ ಗಿಲೆರಾ, ಡೆರ್ಬಿ, ಮೊಟೊ ಗುಝಿ, ಎಪ್ರಿಲಿಯಾಗಳಂತಹ ಬ್ರಾಂಡ್‌ಗಳನ್ನು ಪಿಯಾಜಿಯೊ ಹೊಂದಿದೆ.

ಈಗ ಭಾರತಕ್ಕೆ ಎಲ್‌ಎಕ್ಸ್, ವಿಎಕ್ಸ್ ಹಾಗೂ ಎಸ್ ಜೊತೆಗೆ ಕೆಲವು ಸೀಮಿತ ವೆಸ್ಪಾ ಮಾದರಿಗಳನ್ನು ಪರಿಚಯಿಸಿರುವ ಪಿಯಾಜಿಯೊ, ದೇಶದಲ್ಲಿ ಮಗದೊಂದು ವೆಸ್ಪಾ ಫ್ಲೈ 125 ಸ್ಕೂಟರ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ವಿಶೇಷವೆಂದರೆ ಫ್ಲೈ 125 ಸ್ಕೂಟರ್ ಭಾರತದಲ್ಲೇ ನಿರ್ಮಿಸಲಾಗುತ್ತಿದ್ದು, ಬಳಿಕ ವಿದೇಶಗಳಿಗೆ ರಫ್ತು ಮಾಡಲಾಗುವುದು. ಇದು ದೇಶದಲ್ಲಿ ಸ್ಪರ್ಧಾತ್ಮಕ ಬೆಲೆ ಕಾಪಾಡಲು ಸಂಸ್ಥೆಗೆ ನೆರವಾಗಲಿದೆ.
ಕಳೆದ ಕೆಲವು ವರ್ಷಗಳನ್ನು ಅವಲೋಕಿಸಿದಾಗ ದೇಶದ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಹೋಂಡಾ ಅಕ್ಟಿವಾದಂತಹ ಸ್ಕೂಟರ್‌ಗಳಿಗೆ ದೇಶದಲ್ಲಿ ಅತಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ. ಹಾಗಿರುವಾಗ 125 ಸಿಸಿ ವಿಭಾಗದಲ್ಲಿ ಹೊಸ ವೆಸ್ಪಾ ಸ್ಕೂಟರ್ ಹೇಗೆ ಮೋಡಿ ಮಾಡಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.

ಉಳಿದೆಲ್ಲ ವೆಸ್ಪಾ ಮಾದರಿಯಂತೆ ಫ್ಲೈ 125 ಸ್ಕೂಟರ್ ಕೂಡಾ ಪ್ರೀಮಿಯಂ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೂ ವೆಸ್ಪಾಗಿಂತಲೂ ಕಡಿಮೆ ದರ ಹೊಂದಿರಲಿದ್ದು, ಹೆಚ್ಚಿನ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದಾಗಿದೆ.
ಎಂಜಿನ್
ಹೊಸ ಸ್ಕೂಟರ್ 125 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 10 ಬಿಎಚ್‌ಪಿ (10.6 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ ಸಿವಿಟಿ ಗೇರ್ ಬಾಕ್ಸ್ ಬಾಕ್ಸ್ ಕೂಡಾ ಇರಲಿದೆ.


Click it and Unblock the Notifications








